ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಶುಕ್ರವಾರ ಸಂಜೆ ನಡೆದಿದೆ.
ಮೃತಪಟ್ಟಿರುವ ಬೈಕ್ ಸವಾರನನ್ನು ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರಿಶ್ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಸಹ ಸವಾರನನ್ನು ಮೊಹಮ್ಮದ್ ಶಕೀರ್ ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಸಹ ಸವಾರ ಶಾಕೀರ್ ಪಂಪ್‌ವೆಲ್ ಬಳಿ ಇರುವ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

“KA 19 HS 1113 ನೋಂದಣಿ ಸಂಖ್ಯೆಯ ಬೈಕಿನಲ್ಲಿ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಾ, ಸಂಜೆ 4.50 ಗಂಟೆಗೆ ಮಹಾಕಾಳಿ ಪಡ್ಪು ಬಳಿ ಮೋಟಾರ್ ಸೈಕಲ್ ಸ್ಕಿಡ್ ಆಗಿದೆ. ಈ ವೇಳೆ ನೇತ್ರಾವತಿ ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ತಗಡು ಶೀಟ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಕೂಡಲೇ ಇಬ್ಬರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ಗಂಭೀರ ಗಾಯಗೊಂಡಿದ್ದ ಸಲ್ಮಾನ್ ಫಾರಿಶ್ ಆಸ್ಪತ್ರೆಯಲ್ಲಿ ನಿಧನರಾದರು. ಗಾಯಗೊಂಡಿರುವ ಶಕೀರ್ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಸಾಗರ | ಆಟೋ-ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ಮೃತ್ಯು
ಅಪಘಾತದಲ್ಲಿ ಮೃತಪಟ್ಟಿರುವ ಸಲ್ಮಾನ್ ಫಾರಿಶ್ ಅವರ ಮೃತದೇಹವು ಮಂಗಳೂರು ಜಿಲ್ಲಾ ವೆನ್ಲಾಕ್ ಶವಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ.
