ಈ ದಿನ ಸಂಪಾದಕೀಯ | ವಕ್ಫ್‌ ವಿವಾದವೆಂಬ ಕೃತಕ ಸೃಷ್ಟಿ – ಮತ್ತೊಮ್ಮೆ ಮಾಧ್ಯಮಗಳ ಬಣ್ಣ ಬಯಲು

Date:

Advertisements
ಮಾಧ್ಯಮಗಳು ಪಕ್ಷಪಾತಿಯಾಗಿರಬೇಕೇ ಹೊರತು ಕೃತಕ ತಟಸ್ಥ ಪಾತ್ರ ವಹಿಸಬಾರದು. ಆದರೆ, ಆ ಪಕ್ಷಪಾತವು ನೊಂದವರ ಪರವಾಗಿ, ಸತ್ಯದ ಪರವಾಗಿ, ಸೌಹಾರ್ದತೆಯ ಪರವಾಗಿ ಇರಬೇಕೇ ಹೊರತು ದಾಳಿಕೋರರ ಪರವಾಗಿಯಲ್ಲ. ಒಂದು ವೇಳೆ ಮಾಧ್ಯಮಗಳ ವರದಿಗಳ ಫಲವಾಗಿ ಎಲ್ಲಿಯಾದರೂ ಗುಂಪು ದಾಳಿಯೇ ನಡೆಯಿತೆಂದರೆ, ಇಡೀ ಸಮಾಜ ಎಚ್ಚೆತ್ತುಕೊಳ್ಳಬೇಕು.

ಕರ್ನಾಟಕದಲ್ಲಿ ಮತ್ತೊಮ್ಮೆ ಹುಸಿ ವಿವಾದವೊಂದನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ. ಅದು ವಕ್ಫ್‌ ಜಮೀನಿನ ಸುತ್ತ ವಿಜಯಪುರ ಜಿಲ್ಲೆಯಿಂದ ಆರಂಭಿಸಲಾದ ಹುಸಿ ವಿವಾದ. ಸದಾ ಒಂದಿಲ್ಲೊಂದು ವಲಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿ ಮಾಡುವ ಒಕ್ಕೂಟ ಸರ್ಕಾರವು ವಕ್ಫ್‌ ಕಾಯ್ದೆಗೆ ಭಾರೀ ತಿದ್ದುಪಡಿಗಳನ್ನು ತರಹೊರಟಿದೆ. ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಹೀಗಾಗಿ ಕೋಮು ಧ್ರುವೀಕರಣ ಮಾಡಲು ಇದಕ್ಕಿಂತ ಪ್ರಶಸ್ತವಾದ ಸಮಯ ಇನ್ನೊಂದಿಲ್ಲವೆಂಬಂತೆ ಇಡೀ ಬಲಪಂಥೀಯ ಯಂತ್ರಾಂಗವು ಸನ್ನದ್ಧವಾಗಿದೆ. ಅದೇ ಯಂತ್ರಾಂಗದ ವಿಸ್ತರಿತ ಭಾಗವಾದ ಶೇ. 80ರಷ್ಟು ಮಾಧ್ಯಮಗಳು ಕಿಡಿಗೆ ಸಾಕಷ್ಟು ಗಾಳಿಯೂದಿ ಬೆಂಕಿ ಹೊತ್ತಿಸುವ ಪ್ರಯತ್ನದಲ್ಲಿವೆ. ದುರಂತವೆಂದರೆ, ಕೋಮುವಾದಿ ಮಾಧ್ಯಮಗಳ ಸಾಲಿನಲ್ಲಿ ನಿಲ್ಲದ ಕೆಲವು ಮಾಧ್ಯಮಗಳೂ ಸಹ ಈ ಸಂದರ್ಭದಲ್ಲಿ ತಪ್ಪಾದ ಹೆಡ್‌ಲೈನುಗಳ ಮೂಲಕ ಸುದ್ದಿಯಾಗುತ್ತಿವೆ.

ದೇಶದಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆಯ ನಂತರ ಅತಿ ದೊಡ್ಡ ಆಸ್ತಿ ಹೊಂದಿರುವುದು ವಕ್ಫ್‌ ಇಲಾಖೆ. ಒಂದು ಸಾರಿ ವಕ್ಫ್‌ ಇಲಾಖೆಯವರು ಯಾವುದಾದರೂ ಆಸ್ತಿಯನ್ನು ತಮ್ಮದೆಂದು ತೀರ್ಮಾನಿಸಿಬಿಟ್ಟರೆ ಮುಗೀತು– ಅದೇ, ಅವರದ್ದೇ ಆಸ್ತಿಯಾಗಿಬಿಡುತ್ತದೆ– ಇತ್ಯಾದಿ ಇತ್ಯಾದಿ ಹಸೀ ಸುಳ್ಳುಗಳು ಈ ಹಿಂದೆ ವಾಟ್ಸಾಪ್‌ ವಿಶ್ವವಿದ್ಯಾಲಯದ ಸರಕಾಗಿ ಮಾತ್ರ ಇತ್ತು. ಆ ಸುಳ್ಳುಗಳನ್ನೀಗ ಜನಸಾಮಾನ್ಯರೆಲ್ಲರ ಸಾಮಾನ್ಯ ಜ್ಞಾನವಾಗಿಸಲು ಪೈಪೋಟಿ ನಡೆದಿದೆ.

ವಕ್ಫ್‌ ಎಂದರೇನು, ಅದರ ಇತಿಹಾಸವೇನು, ಅದರ ಹಿಂದಿನ ಧಾರ್ಮಿಕ-ಸಾಮಾಜಿಕ ಮೌಲ್ಯವೇನು, ಸರ್ಕಾರಿ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿಗಳ ರಕ್ಷಣೆಯ ಕರ್ತವ್ಯ ಹೇಗೆ ನಿಭಾಯಿಸಬೇಕು ಇತ್ಯಾದಿ ಸಂಗತಿಗಳ ಕುರಿತು ‘ಮುಖ್ಯವಾಹಿನಿ’ ಎಂದು ಕರೆಸಿಕೊಳ್ಳಲ್ಪಡುವ ಬಹುತೇಕ ಮಾಧ್ಯಮಗಳಲ್ಲಿ ಒಂದೇ ಒಂದು ‘ಎಕ್ಸ್‌ಪ್ಲೇನರ್‌’ ಬಂದಿಲ್ಲ ಎಂಬುದು ಸದ್ಯದ ದುರಂತ ಸ್ಥಿತಿಗೆ ದ್ಯೋತಕವಾಗಿದೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕನ್ನಡ ಶಾಲೆಗಳೇಕೆ ಕದ ಮುಚ್ಚುತ್ತಿವೆ? ಬಡವರ ಗುಡಿಸಲುಗಳಂತಾಗಿವೆ?

ವಕ್ಫ್‌ ವಿಚಾರದಲ್ಲಿ ಅಪಾರ ಭ್ರಷ್ಟಾಚಾರವಿರುವುದು ವಾಸ್ತವ. ಇತರ ದೇವಮಂದಿರಗಳಂತೆ ಅಲ್ಲಿಯೂ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳು ಇದ್ದೇ ಇವೆ. ಹಾಗೆಯೇ ಇದರ ಫಲಾನುಭವಿಗಳು ಮತ್ತು ಅತಿಕ್ರಮಣ ಮಾಡಿದವರಲ್ಲಿ ಶೇ. 90ರಷ್ಟು ಮುಸ್ಲಿಮರೇ ಇದ್ದಾರೆಂಬುದೂ ವಾಸ್ತವ. ಅದನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ವಕ್ಫ್‌ ಬೋರ್ಡ್‌ ಮತ್ತು ಮುಸ್ಲಿಂ ಸಮುದಾಯ ಕಾನೂನಿನ ಪ್ರಕಾರ ಬಗೆಹರಿಸಿಕೊಳ್ಳುವುದು ಅತ್ಯಗತ್ಯ. ಅಂತಹ ಒಂದು ಪ್ರಕ್ರಿಯೆ ನಡೆಯುತ್ತಿರುವಾಗ, ಅದನ್ನು ಹಿಂದೂ – ಮುಸ್ಲಿಂ ವಿಚಾರ ಮಾಡಲು ಹೊರಟಿರುವ ಕೋಮುವಾದಿ ಶಕ್ತಿಗಳು ಈ ರಾಜ್ಯದ ಹಿತಾಸಕ್ತಿಯನ್ನಾಗಲೀ, ರೈತರ ಹಿತಾಸಕ್ತಿಯನ್ನಾಗಲೀ ಕೇಂದ್ರವಾಗಿಟ್ಟುಕೊಂಡಿಲ್ಲ. ಇದು ನಿಚ್ಚಳವಾಗಿ ಕಾಣುತ್ತಿರುವಾಗಲೇ ಮಾಧ್ಯಮಗಳ ಗಣನೀಯ ಭಾಗ ಯತ್ನಾಳ್‌ರಂತಹ ಬಾಯಿಬಡುಕರಿಗೆ ಇನ್ನಿಲ್ಲದ ಕವರೇಜ್‌ ನೀಡಲಾಯಿತು. ಸರ್ಕಾರದ ಪರವಾಗಿ ಮಾತನಾಡುವ, ಸ್ಪಷ್ಟೀಕರಣ ನೀಡುವ, ರೈತರಿಗೆ ಅಭಯ ನೀಡುವ ದನಿಗಳಿಗೆ ಅತ್ಯಂತ ಕಡಿಮೆ ಸ್ಥಳವನ್ನು ಈ ಮಾಧ್ಯಮಗಳು ಕೊಟ್ಟರೆ, ಖುದ್ದು ಮುತುವರ್ಜಿ ವಹಿಸಿ ಸುಳ್ಳುಗಳನ್ನು ಹಿಗ್ಗಿಸಿದರು.

ಆಸ್ತಿ ವ್ಯಾಜ್ಯ, ಪ್ರೇಮ ಪ್ರಕರಣಗಳು, ಸರ್ಕಾರಿ ಆಸ್ತಿಯ ಅಕ್ರಮ ವಶ ಇವೆಲ್ಲವನ್ನೂ ಇಬ್ಬರು ವ್ಯಕ್ತಿಗಳ ಅಥವಾ ಎರಡು ಭಿನ್ನ ಪಕ್ಷದಾರರ ನಡುವಿನ ಸಿವಿಲ್‌ ವ್ಯಾಜ್ಯವಾಗಿ ನೋಡದೇ, ಎಲ್ಲಕ್ಕೂ ಧರ್ಮದ ಲೇಪ ಹಚ್ಚುವುದು ಈ ಕೆಲವು ಮಾಧ್ಯಮಗಳ ಹುಟ್ಟುಗುಣದಂತೆ ಕಾಣುತ್ತಿದೆ. ಒಂದು ವೇಳೆ ಇಂತಹ ಸಂದರ್ಭಗಳಲ್ಲಿ ನೊಂದವರು ಮುಸ್ಲಿಂ ಧರ್ಮಕ್ಕೆ ಸೇರಿದವರಾದ ತಕ್ಷಣ ಅಲ್ಲಿ ಶುದ್ಧ ಜರ್ನಲಿಸಂ ಇಣುಕಿ ಹಾಕಿ, ಹೆಸರುಗಳನ್ನು ಅಡಗಿಸಲಾಗುತ್ತದೆ. ಕೊಂದ ಆರೋಪ ಹೊತ್ತವರು ಮುಸ್ಲಿಮರಾದರೆ, ಶತಮಾನಗಳ ಭಾರವನ್ನೆಲ್ಲಾ ಇಡೀ ಸಮುದಾಯದ ಮೇಲೆ ಹೊರಿಸಲಾಗುತ್ತದೆ. ಮುಸ್ಲಿಂ ಸಮುದಾಯದಲ್ಲಿ ಉತ್ಪಾದನಾ ಲೋಪ (Manufacturing defect) ಇದೆಯೆಂದು ಪತ್ರಿಕಾ ಅಂಕಣ ಬರೆದ ವ್ಯಕ್ತಿಯೊಬ್ಬ ಇಂದು ಟಿವಿ ಚಾನೆಲ್‌ ಒಂದರ ಮುಖ್ಯಸ್ಥನ ಸ್ಥಾನದಲ್ಲಿ ಆಸೀನರಾಗಿದ್ದಾರೆ. ಇಂತಹ ದುಷ್ಟ, ಅಮಾನವೀಯ ನಡವಳಿಕೆಯು ಮಾಧ್ಯಮ ಲೋಕದ ಕೇಂದ್ರಕ್ಕೆ ಬಂತೆಂದರೆ, ಇಡೀ ಸಮಾಜವೇ ಅಮಾನವೀಯತೆಯ ಕಡೆಗೆ ಸಾಗುತ್ತದೆ.

ಇಂತಹುದ್ದರ ಫಲವಾಗಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಡಕೋಳದಲ್ಲಿ ನಡೆದಂತಹ ಪ್ರಕರಣಗಳು ಸಂಭವಿಸುತ್ತವೆ. ಯಾವುದೇ ಅಧಿಕಾರಿ ಮಾಡಿರಬಹುದಾದ ಪಹಣಿ ನಮೂದಿನ ಕಲ್ಪಿತ ತಪ್ಪಿಗೆ ಸೇಡು ತೀರಿಸಿಕೊಳ್ಳಲು, ಒಂದು ದೊಡ್ಡ ಗುಂಪು ಮುಸ್ಲಿಮರ ಮನೆಯ ಮೇಲೆ ಮೂರು ದಿನಗಳ ಹಿಂದೆ ರಾತ್ರಿ ದಾಳಿ ನಡೆಸಿದೆ. ಇದರ ಹೊಣೆಯನ್ನು ಬಿಜೆಪಿ ಮಾತ್ರವಲ್ಲದೇ, ಮಾಧ್ಯಮಗಳೂ ಹೊರಬೇಕು.

ಇದನ್ನು ಓದಿದ್ದೀರಾ?: ‘ವಕ್ಫ್‌ ಆಸ್ತಿ ಅಲ್ಲಾಹನದ್ದು, ಮರಳಿ ಪಡೆಯಲು ಕಾಂಪ್ರಮೈಸ್‌ ಬೇಡ’ ಎಂದಿದ್ದ ಬೊಮ್ಮಾಯಿ; ಇಲ್ಲಿದೆ ದಾಖಲೆ

ಕರ್ನಾಟಕದ ಇಬ್ಬರು ಧೀಮಂತ ವ್ಯಕ್ತಿಗಳ ಕೊಲೆ ಚಾರ್ಜ್‌ಶೀಟಿನಲ್ಲಿ ಮಾಧ್ಯಮ ಸಂಸ್ಥೆಗಳ ಚಿತಾವಣೆಯೂ ಸ್ಥಾನ ಪಡೆದುಕೊಂಡಿವೆ ಎಂಬುದು ನಮಗೆಲ್ಲರಿಗೂ ಆತಂಕ ತರಬೇಕು. ಮಾಧ್ಯಮಗಳು ಪಕ್ಷಪಾತಿಯಾಗಿರಬೇಕೇ ಹೊರತು ಕೃತಕ ತಟಸ್ಥ ಪಾತ್ರ ವಹಿಸಬಾರದು. ಆದರೆ, ಆ ಪಕ್ಷಪಾತವು ನೊಂದವರ ಪರವಾಗಿ, ಸತ್ಯದ ಪರವಾಗಿ, ಸೌಹಾರ್ದತೆಯ ಪರವಾಗಿ ಇರಬೇಕೇ ಹೊರತು ದಾಳಿಕೋರರ ಪರವಾಗಿಯಲ್ಲ. ಒಂದು ವೇಳೆ ಮಾಧ್ಯಮಗಳ ವರದಿಗಳ ಫಲವಾಗಿ ಎಲ್ಲಿಯಾದರೂ ಗುಂಪು ದಾಳಿಯೇ ನಡೆಯಿತೆಂದರೆ, ಇಡೀ ಸಮಾಜ ಎಚ್ಚೆತ್ತುಕೊಳ್ಳಬೇಕು.

ಆ ರೀತಿ ಕರ್ನಾಟಕದ ಸುಳ್ಳು ಬಿತ್ತರಿಸುವ ಮಾಧ್ಯಮಗಳ ಕುರಿತು ಇಲ್ಲಿನ ಜನತೆ ಎಚ್ಚೆತ್ತುಕೊಳ್ಳುವ ಕಾಲ ಬಂದಾಗಿದೆ. ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನವನ್ನು ಪ್ರಜ್ಞಾವಂತರೆಲ್ಲರೂ ವ್ಯವಸ್ಥಿತವಾಗಿ ನಡೆಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X