ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ಆರೋಪದ ಮೇಲೆ ಮಹಿಳೆಯ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಳ ತಾಯಿ ತೆರೇಸಮ್ಮ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪತಿ ಆಂಟನಿ ಕಿರಣ್ ಮತ್ತು ಆತನ ತಾಯಿಯನ್ನು ಬುಧವಾರ ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಅಂತೋಣಿ ಕಿರಣ್ ಪತ್ನಿ ನಿತ್ಯಾ ನಿರ್ಮಲ(25) ಎಂಬುವವರು ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇವರಿಗೆ ಒಂದು ವರ್ಷದ ಮಗು ಇದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಣ್ಣೇನಹಳ್ಳಿಯ ತೆರೇಸಮ್ಮ ಎಂಬುವವರ 2ನೇ ಪುತ್ರಿಯನ್ನು ಎರಡೂವರೆ ವರ್ಷಗಳ ಹಿಂದೆ ಕೂಡ್ಲೂರಿನ ಕಿರಣ್‌ಗೆ ಮದುವೆ ಮಾಡಿ ಕೊಟ್ಟಿದ್ದರು.
“ಕೆಲವು ದಿನಗಳಿಂದ ಪತಿ ಕಿರಣ್, ನನ್ನ ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಬೇರೆಯವರನ್ನು ಮದುವೆಯಾಗಿದ್ದರೆ ಲಕ್ಷಾಂತರ ವರದಕ್ಷಿಣೆ ಸಿಗುತ್ತಿತ್ತು. ಮನೆಕಟ್ಟುತ್ತಿದ್ದೇನೆ, ಈಗಲಾದರೂ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಎರಡ್ಮೂರು ಬಾರಿ ನ್ಯಾಯ ಪಂಚಾಯಿತಿಯೂ ನಡೆದಿತ್ತು. ಮಗಳನ್ನು ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದೆವು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿತ್ತು. ಈ ಬಗ್ಗೆ ನಿರ್ಮಲ ನನ್ನೊಂದಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ಆದರೆ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಬಡವಿ ತಾಯಿ ನಾನು ಏನೂ ಮಾಡಲಾಗದೆ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆಂದು ಅಂಜಿ ಮಗಳನ್ನು ಸಮಾಧಾನಿಸುತ್ತಲೇ ಬಂದಿದ್ದೆ” ಎಂದು ಮೃತಳ ತಾಯಿ ತೆರೇಸಮ್ಮ ಕಣ್ಣೀರು ಹಾಕಿದ್ದಾರೆ.
“ಮಂಗಳವಾರ ಬೆಳಿಗ್ಗೆ 10ಗಂಟೆಗೆ ನನಗೆ ಪೋನ್ ಮಾಡಿ, ʼಹಣ ತರುವಂತೆ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಸಾಯಿಸುತ್ತೇನೆಂದು ಗಂಡ ಹೊಡೆದಿದ್ದಾರೆ. ಬಂದು ನನ್ನನ್ನು ಕರೆದುಕೊಂಡು ಹೋಗುʼ ಎಂದು ಹೇಳಿದ್ದಳು. ಶಾಲೆಯಲ್ಲಿ ಬಿಸಿಯೂಟ ತಯಾರಿ ಮಾಡುತ್ತಿದ್ದ ನಾನು ಮಗಳಿಗೆ ಸಮಾಧಾನ ಹೇಳಿ, ಆಮೇಲೆ ಬರುತ್ತೇನೆಂದು ಪೋನ್ ಕಟ್ ಮಾಡಿದ್ದೆ. ಶಾಲೆಯ ಮಧ್ಯಾಹ್ನದ ಅಡುಗೆ ಕೆಲಸ ಮುಗಿದ ನಂತರ ಮಗಳಿಗೆ ಪೋನ್ ಮಾಡಿದರೆ ಸ್ವಿಚ್‌ಆಫ್ ಆಗಿತ್ತು” ಎಂದು ದುಃಖಿಸುತ್ತಿದ್ದಾರೆ.
ಮಗಳ ಫೋನ್ ಸ್ವಿಚ್‌ಆಫ್ ಆಗಿದ್ದನ್ನು ಕಂಡು ಗಾಬರಿಯಾದ ತೆರೇಸಮ್ಮ ಕೂಡ್ಲೂರಿನ ಮಗಳ ಮನೆಯ ಅಕ್ಕಪಕ್ಕದವರಿಗೆ ಫೋನ್ ಮಾಡಿದಾಗ ಮಗಳ ಸಾವಿನ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ತಾಯಿ ತನ್ನ ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದ ವೇಳೆ ಪತ್ನಿ ನಿರ್ಮಲಾ ಲೋ-ಬಿಪಿಯಿಂದ ಸಾವನ್ನಪ್ಪಿದ್ದಾಳೆಂದು ಹೇಳಿದ್ದು, ತರಾತುರಿಯಲ್ಲಿ ಅಂತ್ಯ ಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರೆಂಬುದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅನುಮತಿ ನಿರಾಕರಣೆ ನಡುವೆಯೂ ಬೃಹತ್ ‘ಕರಾಳ ದಿನ’ ರ್‍ಯಾಲಿ ನಡೆಸಿದ ಎಂಇಎಸ್
“ಆಂಟನಿ ಮತ್ತು ಅವರ ತಾಯಿ ನನ್ನ ಮಗಳು ನಿತ್ಯಾಳಿಗೆ ದಿನ ಬೆಳಗಾದರೆ ಚಿತ್ರಹಿಂಸೆ ನೀಡುತ್ತಿದ್ದರು. ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆಕೆಯ ದೇಹದ ಮೇಲಿನ ಗಾಯದ ಗುರುತುಗಳು ಕೊಲೆಯಾಗಿರುವುದಕ್ಕೆ ಸಾಕ್ಷಿಯಾಗಿವೆ. ತನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ತೆರೇಸಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಹಶೀಲ್ದಾರ್ ಮಂಜುನಾಥ್ ಮಹಜರು ನಡೆಸಿದ್ದು, ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸರು ವರದಕ್ಷಿಣೆ ಕಿರುಕುಳ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.