ತಿಳುವಳಿಕೆ ಪತ್ರ ಹೊರಡಿಸಿದ ಬಳಿಕ, ಭೂಮಿ ದಾನಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ ಅವರಿಗೆ ಅರ್ಜಿ ಸಲ್ಲಿಸಲು 7 ದಿನ ಕಾಲಾವಕಾಶ ಇರುತ್ತದೆ. ಆಕ್ಷೇಪಣೆಗಳಿದ್ದವರು ಅರ್ಜಿ ಸಲ್ಲಿಸಬಹುದು.
ವಕ್ಫ್ ಬೋರ್ಡ್ ಜಮೀನನ್ನ ಹೇಗೆ ಪಡೆದುಕೊಳ್ಳತ್ತೆ ಅನ್ನೋ ಬಗ್ಗೆ ಈಗಗಾಲೇ ಹಲವಾರು ಚರ್ಚೆಗಳು ನಡೆದಿವೆ. ನಡೆಯುತ್ತಿವೆ. ಆದರೆ, ಯಾವುದು ಸತ್ಯ, ಯಾವುದು ಸುಳ್ಳು. ವಾಸ್ತವ ಏನು ಎಂಬ ಬಗ್ಗೆ ಇನ್ನೂ ಗೊಂದಲಗಳು ಉಳಿದಿವೆ. ಅಂದಹಾಗೆ, ವಕ್ಫ್ ಎಂಬುದು ಅರೇಬಿಕ್ ಪದ. ಇದರರ್ಥ ದೇವರ ಹೆಸರಿನಲ್ಲಿ ಸಮರ್ಪಿತವಾದ ವಸ್ತು ಅಥವಾ ಲೋಕೋಪಕಾರಕ್ಕಾಗಿ ನೀಡಿದ ಹಣ. ಚರ ಮತ್ತು ಸ್ಥಿರ ಆಸ್ತಿಗಳೆರಡೂ ಇದರ ವ್ಯಾಪ್ತಿಗೆ ಬರುತ್ತವೆ. ವಕ್ಫ್‌ಗೆ ಯಾವುದೇ ಮುಸ್ಲಿಂ ವ್ಯಕ್ತಿಯು ಹಣ, ಭೂಮಿ, ಮನೆ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನು ದಾನ ಮಾಡಬಹುದು. ಈ ಆಸ್ತಿಗಳನ್ನು ನಿರ್ವಹಿಸಲು ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ವಕ್ಫ್ ಸಂಸ್ಥೆಗಳಿವೆ.
ಇಸ್ಲಾಂನ ತಜ್ಞರ ಪ್ರಕಾರ, ವಕ್ಫ್ ಮಂಡಳಿಗೆ ದಾನ ಮಾಡಿದ ಆಸ್ತಿಯ ಉದ್ದೇಶವು ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದು. ಅವರ ಶಿಕ್ಷಣ, ನಿರ್ಮಾಣ, ದುರಸ್ತಿ ಅಥವಾ ಮಸೀದಿಗಳ ನಿರ್ವಹಣೆ ಹಾಗೂ ಇತರ ದತ್ತಿ ಕಾರ್ಯಗಳಿಗೆ ವ್ಯವಸ್ಥೆ ಮಾಡುವುದು. ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆಯ ಪ್ರಕಾರ, ದೇಶದಲ್ಲಿ ಒಟ್ಟು 30 ವಕ್ಫ್ ಮಂಡಳಿಗಳಿವೆ. ಅದರ ಬಹುತೇಕ ಕೇಂದ್ರ ಕಚೇರಿಗಳು ದೆಹಲಿಯಲ್ಲಿವೆ. ಕೇಂದ್ರ ಸರ್ಕಾರದ ಸೆಂಟ್ರಲ್ ವಕ್ಫ್ ಕೌನ್ಸಿಲ್ ಈ ವಕ್ಫ್ ಮಂಡಳಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತದೆ.
ಹಾಗಾದ್ರೆ, ಒಂದು ಭೂಮಿ ದಾನ ಕೊಟ್ಟ ನಂತರ ಹೇಗೆ ವಕ್ಪ್ ಬೋರ್ಡ್‌ನಲ್ಲಿ ನೋಂದಣಿ ಆಗತ್ತದೆ? ಯಾವುದೇ ಭೂಮಿಯು ವಕ್ಫ್ ಸಂಸ್ಥೆಯ ಅಧೀನಕ್ಕೆ ಹೋಗಬೇಕೆಂದರೆ, ಆ ಭೂಮಿಯ ಮಾಲೀಕರು, ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನ ವಕ್ಫ್ ಮಂಡಳಿಗೆ ನೀಡಬೇಕು. ಜೊತೆಗೆ, ಆ ಭೂಮಿಯು ಯಾವ ಸ್ಥಳೀಯ ಸಂಸ್ಥೆಗೆ (ಗ್ರಾಮ ಪಂಚಾಯತಿ/ಪಟ್ಟಣ ಪಂಚಾಯತಿ/ಪುರಸಭೆ/ತಹಶೀಲ್ದಾರ್ ಕಚೇರಿ/ನಗರಸಭೆ ಕಚೇರಿ) ವಕ್ಫ್ ಕಾಯ್ದೆಯ ಕಲಂ 36ರ ಅನ್ವಯ ಅರ್ಜಿ ಸಲ್ಲಿಸಬೇಕು. ಎಲ್ಲ ದಾಖಲಾತಿಗಳ ಪರಿಷ್ಕರಣೆ ಮಾಡಿಸಬೇಕು. ಬಳಿಕ, ತಹಶೀಲ್ದಾರ್ ಕಚೇರಿಯು ಸಾರ್ವಜನಿಕ ತಿಳುವಳಿಗೆ ಪತ್ರವನ್ನು ಹೊರಡಿಸುತ್ತದೆ. ಅದರಂತೆ, ಆ ಭೂಮಿಯನ್ನು ದಾನ ಮಾಡುವ ವಿಚಾರದಲ್ಲಿ ಭೂಮಿಗೆ ಸಂಬಂಧಪಟ್ಟ ಯಾರಿಗಾದರೂ ತಕರಾರು ಅಥವಾ ಆಕ್ಷೇಪಣೆಗಳಿವೆಯೇ ಎಂದು ತಿಳಿದುಕೊಳ್ಳಲಾಗುತ್ತದೆ.
ತಿಳುವಳಿಕೆ ಪತ್ರ ಹೊರಡಿಸಿದ ಬಳಿಕ, ಭೂಮಿ ದಾನಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ ಅವರಿಗೆ ಅರ್ಜಿ ಸಲ್ಲಿಸಲು 7 ದಿನ ಕಾಲಾವಕಾಶ ಇರುತ್ತದೆ. ಅಂತಹವರು ವಕ್ಫ್ ಕಾಯ್ದೆಯ ಕಲಂ 41ರ ಅನ್ವಯ ಆಕ್ಷೇಪಣೆ ಸಲ್ಲಿಸಬಹುದು. ಅದರನ್ನು ವಿಚಾರನೆ ನಡೆಸುವುದು ತಾಲೂಕು ಕಚೇರಿಯ ಕೆಲಸ.
ಈ ಪ್ರಕ್ರಿಯೆಗಳಲ್ಲಿ ತಹಶೀಲ್ದಾರ್, ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಭೂಮಿ ವರ್ಗಾವಣೆ ಬಗ್ಗೆ ಪರಿಶೀಲನೆ ಮಾಡುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ವಕ್ಫ್ ಆಸ್ತಿಯಾಗಿ ಅಧಿಸೂಚನೆ ಹೊರಡಿಸೋಕೆ ಕಂದಾಯ ಇಲಾಖೆಯಿಂದ ಪ್ರಸ್ತಾವನೆ ಹೋಗತ್ತೆ. ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ಮೇಲೆ ವಕ್ಫ್ ಆಸ್ತಿ ಅಧಿಸೂಚನೆ ಆಗತ್ತೆ. ಇಲ್ಲೂ ಕೂಡ ಗೆಜೆಟ್ ನೋಟಿಫಿಕೇಷನ್ ಮಾಡಿಸೋಕೆ 1 ವರ್ಷ ಕಾಲಾವಕಾಶ ಕೂಡ ಇರುತ್ತದೆ. ಈ ಒಂದು ವರ್ಷದ ಅವಧಿಯಲ್ಲಿಯೂ ಯಾರಿಗಾದರೂ ಆಕ್ಷೇಪಣೆ ಇದ್ದರೆ, ಅಂಥಹವರು ಅರ್ಜಿ ಸಲ್ಲಿಸಬಹುದು. ಯಾರಾದರೂ ಒಬ್ಬ ವ್ಯಕ್ತಿ ಗೆಜೆಟ್ ನೋಟಿಫಿಕೇಷನ್ ಸಲ್ಲಿಸಿದರೂ, ಆ ಭೂಮಿ ವಕ್ಫ್ ಆಸ್ತಿ ಅಂತ ಆಗುವುದಿಲ್ಲ.
ಒಂದು ಆಸ್ತಿ ವಕ್ಫ್ ಆಸ್ತಿಯಾಗಿ ಪರಿವರ್ತನೆ ಆಗಬೇಕೆಂದರೆ, ಇಷ್ಟೊಂದು ನೀತಿ-ನಿಯಮಗಳಿವೆ. ಹೀಗಿರುವಾಗ, ಒಬ್ಬ ವ್ಯಕ್ತಿಯ ಆಸ್ತಿಯನ್ನ ವಕ್ಫ್ ಸಂಸ್ಥೆ ತನ್ನದು ಅಂತ ಕಬಳಿಸೋಕೆ ಸಾಧ್ಯವೇ? ಆ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆಯೇ ಒಂದು ಭೂಮಿ ವಕ್ಫ್ ಆಸ್ತಿಯಾಗಿ ಮಾರ್ಪಾಡಾಗುತ್ತದೆ. ಒಂದು ಸಲ ವಕ್ಫ್ ಆಸ್ತಿ ಅಂತ ಗುರುತಾದರೆ, ಅದು ಯಾವಾಗಲೂ ವಕ್ಫ್‌ಗೆ ಸೇರಿದ್ದೇ ಆಗಿರುತ್ತದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಆದರೂ, ಬಿಜೆಪಿಗರು ತಮ್ಮ ರಾಜಕೀಯ ಮತ್ತು ಕೋಮುದ್ವೇಷದ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಜನರ ಮನದಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಗದ್ದಲ ಎಬ್ಬಿಸುತ್ತಿದ್ದಾರೆ. ಇದೇ ವಾಸ್ತವ.