14 ವರ್ಷದ ಬಾಲಕನ ಹೊಟ್ಟೆಯಲ್ಲಿ ಬ್ಯಾಟರಿ, ಚೈನ್, ಸ್ಕ್ರೂ ಹಾಗೂ ರೇಜರ್ ಬ್ಲೇಡ್ ಸೇರಿದಂತೆ ಬರೋಬ್ಬರಿ 65 ವಸ್ತುಗಳು ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆಯಲಾಗಿದೆ. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹಾತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕನಿಗೆ ಸುಮಾರು ಐದು ಗಂಟೆಗಳ ಕಾಲ ಸುಧೀರ್ಘ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಹೊಟ್ಟೆಯಲ್ಲಿದ್ದ ಎಲ್ಲ ವಸ್ತುಗಳನ್ನು ಹೊರತೆಗೆಯಲಾಗಿದೆ. ಆದರೆ, ಕರುಳಿನ ಸೋಂಕಿನಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಬಾಲಕನನ್ನು ಆದಿತ್ಯ ಶರ್ಮಾ ಎಂದು ಗುರುತಿಸಲಾಗಿದೆ. ಆತನಿಗೆ ಇತ್ತೀಚೆಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಪರೀಕ್ಷೆ ವೇಳೆ ಆತನ ಹೊಟ್ಟೆಯಲ್ಲಿ ಹಲವು ವಸ್ತುಗಳು ಇರುವುದು ಪತ್ತೆಯಾಗಿತ್ತು. ಬಳಿಕ ಆತನಿಗೆ ಶಸ್ತ್ರಚಿಕಿತ್ಸೆಯನ್ನೂ ನಡೆಸಿ ಎಲ್ಲ ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಆದರೂ, ಬಾಲಕ ಬದುಕುಳಿಯಲಿಲ್ಲ.
ಬಾಲಕ ಈ ಹಿಂದೆ ಆ ವಸ್ತುಗಳನ್ನು ನುಂಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಶಂಕಿಸಿದ್ದಾರೆ. ಬಾಲಕನ ತಂದೆ ಸಂಕೇತ್ ಶರ್ಮಾ ಅವರು ಔಷಧ ಕಂಪನಿಯ ಪ್ರತಿನಿಧಿಯಾಗಿದ್ದಾರೆ. ಅವರು ಹೇಳುವಂತೆ, “ಅಕ್ಟೋಬರ್ 13ರಿಂದ ಬಾಲಕನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆತನನ್ನು ಹಲವು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿತ್ತು. ಅಕ್ಟೋಬರ್ 19ರಂದು ಜೈಪುರ ಆಸ್ಪತ್ರೆಯಲ್ಲಿ ಆತನನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ, ಆತನ ಹೊಟ್ಟೆಯಲ್ಲಿ ವಸ್ತುಗಳು ಇರುವುದು ಪತ್ತೆಯಾಗಿತ್ತು. ಬಳಿಕ, ಅಲೀಗಢ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೂ, ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.