ಅದಾನಿ ಸಮೂಹದ ಕಂಪನಿಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ಸೆಬಿಗೆ ಆಗಸ್ಟ್ 14 ರವರೆಗೆ ಮೂರು ತಿಂಗಳು ಹೆಚ್ಚುವರಿ ಸಮಯ ನೀಡಿದೆ. ಆದರೆ ಅನಿರ್ದಿಷ್ಟ ಅವಧಿಯವರೆಗೆ ಸಮಯವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೆಚ್ಚುವರಿ ಆರು ತಿಂಗಳುಗಳ ಮನವಿಯನ್ನು ತಿರಸ್ಕರಿಸಿತು.
ಅಮೆರಿಕದ ಕಿರು ಮಾರಾಟಗಾರ ಸಂಸ್ಥೆ ಹಿಂಡೆನ್‌ಬರ್ಗ್‌ನ ಸಂಶೋಧನೆಯ ವರದಿಯು ಅದಾನಿ ಸಮೂಹದಿಂದ “ಲೆಕ್ಕಪತ್ರ ವಂಚನೆ” ಮತ್ತು “ಷೇರುಗಳ ತಿರುಚುವಿಕೆ” ಎಂದು ಆರೋಪಿಸಿದ ನಂತರ ಜನವರಿ 25 ರಂದು ಮಾರುಕಟ್ಟೆ ನಿಯಂತ್ರಕ ಸೆಬಿ ತನಿಖೆ ಪ್ರಾರಂಭಿಸಿತ್ತು.
ಸೆಬಿ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪಾರ್ದಿವಾಲಾ ಅವರ ಪೀಠವು ಆಗಸ್ಟ್ 14 ರಂದು ನವೀಕರಿಸಿದ ವರದಿಯನ್ನು ಸಲ್ಲಿಸುವಂತೆ ಸೆಬಿಗೆ ತಿಳಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಸೆಬಿಯು ಅದಾನಿ ಕಂಪನಿಯ ವಿವಾದಗಳ ಬಗ್ಗೆ ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ಕೈಗೊಂಡ ವರದಿಗಳನ್ನು ದಾಖಲೆಯಲ್ಲಿ ಇರಿಸಲು ಸೆಬಿಗೆ ನಿರ್ದೇಶಿಸುವಂತೆ ಕೋರಿದರು.
“ಸೆಬಿ ಸಂಪೂರ್ಣವಾಗಿ ಏನನ್ನೂ ಮಾಡುತ್ತಿಲ್ಲ, ಅದಾನಿ ಷೇರುಗಳು ಏಕಾಏಕಿ ಹೆಚ್ಚಾದರೆ, ಕಂಪನಿಗೆ ಎಚ್ಚರಿಕೆ ನೀಡಬೇಕಿತ್ತು. ಸಂಸತ್ತಿನಲ್ಲಿ ಅದಾನಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ ಎಂದು ಸೆಬಿ ಹೇಳುತ್ತಿದೆ. ಅಲ್ಲಿನ ತನಿಖೆಗಳಲ್ಲಿ ಏನಾಯಿತು ಎಂದು ಮಾರುಕಟ್ಟೆ ನಿಯಂತ್ರಕ ನಮಗೆ ತಿಳಿಸಬೇಕು” ಎಂದು ಪ್ರಶಾಂತ್ ಭೂಷಣ್ ವಾದ ಮಂಡಿಸಿದರು.
2016 ರಿಂದ ಅದಾನಿ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ತನಿಖೆ ನಡೆಸುತ್ತಿದೆ ಎಂಬ ಆರೋಪವು “ವಾಸ್ತವವಾಗಿ ಆಧಾರರಹಿತ” ಎಂದು ಸೋಮವಾರ ಸೆಬಿ ನ್ಯಾಯಾಲಯಕ್ಕೆ ತಿಳಿಸಿತ್ತು.