ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಗೂಡುದೀಪಗಳನ್ನು ಮಾಡುವವರೇ ಅತಿ ವಿರಳ. ಆದರೆ, ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿ ಅಶ್ಫಾಕ್ ಎಂಬವರು ದೀಪಾವಳಿ ಮತ್ತು ಗೂಡುದೀಪದ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಈ ಬಾರಿಯ ದೀಪಾವಳಿಗೆ ಒಟ್ಟು 17 ಸಾಂಪ್ರದಾಯಿಕ ಗೂಡುದೀಪಗಳನ್ನು ತಯಾರಿಸಿ, ತನ್ನ ಸ್ನೇಹಿತರಿಗೆ ಹಂಚಿದ್ದಾರೆ. ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಏಳಿಂಜೆ ಗ್ರಾಮದ ಕೋಂಜಾಲು ಗುತ್ತುವಿನ ನಿವಾಸಿ ಅಶ್ಫಾಕ್ ಮೂಲತಃ ಬಾಗಲಕೋಟೆಯವರು. ಸ್ಥಜೋಂಜಾಲು ಗುತ್ತಿವನ ಮೂಲ ನಿವಾಸಿ ಕೌಶಲ್ಯ ಶೆಟ್ಟಿ ಅವರ ಪೋಷಣೆಯಲ್ಲಿ ಅಶ್ಫಾಕ್ ವಾಸಿಸುತ್ತಿದ್ದಾರೆ.
ಅಶ್ವಾಕ್ ಅವರು ದೀಪಾವಳಿ ಸಮಯದಲ್ಲಿ ಬಳಸಲಾಗುವ ದೀಪಗಳನ್ನು ಗಮನಿಸುತ್ತಿದ್ದರು. ಇದೀಗ, ಅವರೇ ಸ್ವತಃ ಗೂಡುದೀಪಗಳನ್ನು ತಯಾರಿಸಿದ್ದಾರೆ. ಅವರ ಕೆಲಸವು ಕೋಮುಸೌಹಾರ್ದತೆಗೆ ಸಾಕ್ಷಿಯಾಗಿರುವ ಜತೆಗೆ, ಅಶ್ವಾಕ್ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.

“ಅಶ್ವಾಕ್ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಸುತ್ತಿದ್ದಾರೆ. ಕಳೆದ ತಿಂಗಳು ರಜೆಯ ಸಮಯದಲ್ಲಿ ರಾತ್ರಿ-ಹಗಲು ಕುಳಿತು 17 ಸಾಂಪ್ರದಾಯಿಕ, ದೊಡ್ಡಗಾತ್ರದ ಗೂಡುದೀಪ ಸಿದ್ದಪಡಿಸಿದ್ದಾರೆ. ಆದರೆ, ಯಾವುದೇ ಗೂಡುದೀಪಗಳನ್ನು ಮಾರಾಟ ಮಾಡದೆ ತನ್ನ ಮಿತ್ರರಿಗೆ ಹಂಚಿ ಖುಷಿಪಟ್ಟಿದ್ದಾರೆ. ಕಲಾತ್ಮಕವಾದ ಎಲ್ಲ ಕೃತಿಗಳನ್ನೂ ಇವರು ಮಾಡುತ್ತಾರೆ. ಅಲ್ಲದೆ ಹೈನುಗಾರಿಕೆಯಲ್ಲೂ ತೊಡಗಿಸಿರುವ ಅಶ್ಫಾಕ್ ದನ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ” ಎಂದು ಕೌಶಲ್ಯ ಶೆಟ್ಟಿ ಹೇಳಿದ್ದಾರೆ.
“ಹಿಂದಿನಿಂದಲೂ ಅಪಾರ ಆಸಕ್ತಿ ಇತ್ತು. ಮಕ್ಕಳ ಸಹಕಾರದಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಕೆಯಲ್ಲಿ ತೊಡಗಿದೆ. ಕೌಶಲ್ಯ ಶೆಟ್ಟಿಯವರ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು” ಎಂದು ಎಂಜಿನಿಯರಿಂಗ್ ವಿದ್ಯಾರ್ಥಿ ಅಶ್ಫಾಕ್ ತಿಳಿಸಿದ್ದಾರೆ.