ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸಜೀವವಾಗಿ ದಹನಗೊಂಡಿದ್ದಾರೆ. ಉಲುಬೇರಿಯಾ ಪಟ್ಟಣದಲ್ಲಿದ್ದ ಮನೆಯಲ್ಲಿ ಕಾಳಿ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ ಪೂಜೆಯ ವೇಳೆ ಬೆಂಕಿ ಹತ್ತಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಶನಿವಾರ ತಿಳಿಸಿದ್ದಾರೆ. ಅಗ್ನಿ ಅವಘಡದ ಮಾಹಿತಿ ಪಡೆದ ತಕ್ಷಣ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಪುಣೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ; ಪ್ರಯಾಣಿಕ ಸಜೀವ ದಹನ
ಈ ಬಗ್ಗೆ ಮಾಹಿತಿ ನೀಡಿದ ಹೌರಾದ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ರಂಜನ್ ಕುಮಾರ್ ಘೋಷ್, “ಮೂರು ಮಕ್ಕಳ (9 ವರ್ಷ, 4 ವರ್ಷ ಮತ್ತು 2.5 ವರ್ಷ) ಸುಟ್ಟ ದೇಹ ಲಭ್ಯವಾಗಿದೆ. ಹೆಚ್ಚಿನ ವೈದ್ಯಕೀಯ ಕಾರ್ಯವಿಧಾನಗಳಿಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಹೇಳಿದರು.
“ಸುಟ್ಟು ಕರಕಲಾದ ಮಕ್ಕಳ ಮೃತದೇಹವನ್ನು ಮನೆಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಗ್ನಿಶಾಮಕ ದಳದವರು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಇಲ್ಲದಿದ್ದರೆ ಈ ಘಟನೆಯಲ್ಲಿ ಹೆಚ್ಚಿನ ಮನೆಗಳು ಸುಟ್ಟುಹೋಗುವ ಸಾಧ್ಯತೆಯಿತ್ತು” ಎಂದು ತಿಳಿಸಿದ್ದಾರೆ.
