ನಮ್ಮ ರಾಜ್ಯದ ಮಾತೃ ಭಾಷೆ ಕನ್ನಡ ಉಳಿವಿಗಾಗಿ, ಅಭಿವೃದ್ಧಿಗಾಗಿ ಕನ್ನಡಿಗರಿಗೆ ಶಿಕ್ಷಣ ಉದ್ಯೋಗಗಳನ್ನು ನೀಡಬೇಕೇ ಹೊರತು ರಾಜಕಾರಣಿಗಳ ಹುಸಿ ಭಾಷಣಗಳಲ್ಲ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ಪಟ್ಟಣದ ಎಸ್‌ಎಫ್‌ಐ ಜಿಲ್ಲಾ ಕಚೇರಿ ಎದುರು 69ನೇ ಕನ್ನಡ ರಾಜ್ಯೋತ್ಸವದ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ನೆಲ, ಜಲ, ಭಾಷೆ, ಆಹಾರ, ಆರೋಗ್ಯ ಸೇರಿದಂತೆ ಘನತೆಯ ಬದುಕು ಕಟ್ಟಿಕೊಳ್ಳಲು ಉದ್ಯೋಗಗಳಲ್ಲಿ ಕನ್ನಡಿಗರಿಗೆ ಬಹುಪಾಲು ಅವಕಾಶ ಕಲ್ಪಿಸಬೇಕು. ಸ್ಥಳೀಯರಿಗೆ ಉದ್ಯೋಗ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಕರ್ನಾಟಕ ಏಕೀಕರಣ ಚಳುವಳಿಯ ಹೋರಾಟಗಾರರನ್ನು ಸ್ಮರಿಸಬೇಕು” ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಸರ್ಕಾರಿ ಶಾಲೆ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಆ ಸಂದರ್ಭದಲ್ಲಿ ಎಸ್ಎಫ್ಐ ಮಧ್ಯೆ ಪ್ರವೇಶ ಮಾಡಿ, ಹೋರಾಟ ಮಾಡಿತ್ತು. ಇದರ ಫಲವಾಗಿ ಸಾವಿರಾರು ಸರ್ಕಾರಿ ಕನ್ನಡ ಶಾಲೆಗಳು ಉಳಿದವು. ಮಾತೃಭಾಷ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರಿ ಕನ್ನಡ ಶಾಲೆಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಬೇಕು” ಎಂದು ಒತ್ತಾಯಿಸಿದರು.
“ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಕನ್ನಡ ವಿರೋಧಿಯಾಗಿದ್ದು, ಈ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣವನ್ನು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ಅಡಗಿದೆ. ಈ ಪರೀಕ್ಷೆಯಲ್ಲಿ ಇಂಗ್ಲಿಷ್, ಹಿಂದಿ ಭಾಷೆಯ ಅಭ್ಯರ್ಥಿಗಳೇ ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನಾಂಬ ಜಾತ್ರಾ ಮಹೋತ್ಸವ | ಪೌರಕಾರ್ಮಿಕರ ಮೇಲೆ ಹಲ್ಲೆ; ಪೊಲೀಸ್-ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಯಮ್ಮಿಯವರ, ಜಿಲ್ಲಾ ಮುಖಂಡರಾದ ಶೃತಿ ಆರ್ ಎಂ, ದೇವರಾಜ ಅಕ್ಕಸಾಲಿ, ಗೌತಮ ಸಾವಕ್ಕನವರ, ಕೀರ್ತನಾ ಹಿರಿಯಕ್ಕನವರ, ಮಹೇಶ್ ಮರೋಳ, ಧನುಷ್ ದೊಡ್ಡಮನಿ, ಮಾಲತೇಶ್ ರಾಣೇಬೆನ್ನೂರ, ತೇಜಸ್ ಎನ್ ಡಿ ಇದ್ದರು.