ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಬುದ್ಧಿವಂತರ ಜಿಲ್ಲೆಯ ಎಂಬ ಹೆಸರಿನ ಜೊತೆಗೆ ಕೋಮುವಾದಿಗಳ ಪ್ರಯೋಗ ಶಾಲೆ ಎಂಬ ಅಪಕೀರ್ತೀಯೂ ಸಾಕಷ್ಟು ವರ್ಷಗಳಿಂದ ಕೇಳಿರುತ್ತೇವೆ. ಎಲ್ಲ ‘ಪ್ರಯೋಗ ಶಾಲೆ’ಗಳ ನಡುವೆಯೂ ಕೂಡ ಸೌಹಾರ್ದತೆ ಇನ್ನೂ ನೆಲೆ ನಿಂತಿದೆ ಎಂಬುದಕ್ಕೆ ಹೊಸ ಹೊಸ ಘಟನೆಗಳು ಸಾಕ್ಷಿಯಾಗುತ್ತಲೂ ಇವೆ.
ಅನಾರೋಗ್ಯ ಪೀಡಿತರಾಗಿದ್ದ ಹಿಂದೂ ಮಹಿಳೆಯೋರ್ವರಿಗೆ, ಮುಸ್ಲಿಂ ಮಹಿಳೆಯೋರ್ವರು ದಾನಿಗಳು ಹಾಗೂ ಕೆಲವು ಎನ್‌ಜಿಓಗಳ ಸಹಾಯದಿಂದ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣ ಮಾಡಿದ್ದು, ದೀಪಾವಳಿ ಹಬ್ಬದ ನಡುವೆಯೇ ಆ ‘ಸೌಹಾರ್ದ ನಿಲಯ’ವನ್ನು ಹಸ್ತಾಂತರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಜಿ ಅಲಾಬೆ ಎಂಬಲ್ಲಿ ಗ್ರಾಮ ಪಂಚಾಯಿತಿ ಪ್ರಥಮ ದರ್ಜೆ ಕಾರ್ಯದರ್ಶಿಯಾಗಿದ್ದ ಆಯಿಷಾ ಬಾನು ಎಂಬುವವರು ದಾನಿಗಳಿಂದ ಹಣ ಸಂಗ್ರಹಿಸಿ, ₹5,60,000 ವೆಚ್ಚದಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಸುಶೀಲ ಎಂಬುವವರಿಗೆ ಮನೆ ನಿರ್ಮಾಣ ಮಾಡಿದ್ದು, ಬೆಳಕಿನ ಹಬ್ಬ ದೀಪಾವಳಿಯಂದು ಮನೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ʼಸೌಹಾರ್ದ ನಿಲಯʼದ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ನೂಜಿಯಲ್ಲಿ ನಡೆಯಿತು. ಕೊಳ್ನಾಡು ಗ್ರಾಪಂ, ಕಾರ್ಕಳದ ಹುಮ್ಯಾನಿಟಿ ಟ್ರಸ್ಟ್ ವತಿಯಿಂದ ನಡೆದ ಮನೆ ಹಸ್ತಾಂತರದ ಕಾರ್ಯಕ್ರಮದಲ್ಲಿ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.
ಈ ಮಾನವೀಯತೆ ಕಾರ್ಯಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಗ್ರಾಮ ಪಂಚಾಯಿತಿಯ ಪ್ರಥಮ ದರ್ಜೆ ಕಾರ್ಯದರ್ಶಿ ಆಯಿಷಾ ಬಾನು ಅವರನ್ನು ಸಂಪರ್ಕಿಸಿದಾಗ, “ಕಳೆದ ಕೋವಿಡ್ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೆವು. ಈ ವೇಳೆ ಸ್ಥಳೀಯರು ಸುಶೀಲರವರ ಮನೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು. ಬಳಿಕ ಅವರ ಮನೆಗೆ ಭೇಟಿ ನೀಡಿದಾಗ ಅವರ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿತ್ತು” ಎಂದು ಮರುಗಿದರು.

“ಸುಶೀಲ ಅವರು ಅನಾರೋಗ್ಯಕ್ಕೀಡಾಗಿದ್ದರೂ ಕೂಡಾ ಮಲಗಿಕೊಂಡೇ ಬೀಡಿ ಕಟ್ಟಿ ಬದುಕು ಸಾಗಿಸುತ್ತಿದ್ದರು. ಪಂಚಾಯಿತಿ ವತಿಯಿಂದ ಎಸ್‌ಸಿ/ಎಸ್‌ಟಿ ಫಂಡ್‌ನಡಿ ಮನೆ ದುರಸ್ತಿ ಮಾಡಿಸೋಣವೆಂದರೆ ಮನೆ ಪೂರ್ತಿ ಬಿರುಕು ಬಿಟ್ಟಿತ್ತು. ರಿಪೇರಿ ಮಾಡಿಸುವುದೂ ಅಸಾಧ್ಯವಾಗಿತ್ತು. ವಸತಿ ಯೋಜನೆಯಡಿ ಅರ್ಜಿ ಹಾಕೋಣವೆಂದರೆ ಸುಶೀಲರವರು ವಾಸವಿದ್ದ ಮನೆಗೆ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ಅವರು ಒಬ್ಬರು ಸ್ಥಿತಿವಂತರ ಜಾಗದಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಮನೆಯ ದಾಖಲೆ ಪತ್ರಗಳು ಅವರ ಹೆಸರಿನಲ್ಲಿರಲಿಲ್ಲ. ಸಮಯ ಮೀರುವ ಸಂದರ್ಭದಲ್ಲಿ ನಮಗೆ ಇವರ ವಿಷಯ ತಿಳಿದಿದ್ದರಿಂದ ದಾಖಲೆಗಳನ್ನು ಹೊಂದಿಸುವುದೂ ಕಷ್ಟವಾಯಿತು” ಎಂದರು.

“ವಾಸಕ್ಕೆ ಸರಿಯಾದ ಮನೆಯೂ ಇಲ್ಲದ ಇವರ ಸ್ಥಿತಿ ನೋಡಿ ಹೇಗಾದರೂ ಮಾಡಿ ಸುಶೀಲರವರಿಗೆ ಒಂದು ವಾಸಯೋಗ್ಯ ಮನೆ ನಿರ್ಮಿಸಬೇಕೆಂದು ನನ್ನಲ್ಲಿ ಒಂದು ಅಚಲವಾದ ನಿರ್ಧಾರ ಹುಟ್ಟಿತು. ಯಾಕೆಂದರೆ, ನೆರೆಮನೆಯವರು ಹಸಿದಿರುವಾಗ ಹೊಟ್ಟೆತುಂಬಾ ಉಣ್ಣುವವನು ಮುಸ್ಲಿಮನಲ್ಲʼ ಎಂಬ ಮಾತು ನನ್ನಲ್ಲಿ ಆಳವಾಗಿ ಬೇರೂರಿದೆ. ಈ ಮಾತನ್ನು ನಾನು ನಂಬುತ್ತೇನೆ ಕೂಡಾ. ಹಾಗಾಗಿ ಸುಶೀಲರ ವಿಷಯದಲ್ಲಿ ದೃಢ ನಿರ್ಧಾರ ಮಾಡಿ, ಬಳಿಕ ಹಲವಾರು ದಾನಿಗಳನ್ನು ಭೇಟಿಯಾಗಿ ಬಡ ಮಹಿಳೆಗೆ ಒಂದು ಮನೆ ನಿರ್ಮಾಣ ಮಾಡಿಕೊಡಲು ಸಹಾಯಬೇಕೆಂದು ಕೇಳಿಕೊಂಡೆ” ಎಂದು ಸದ್ಯ ಉಳ್ಳಾಲ ತಾಲೂಕಿನ ಬಾಳೆಪುನಿ ಎಂಬಲ್ಲಿ ಕರ್ತವ್ಯದಲ್ಲಿರುವ ಬಿ ಎ ಆಯಿಷಾ ಬಾನು ತಿಳಿಸಿದರು.
“ಟಾಪ್ ಆ್ಯಂಡ್ ಟಾಪ್ ಚಾರಿಟೇಬಲ್ ಟ್ರಸ್ಟ್‌ನವರ ಬಳಿ ಸಹಾಯ ಕೇಳಿದಾಗ ಅವರು ಅವರ ಹೆಸರಿನಲ್ಲಿ ಒಂದು ಬ್ಯಾಂಕ್ ಅಕೌಂಟ್ ಮಾಡಿಸಲು ಹೇಳಿದರು. ನಾವು ಅವರಿಗೆ ಅಕೌಂಟ್ ಮಾಡಿಸಿದೆವು. ಕಾರ್ಕಳದ ಹ್ಯುಮಾನಿಟಿ ಟ್ರಸ್ಟ್‌ನವರು ₹50,000 ಕೊಡುವುದಾಗಿ ಒಪ್ಪಿಕೊಂಡರು. ಆದರೆ ಅವರ ಹೆಸರಿನಲ್ಲಿರುವ ಎಲ್ಲರ ದಾಖಲೆಗಳೂ ಇರಬೇಕೆಂದು ಹೇಳಿದ್ದರು. ಅವರಲ್ಲಿ ಯಾವ ದಾಖಲೆಗಳು ಇಲ್ಲದ ಕಾರಣ ಕಂದಾಯ ಇಲಾಖೆಯವರಲ್ಲಿ ಮನವಿ ಮಾಡಿದಾಗ ಎರಡೇ ತಿಂಗಳಲ್ಲಿ ಎಲ್ಲ ದಾಖಲಾತಿಗಳನ್ನು ವೇಗವಾಗಿ ಮಾಡಿಕೊಟ್ಟರು. ಈ ಮೂಲಕ ಸುಶೀಲ ಅವರಿಗೆ ಸರ್ಕಾರಿ ಜಾಗದಲ್ಲಿ ಮನೆಯ ಹಕ್ಕುಪತ್ರ ಸಿಕ್ಕಿತು. ಹ್ಯುಮ್ಯಾನಿಟಿ ಟ್ರಸ್ಟ್‌ನವರು ಸುಶೀಲ ಅವರ ಅಕೌಂಟ್‌ಗೆ ನೇರವಾಗಿ ₹50,000 ಜಮೆ ಮಾಡಿದರು” ಎಂದು ತಿಳಿಸಿದರು.

“ಒಟ್ಟಾರೆಯಾಗಿ ₹4,00,000 ಹಣದ ನೆರವು ಬಂದಿತು. ಬಳಿಕ ಗ್ರಾಮ ಪಂಚಾಯಿತಿಯ ಎಂಜಿನಿಯರ್ ಯಾವುದೇ ಅಪೇಕ್ಷೆ ಇಲ್ಲದೆ, ಉಚಿತವಾಗಿ ಮನೆಯ ಯೋಜನೆ ಮತ್ತು ಎಸ್ಟಿಮೇಟ್ ರಚನೆ ಮಾಡಿದರು. ಆ ಯೋಜನೆಯ ಪ್ರಕಾರ ಆ ಮನೆಗೆ ₹5,60,000 ವೆಚ್ಚವಾಗುತ್ತಿತ್ತು. ಗುತ್ತಿಗೆದಾರರ ಬಳಿ ಮಾತನಾಡಿ, ಒಪ್ಪಂದದ ಮೂಲಕ ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ ಸುಶೀಲ ಅವರ ಅಕೌಂಟ್ ಮೂಲಕ ಚೆಕ್ ಕೊಡುವುದಾಗಿ ನಿರ್ಧರಿಸಲಾಯಿತು” ಎಂದು ಹೇಳಿದರು.
“ಇದೆಲ್ಲದರ ನಡುವೆ ನನಗೆ ಬಾಳೆಪುಣಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಯಿತು. ಅಲ್ಲಿಯ ಕೆಲಸಗಳ ನಡುವೆ ನಾನು ಇವರನ್ನು ಸಂಪರ್ಕಿಸುದು ಕಷ್ಟವಾಯಿತು. ಬಳಿಕ ಕೊಳ್ನಾಡು ಗ್ರಾಮ ಪಂಚಾಯಿತಿ ಎಂಜಿನಿಯರ್‌ಗೆ ಕಾಲ್ ಮಾಡಿದಾಗ ಅವರು, ʼ₹5.60 ಲಕ್ಷ ಎಸ್ಟಿಮೇಟ್ ಮನೆ ₹4 ಲಕ್ಷಕ್ಕೆ ಹೇಗಾಗುತ್ತದೆ ಮೇಡಂ. ಅರ್ಧಕ್ಕೆ ನಿಂತಿದೆʼ ಅಂತ ಹೇಳಿದರು. ಬಳಿಕ ಮತ್ತೆ ಬಾಳೆಪುಣಿ ಗ್ರಾಮ ಪಂಚಾಯಿತಿಯವರು ಮತ್ತು ಅಲ್ಲಿ ಕೆಲವು ಹಣವಂತರ ಜತೆಗೆ ವಿಷಯ ಪ್ರಸ್ತಾಪಿಸಿದಾಗ, ಅವರೆಲ್ಲರೂ ಮನೆ ಬೇಕಾದ ಕಿಟಕಿ, ಬಾಗಿಲು ಸೇರಿದಂತೆ ಇತರೆ ಸಾಮಗ್ರಿಗಳನ್ನು ಕೊಡಲು ಒಪ್ಪಿಕೊಂಡು ಎಲ್ಲವನ್ನೂ ನೀಡಿದರು. ಇದೀಗ ಮನೆ ಕಂಪ್ಲೀಟ್ ಆಗಿದೆ. ಯಾವಾಗ ಗೃಹ ಪ್ರವೇಶ ಮಾಡೋದು ಅಂತ ಯೋಚಿಸುತ್ತಿರುವಾಗ, ಸುಶೀಲ ಅವರು ತುಂಬಾ ಕಷ್ಟದಿಂದ ಮೇಲೆ ಬಂದಿದ್ದಾರೆ, ಕತ್ತಲಿನಿಂದ ಬೆಳಕಿನೆಡೆಗೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಅವರೆಲ್ಲ ಕತ್ತಲೆಗಳು ದೂರವಾಗುವಂತೆ ಬೆಳಕಿನ ಹಬ್ಬ ದೀಪಾವಳಿಯಂದು ಗೃಹ ಪ್ರವೇಶದ ಮೂಲಕ ಮನೆ ಹಸ್ತಾಂತರ ಮಾಡಿದ್ದೇವೆ” ಎಂದರು.
“ಸ್ಥಳೀಯ ಶಾಸಕರು ಅವರನ್ನು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಗ್ರಾಮ ಪಂಚಾಯಿತಿ ಕಡೆಯಿಂದಲೂ ವೈದ್ಯಕೀಯ ವೆಚ್ಚ, ಮನೆ ದುರಸ್ತಿ, ಶೌಚಾಲಯ, ಸಿಂಟೆಕ್ಸ್ ಸೇರಿದಂತೆ ಹಲವು ಯೋಜನೆಗಳು ದೊರೆಯುವಂತೆ ಮಾಡಿದೆವು. ಇದೀಗ ಸುಶೀಲ ಅವರು ಆರೋಗ್ಯವಾಗಿದ್ದಾರೆ. ಮಲಗಿದ್ದಲ್ಲಿಯೇ ಮಲಗಿರುತ್ತಿದ್ದ ಅವರು, ಈಗ ಓಡಾಡುತ್ತಾರೆ, ಸುಮಾರು ಅರ್ಧ ಗಂಟೆ, 20 ನಿಮಿಷ ಸಮಯ ಕುಳಿತುಕೊಳ್ಳುವಷ್ಟು ಶಕ್ತರಾಗಿ ಚೇತರಿಸಿಕೊಂಡಿದ್ದಾರೆ” ಎಂದು ಈ ದಿನ.ಕಾಮ್‌ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | 83 ಸಾವಿರ ತೂಕದ ನಂದಿನಿ ಉತ್ಪನ್ನಗಳ ಮಾರಾಟ: ದಾಖಲೆ ಸೃಷ್ಟಿಸಿದ ಹಾಲು ಒಕ್ಕೂಟ
“ಸರ್ಕಾರಿ ನೌಕರಳಾಗಿ ನನ್ನಿಂದ ನಮ್ಮ ಮಿತಿಯನ್ನು ಮೀರಲು ಆಗುವುದಿಲ್ಲ. ಹಾಗಾಗಿ ನಾನು ಸ್ವತಃ ಶ್ರಮ ಹಾಕಿ, ಯೋಜನೆ ಮಾಡಿ, ದಾನಿಗಳ ಸಹಾಯದಿಂದ ಅವರಿಗೆ ಒಂದು ಪುಟ್ಟ ಸುಂದರವಾದ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಇದೊಂದು ಅವರ ಚಿಂತಾಜನಕ ಸ್ಥಿತಿ ನೋಡಲಾಗದೆ, ನಮ್ಮ ಕೈಲಾದ ಒಂದು ಸಣ್ಣ ಮಾನವೀಯ ಕೆಲಸವಾಗಿದೆ. ನಾನು ಸಹಾಯ ಕೇಳಿದ ಕೂಡಲೇ ಸ್ಪಂದಿಸಿದ ಎಲ್ಲ ಸಂಘ ಸಂಸ್ಥೆಗಳು ಹಾಗೂ ಮಾನವೀಯ ಮನಸ್ಸುಗಳಿಗೆ ಈ ದಿನ.ಕಾಮ್ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದರು.

ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, “ಸುಶೀಲ ಅವರ ಕುಟುಂಬ ತುಂಬಾ ಕಷ್ಟದಲ್ಲಿತ್ತು. ಮಲಗಿಕೊಂಡೇ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ದುಡಿಯುವವರು ಬೇರೆ ಯಾರೂ ಇಲ್ಲ. ಆದ್ದರಿಂದ ಊರಿನ ಜನರ ಸಹಕಾರ, ಕೊಳ್ನಾಡು ಗ್ರಾಮ ಪಂಚಾಯಿತಿ ಹಾಗೂ ಆಯಿಷಾ ಬಾನು ಮೇಡಂ ಸಹಕಾರದಿಂದ ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಡಲಾಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಆತ್ಮೀಯ ಧನ್ಯವಾದಗಳು” ಎಂದರು.

ಮನೆ ಹಸ್ತಾಂತರದ ವೇಳೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ರಫ್, ನಿಕಟಪೂರ್ವ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ನ್ಯಾಯವಾದಿ ಮೊಹಮ್ಮದ್ ಹನೀಫ್, ಹೈಕೋರ್ಟ್ ನ್ಯಾಯವಾದಿ ರಿಯಾಝ್ ಬಿ ಸಿ ರೋಡ್, ಬಾಳೆಪುಣಿಯ ಹಿರಿಯ ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ಲಾ, ಜಯಂತಿ ಎಸ್ ಪೂಜಾರಿ, ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಕುಕ್ಕುವಳ್ಳಿ, ಟಾಪ್ ಆ್ಯಂಡ್ ಟಾಪ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ನೌಫಲ್, ಜಮಾಅತೆ ಇಸ್ಲಾಮೀ ಹಿಂದ್ ವಿಟ್ಲ ಘಟಕದ ಅಧ್ಯಕ್ಷ ಹೈದರ್ ನೀರ್ಕಜೆ, ಸಾಮಾಜಿಕ ಕಾರ್ಯಕರ್ತರಾದ ಹಸೈನಾರ್ ತಾಳಿತ್ತನೂಜಿ, ಗುತ್ತಿಗೆದಾರರಾದ ಸೀತಾರಾಮ ಶೆಟ್ಟಿ, ಮುಗೇರರ ಸಂಘದ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ರಾಮಣ್ಣ, ಹ್ಯುಮ್ಯಾನಿಟಿ ಟ್ರಸ್ಟ್‌ನ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮನೆ ಹಸ್ತಾಂತರದ ಸರಳ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪ್ರಥಮ ದರ್ಜೆ ಕಾರ್ಯದರ್ಶಿ ಆಯಿಷಾ ಬಾನು ಅವರನ್ನು ಊರವರ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
