ಸ್ಪೇನ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಅಪಾರ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಭೂಕುಸಿತಗಳೂ ಸಂಭವಿಸಿವೆ. ಈವರೆಗೆ 210ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಗುರುವಾರಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮ ಸ್ಪೇನ್‌ನ ವೆಲೆನ್ಸಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರವಾಹವಾಗುತ್ತಿದೆ. ವೆಲೆನ್ಸಿ ಪ್ರದೇಶದಲ್ಲಿಯೇ ಬರೋಬ್ಬರಿ 202 ಮಂದಿ ಮೃತಪಟ್ಟಿಟ್ಟಿದ್ದಾರೆ. ಈ ಪ್ರದೇಶದ ಸುಮಾರು 75 ಸಾವಿರ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ವರದಿಯಾಗಿದೆ.
ಅಂಡಲೂಸಿಯಾ, ಹುಯೆಲ್ವಾ ಪ್ರಾಂತ್ಯಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಹಲವೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.
ಪ್ರವಾಹದಿಂದ ಜಲಾವೃತಗೊಂಡಿರುವ ಪ್ರದೇಶಗಳಿಂದ ಜನರನ್ನು ರಕ್ಷಿಸಲು ರಾಷ್ಟ್ರೀಯ ಪೊಲೀಸ್ ಪಡೆ, ಸಿವಿಲ್ ಗಾರ್ಡ್ ಹಾಗೂ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.