ಕರ್ನಾಟಕದಲ್ಲಿ ರೈತರ ಜಮೀನನ್ನು ವಕ್ಫ್ ಬೋರ್ಡ್ ಆಕ್ರಮಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇಲ್ಲದ ವಿವಾದವನ್ನು ಮುನ್ನೆಲೆಗೆ ತಂದು, ಗದ್ದಲ ಎಬ್ಬಿಸುತ್ತಿದೆ. ಗಲಭೆ, ಸಂಘರ್ಷಗಳು ನಡೆಯುವಂತೆ ಮಾಡಿದೆ. ವಕ್ಫ್ ಆಸ್ತಿ ವಿಚಾರ ಇಟ್ಟುಕೊಂಡು ಬಿಜೆಪಿ ಹರಡುತ್ತಿರುವ ಕೋಮುದ್ವೇಷದಿಂದ ಹಾವೇರಿ ಜಿಲ್ಲೆಯ ಕಡಕೋಳದಲ್ಲಿ ಕೋಮು ಗಲಭೆ ನಡೆದಿದೆ.
ಆದರೆ, ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ವಕ್ಫ್ ಆಸ್ತಿ ವಿಚಾರದಲ್ಲಿ ಅವರ ವರಸೆ ಬೇರೆಯೇ ಇತ್ತು. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ‘ವಕ್ಫ್ ಆಸ್ತಿ ಅಲ್ಲಾಹನದ್ದು. ಅದರ ವಿಚಾರದಲ್ಲಿ ಕಾಂಪ್ರಮೈಸ್ ಆಗಬಾರದು. ವಕ್ಫ್ ಆಸ್ತಿಗಳನ್ನು ವಕ್ಫ್ ಬೋರ್ಡ್ ವಶಪಡಿಸಿಕೊಳ್ಳಬೇಕು’ ಎಂದಿದ್ದರು. ವಕ್ಫ್ ಆಸ್ತಿ ವಿಚಾರದಲ್ಲಿ ಮುಸ್ಲಿಂ ಮುಖಂಡರಿಗೆ ಈ ರೀತಿ ಕಿವಿ ಮಾತು ಹೇಳಿದ್ದ ವಿಡಿಯೋ ದೊರೆತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈಗ ಹರಿದಾಡಿರುವ ವಿಡಿಯೋ 2022ರಲ್ಲಿ ಬೆಂಗಳೂರಿನಲ್ಲಿ ಕೆಎಂಡಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಹೇಳಿದ್ದ ಮಾತುಗಳು ಹೀಗಿತ್ತು.
“ವಕ್ಫ್ ಆಸ್ತಿ ಅಲ್ಲಾಹನದ್ದು. ಅದರಲ್ಲಿ ಕಾಂಪ್ರಮೈಸ್ ಮಾಡಬಾರದು. ನೀವು ಕಾಂಪ್ರಮೈಸ್ ಆದಲ್ಲಿ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಊಪರ್‌ವಾಲಾ(ಮೇಲಿನವನು) ನೋಡುತ್ತಿದ್ದಾನೆ. ಖುದಾನ ಜಮೀನನ್ನು ಲೂಟಿ ಮಾಡುತ್ತಿರಬೇಕಾದರೆ ನೀವೆಲ್ಲ ಕಣ್ಣು ಮುಚ್ಚಿ ಕುಳಿತರೆ, ಲೂಟಿ ಮಾಡುವವನಿಗಿಂತ ಲೂಟಿ ಮಾಡಲು ಬಿಟ್ಟವರೇ ದೊಡ್ಡ ಮುಜ್ರಿಂ(ತಪ್ಪಿತಸ್ಥ) ಆಗುತ್ತಾರೆ. ಖುದಾನ ಜಮೀನುಗಳನ್ನು ರಕ್ಷಿಸುವ ಅವಕಾಶ ಲಭಿಸಿರುವ ನೀವು ಪುಣ್ಯವಂತರು” ಎಂದಿದ್ದರು.
ಮುಂದುವರೆದು, “ಕರ್ನಾಟಕದಲ್ಲಿ ಸುಮಾರು 2,000 ಕೋಟಿ ವಕ್ಫ್ ಆಸ್ತಿಯನ್ನು ಈಗಾಗಲೇ ಖಾಸಗಿಯವರು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಜಮೀನು ಒಳಗೆ ಹಾಕಿದ್ದರೆ ಬೇರೆ ವಿಷಯ. ಸಂಪೂರ್ಣ ಆಸ್ತಿಗಳನ್ನೇ ಖಾಸಗಿಯವರು ಒಳಗೆ ಹಾಕಿಕೊಂಡಿದ್ದಾರೆ. ಇನ್ನೀಗ ಆಸ್ತಿಯ ಒಂದು ಮೂಲೆಯಲ್ಲಿ ನಾವು ಮಸೀದಿ ಕಟ್ಟುತ್ತೇವೆ ಎಂದರೆ ಅವರು ನಿಮಗೆ ಅವಕಾಶ ಕೊಡುತ್ತಾರಾ? ಆದ್ದರಿಂದ ಖಾಸಗಿಯವರು ವಶಪಡಿಸಿಕೊಂಡಿರುವ ವಕ್ಫ್‌ನ ಎಷ್ಟು ಆಸ್ತಿಗಳಿವೆಯೋ ಅದೆಲ್ಲವೂ ಮತ್ತೆ ವಕ್ಫ್ ಬೋರ್ಡಿಗೆ ಬರುವವರೆಗೂ ನೀವೆಲ್ಲ ಸುಮ್ಮನೆ ಕೂರಬಾರದು. ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ಬೊಮ್ಮಾಯಿ ಅಬ್ಬರದ ಭಾಷಣ ಮಾಡಿದ್ದರು.
ಇದನ್ನು ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಕಡಕೋಳ ಗಲಭೆ: ಗ್ರಾಮವನ್ನೇ ತೊರೆದ 70ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು!
ಬೊಮ್ಮಾಯಿ ಭಾಷಣ ಮಾಡುವ ವೇಳೆ, ಅದೇ ವೇದಿಕೆಯಲ್ಲಿ ಬಿಜೆಪಿ ಸಂಸದ ಪಿ.ಸಿ ಮೋಹನ್, ಬಿಜೆಪಿ ನಾಯಕ ರಾಜು ಗೌಡ, ಆಗಿನ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಶಾಫಿ ಸಅದಿ ಸೇರಿದಂತೆ ಹಲವರು ಇದ್ದರು. ಯಾರೊಬ್ಬರೂ ಆಗ ತಕರಾರು ತೆಗೆದಿರಲಿಲ್ಲ. ಬೊಮ್ಮಾಯಿ ಹೇಳಿಕೆ ತಪ್ಪು ಎಂದಿರಲಿಲ್ಲ.
ಆದರೆ, ಈಗ ಇದೇ ಬೊಮ್ಮಾಯಿ ಮತ್ತು ಬಿಜೆಪಿಗರು, ಇದೇ ವಕ್ಫ್ ಆಸ್ತಿಯನ್ನು ವಿವಾದದ ಕೇಂದ್ರವನ್ನಾಗಿಸಿದ್ದಾರೆ. ರೈತರು ಉಳುಮೆ ಮಾಡುತ್ತಿರುವ ಆಸ್ತಿಯನ್ನು ವಕ್ಫ್ ವಶಕ್ಕೆ ಪಡೆಯಲು ನೋಟಿಸ್ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್‌ಗಾಗಿ ರೈತರನ್ನು ಬಲಿಕೊಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಒಂದು ಚಿಕ್ಕ ಸಮಸ್ಯೆಯನ್ನು ರಾಜ್ಯದ ವಿಚಾರವನ್ನಾಗಿ ಮಾಡಿ, ಕೋಮು ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ. ಹಿಂದೆ, ಘಂಟಾಘೋಷವಾಗಿ, ‘ಒತ್ತುವರಿಯಾಗಿರುವ ವಕ್ಫ್ ಆಸ್ತಿಪಾಸ್ತಿಗಳನ್ನು ಹಿಂಪಡೆಯಿರಿ. ನಿಮ್ಮ ಜೊತೆಗೆ ನಾವಿದ್ದೇವೆ’ ಎಂದಿದ್ದ ಬೊಮ್ಮಾಯಿ, ಅಂತಹ ಹೇಳಿಕೆ ನೀಡಿದಾಗ ಮೌನವಾಗಿದ್ದ ಬಿಜೆಪಿ ನಾಯಕರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ರೈತರ ರಕ್ಷಣೆ ಮಾಡುತ್ತೇವೆಂದು ಹೇಳುತ್ತಿದ್ದಾರೆ.
ಇದು ಚುನಾವಣೆಯ ಸಮಯ ಎಂಬುದನ್ನು ಜನ ನೆನಪಿನಲ್ಲಿಟ್ಟುಕೊಳ್ಳಬೇಕು. ಚುನಾವಣೆ ಮುಗಿದ ನಂತರ, ಹಿಂದು-ಮುಸ್ಲಿಮರು ಒಟ್ಟಾಗಿ ಬದುಕಬೇಕು ಎಂಬ ಕಟುಸತ್ಯವನ್ನು ಅರಿಯಬೇಕು.