ಜಿಲ್ಲೆಯ ವಿವಿಧ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಶಾಲಾ ಕಟ್ಟಡ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರಿವೆ. ಈ ದಿಸೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ದನಿಯಾಗಿ ಬೆಳಕು ಚೆಲ್ಲುವ ಕಾರ್ಯ ʼಈದಿನ.ಕಾಮ್ʼ ನಿರಂತರವಾಗಿ ಮಾಡುತ್ತಿದೆ.
ಈ ಕುರಿತು ಈದಿನ.ಕಾಮ್ ಬೀದರ್ ಮೀಡಿಯಾ ಸಹಾಯವಾಣಿಗೆ ಸಾರ್ವಜನಿಕರು ಕಳುಹಿಸಿದ ಕುಂದು ಕೊರತೆ ವರದಿ ಇಲ್ಲಿದೆ.
ಬೀದರ್‌ದಿಂದ ವಡಗಾಂವ(ದೇ) ಗ್ರಾಮ ಸೇರಿದಂತೆ ಹತ್ತಾರು ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಕಂದಗೂಳ ಗ್ರಾಮದ ಬಳಿಯ ಸೇತುವೆಯ ಒಂದು ಬದಿಯ ತಡೆಗೋಡೆ ಶಿಥಿಲಗೊಂಡಿದ್ದು, ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ಗಣೇಶ ಚತುರ್ಥಿ ಸಂದರ್ಭದಲ್ಲಿ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಸೇತುವೆಯ ಒಂದು ಭಾಗ ಶಿಥಿಲಗೊಂಡಿದೆ. ಇದರಿಂದ ವಡಗಾಂವ್(ದೇ), ಚಿಂತಾಕಿ, ಜಮಗಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ನಿತ್ಯ ಸಂಚರಿಸುತ್ತಾರೆ. ಸೇತುವೆ ಶಿಥಿಲಗೊಂಡಿರುವುದರಿಂದ ಕೆಲ ದಿನಗಳ ಎಮ್ಮೆ ಕರು ಮಂಜಾ ನದಿಯಲ್ಲಿ ಬಿದ್ದು ಸಾವನಪ್ಪಿದ ಘಟನೆ ಜರುಗಿದೆ ಎಂದು ಸ್ಥಳೀಯರು ಹೇಳಿದರು.

ʼಈ ರಸ್ತೆಯಲ್ಲಿ ನಿತ್ಯ ತೆರಳುವ ಪ್ರಯಾಣಿಕರು, ರೈತಾಪಿ ವರ್ಗದವರು, ದನ ಕುರಿಗಾಯಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ಬಂದೊದಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಸೇತುವೆ ತಡೆಗೋಡೆ ನಿರ್ಮಿಸಿ, ಮುಂದೆ ಅನಾಹುತವಾಗದಂತೆ ಎಚ್ಚರವಹಿಸಬೇಕುʼ ಎಂದು ಖಾನಾಪುರ ಗ್ರಾಮಸ್ಥ ಕಾಶಿನಾಥ ಬೆಲ್ಲೆ ಆಗ್ರಹಿಸಿದ್ದಾರೆ.
ಚರಂಡಿ ಸ್ವಚ್ಛಗೊಳಿಸಿ :
ಔರಾದ ತಾಲೂಕಿನ ಸಂತಪೂರ ಗ್ರಾಮದ ವಾರ್ಡ್ ನಂ. 3ರಲ್ಲಿ ಸುಮಾರು ತಿಂಗಳಿನಿಂದ ಚರಂಡಿಯಲ್ಲಿ ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ನೀರು ಸರಾಗವಾಗಿ ಮುಂದಕ್ಕೆ ಹೋಗುತ್ತಿಲ್ಲ. ಸೊಳ್ಳೆಗಳ ಕಾಟ ಮಿತಿಮೀರಿದೆ. ಇದರಿಂದ ಗಬ್ಬು ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಪಿಡಿಒ, ಸದಸ್ಯರಿಗೆ ತಿಳಿಸಿದರೂ ಕ್ಯಾರೆ ಅನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತವಾಗಿರು ಸಂತಪೂರ ಗ್ರಾಮ ಪಂಚಾಯತ್ ಕೇಂದ್ರದ ಕೆಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲದೇ ಇರುವುದು ವಿಪರ್ಯಾಸವಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಬೇಕುʼ ಎಂದು ವಾರ್ಡ್ ನಿವಾಸಿ, ಕೆಆರ್‌ಎಸ್ ಪಕ್ಷದ ಮುಖಂಡ ವಿಠ್ಠಲರಾವ್ ಚಟ್ನಾಳಕರ್ ಒತ್ತಾಯಿಸಿದ್ದಾರೆ.
ಶಿಥಿಲಗೊಂಡ ವಿದ್ಯುತ್ ಕಂಬ ಬದಲಾಯಿಸಿ :
ಭಾಲ್ಕಿ ತಾಲೂಕಿನ ಬಾಳೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಗ್ರಾಮದ ಶಿವಪುತ್ರ ಕಾಶಿನಾಥ ಅವರ ಮನೆ ಎದುರುಗಡೆ ಇರುವ ವಿದ್ಯುತ್ ಕಂಬ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಕೂಡಲೇ ಕಂಬ ಬದಲಾಯಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ ಹಲವು ತಿಂಗಳಿಂದ ವಿದ್ಯುತ್ ಕಂಬ ಶಿಥಿಲಗೊಂಡು ಕಬ್ಬಿಣದ ಸರಳು ತೇಲಿವೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಎರಡು ತಿಂಗಳು ಕಳೆದರೂ ನಿರ್ಲಕ್ಷಿಸುತ್ತಿದ್ದಾರೆ. ವಿದ್ಯುತ್ ಕಂಬ ನೆಲಕ್ಕುರಳಿ ಅನಾಹುತ ಸಂಭವಿಸತ್ತದೆ ಎಂಬ ಮುನ್ನೆಚರಿಕೆಯಿಂದ ಸ್ಥಳೀಯರು ಕಂಬಕ್ಕೆ ಹಗ್ಗ ಕಟ್ಟಿ ನಿಲ್ಲಿಸಲಾಗಿದೆ. ಕಂಬ ಉರುಳಿದರೆ ಸುತ್ತಲಿನ ನಿವಾಸಿಗಳಿಗೆ, ದನಕರುಗಳಿಗೆ ಅಪಾಯ ಕಟ್ಟಿಟ್ಟಬುತ್ತಿ ಎಂಬಂತಿದೆ. ಈಗಲಾದರೂ ಅಧಿಕಾರಿಗಳು ವಿದ್ಯುತ್ ಕಂಬ ಬದಲಾಯಿಸಬೇಕುʼ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜೋರು ಮಳೆಯಾದ್ರೆ ಅಂಗನವಾಡಿಗೆ ರಜೆ :
ಬೀದರ್ ತಾಲೂಕಿನ ರೇಕುಳಗಿ ಗ್ರಾಮದ ಅಂಗನವಾಡಿ ಕೇಂದ್ರ-1ರ ಎದುರುಗಡೆ ಸ್ವಚ್ಛತೆ ಎಂಬುದು ಮರಿಚೀಕೆಯಾಗಿದ್ದು, ಪುಟ್ಟ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹೋಗುವುದು ಕಷ್ಟಕರವಾಗಿದೆ.
ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ತೆರೆದ ಚರಂಡಿ ಹರಿಯುತ್ತದೆ. ಮಕ್ಕಳು ಅದನ್ನು ದಾಟಿಕೊಂಡು ಹೋಗಬೇಕು. ಅಯಾತಪ್ಪಿ ಚರಂಡಿಯಲ್ಲಿ ಬಿದ್ದರೆ ಅನಾಹುತ ಸಂಭವಿಸುವ ಆತಂಕವಿದೆ. ಇನ್ನು ಜೋರು ಮಳೆಯಾದರೆ ಅಂಗನವಾಗಿ ಕೇಂದ್ರ ಆವರಣ ಜಲಾವೃತವಾಗುತ್ತದೆ. ಹೆಚ್ಚಿನ ನೀರು ಸಂಗ್ರಹವಾಗುವ ಕಾರಣ ಮಕ್ಕಳು ಅಂಗನವಾಡಿಗೆ ಬರಲು ದಾರಿ ಇಲ್ಲದಿಂತಾಗುತ್ತದೆ. ಹೀಗಾಗಿ ಅಂದು ಅಂಗನವಾಡಿಗೆ ರಜೆ ಕೊಡುವುದು ಅನಿವಾರ್ಯ ಎಂಬಂತಾಗಿದೆʼ ಎಂದು ಗ್ರಾಮ ಪಂಚಾಯತ್ ಸದಸ್ಯ ಕ್ರಿಸ್ಟೋಫರ್ ದೂರಿದ್ದಾರೆ.

ʼಅಂಗನವಾಡಿ ಮುಂದೆ ಗ್ರಾಮದ ಚರಂಡಿ ನೀರು ಹರಿದು ಹೋಗುವ ಕಾರಣ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ. ಚರಂಡಿ ದಾಟಿ ಹೋಗುವ ವೇಳೆ ಮಕ್ಕಳು ಚರಂಡಿಯಲ್ಲಿ ಬೀಳುವ ಭಯ ಕಾಡುತ್ತಿದೆ. ಕೂಡಲೇ ಕ್ಷೇತ್ರದ ಶಾಸಕರು, ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನಹರಿಸಿ ಅಂಗನವಾಡಿ ಕೇಂದ್ರದ ಮುಂಭಾಗ ಸ್ವಚ್ಛಗೊಳಿಸಿ, ಸೂಕ್ತವಾದ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕುʼ ಎಂದು ಒತ್ತಾಯಿಸಿದ್ದಾರೆ.
- ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ಮೀಡಿಯಾ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.