ಸರ್ಕಾರಿ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಐದು ತಿಂಗಳಿಂದ ಗೌರವ ಧನ ಬಿಡುಗಡೆಯಾಗಿಲ್ಲ. ಸರ್ಕಾರದ ಬಿಡಿಗಾಸು ಗೌರವಧನ ನಂಬಿಕೊಂಡು ಜೀವನ ನಡೆಸುತ್ತಿರುವ ಅತಿಥಿ ಶಿಕ್ಷಕರು ಸಾಲದಲ್ಲೇ ದಸರಾ, ದೀಪಾವಳಿ ಹಬ್ಬಗಳು ಆಚರಿಸುವಂತಾಗಿದೆ.
ಬೀದರ್ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಿಗೆ 287 ಹಾಗೂ ಪ್ರಾಥಮಿಕ ಶಾಲೆಗಳಿಗೆ 632 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ 10,000 ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ 10,500 ನಿಗದಿಪಡಿಸಲಾಗಿದೆ. ಕಾಯಂ ಶಿಕ್ಷಕರ ವರ್ಗಾವಣೆಯಿಂದ ಖಾಲಿಯಾದ ಪ್ರಾಥಮಿಕ ಕೆಲ ಶಾಲೆಗಳಿಗೆ 32 ಅತಿಥಿ ಶಿಕ್ಷಕರನ್ನು ಎರಡನೇ ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಔರಾದ್ (147), ಬಸವಕಲ್ಯಾಣ (212), ಭಾಲ್ಕಿ (114), ಹುಮನಾಬಾದ್ (109) ಹಾಗೂ ಬೀದರ್ (50) ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಸಲು ಸರ್ಕಾರದಿಂದ ಸೆಪ್ಟೆಂಬರ್ 24ರಂದು ಅನುದಾನ ಬಿಡುಗಡೆಯಾಗಿದೆ. ಆದರೆ, ಆಯಾ ತಾಲೂಕು ಪಂಚಾಯತ್ ಖಾತೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ವರ್ಗಾವಣೆ ಪ್ರಕ್ರಿಯೆ ವಿಳಂಬ ಆಗುತ್ತಿರುವ ಕಾರಣಕ್ಕೆ ಅತಿಥಿ ಶಿಕ್ಷಕರಿಗೆ ನಿಗದಿತ ಸಮಯಕ್ಕೆ ಗೌರವ ಧನ ಸಿಗದೇ ಹೈರಾಣುಗುತ್ತಿದ್ದಾರೆ.
ಶೈಕ್ಷಣಿಕ ವರ್ಷ ಆರಂಭವಾದ ಜೂನ್‌ನಿಂದ ಅಕ್ಟೋಬರ್‌ವರೆಗೂ ಅತಿಥಿ ಶಿಕ್ಷಕರಿಗೆ ಗೌರವಧನ ಪಾವತಿಯಾಗಿಲ್ಲ. ಐದು ತಿಂಗಳ ವೇತನ ಇಲ್ಲದೆ ಶಿಕ್ಷಕರು ಜೀವನ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ. ʼಇಂದಲ್ಲ ನಾಳೆʼ ಬರಬಹುದು ಎಂಬ ಭರವಸೆಯೊಂದಿಗೆ ಸ್ನೇಹಿತರ ಬಳಿ ಕೈಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ʼದಸರಾ, ದೀಪಾವಳಿ ಹಬ್ಬಕ್ಕೆ ಸಂಬಳ ಕೈ ಸೇರಿದ್ದರೆ ಖುಷಿಯಿಂದ ಹಬ್ಬ ಆಚರಿಸುತ್ತಿದ್ದೆವು. ಆದರೆ, ಗೌರವ ಧನ ಸಿಗದೇ ಇರುವ ಕಾರಣಕ್ಕೆ ವರ್ಷಕ್ಕೊಮ್ಮೆ ಬರುವ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರರ ಬಳಿ ಸಾಲ ಪಡೆದು ನಿರಾಸೆಯಿಂದ ಹಬ್ಬ ಆಚರಿಸುವಂತಾಗಿದೆ. ನಿತ್ಯದ ಖರ್ಚು, ಕುಟುಂಬ ನಿರ್ವಹಣೆ ಸಾಧ್ಯವಾಗದೆ ಪ್ರತಿ ತಿಂಗಳು ಸಾಲ ಮಾಡುವಂತಾಗಿದೆʼ ಎಂದು ಹೆಸರು ಹೇಳಲಿಚ್ಚಿಸದ ಔರಾದ್ ತಾಲೂಕಿನ ಅತಿಥಿ ಶಿಕ್ಷಕರೊಬ್ಬರು ʼಈದಿನ.ಕಾಮ್ʼ ʼಜೊತೆಗೆ ಮಾತನಾಡಿ ಅಳಲು ತೋಡಿಕೊಂಡರು.
ಔರಾದ್ ತಾಲೂಕು ಅಲ್ಲದೇ ಉಳಿದ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ಪರಿಸ್ಥಿತಿ ಭಿನ್ನವೇನಲ್ಲ. ನಮಗೂ ಗೌರವಧನ ಪಾವತಿಯಾಗಿಲ್ಲ ಎಂದು ಗೋಳು ಹೇಳಿಕೊಂಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಗೌರವಯುತವಾಗಿ ಬದುಕಲು ನಿಗದಿತ ಸಮಯಕ್ಕೆ ಸರ್ಕಾರ ಸಂಭಾವಣೆ ಹಣ ಪಾವತಿಸಬೇಕು. ಆದರೆ, ಐದಾರು ತಿಂಗಳ ಕಾಯಬೇಕು. ಅಲ್ಲಿಯವರೆಗೆ ನಮ್ಮ ಪಾಡೇನುʼ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೀದರ್ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರಿ ಪಾವತಿಸಬೇಕಿದ್ದ 461.01 ಲಕ್ಷ ಮೊತ್ತವನ್ನು ಆಯಾ ತಾಲೂಕು ಪಂಚಾಯಿತಿ ಖಾತೆಗೆ ಸರ್ಕಾರ ಬಿಡುಗಡೆಯಾಗಿದೆ. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಬೇಕು. ನಂತರ ಶಿಕ್ಷಕರ ಖಾತೆಗೆ ಜಮಾ ಆಗುತ್ತದೆ. ಈಗಾಗಲೇ ಎಲ್ಲ ಬಿಇಒ ಅವರಿಗೆ ತಿಳಿಸಲಾಗಿದೆ. ಶೀಘ್ರದಲ್ಲೇ ಎಲ್ಲ ಅತಿಥಿ ಶಿಕ್ಷಕರ ಖಾತೆಗೆ ಗೌರವ ಧನ ಪಾವತಿಸಲು ತಿಳಿಸಲಾಗುವುದುʼ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಲೀಂ ಪಾಷ ʼಈದಿನ.ಕಾಮ್ʼ ಗೆ ತಿಳಿಸಿದ್ದಾರೆ.
ʼಈ ಕುರಿತು ಭಾಲ್ಕಿ ಹಾಗೂ ಬಸವಕಲ್ಯಾಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈದಿನ.ಕಾಮ್ ಜೊತೆಗೆ ಮಾತನಾಡಿ, ʼನಮ್ಮ ತಾಲೂಕಿನ ಪ್ರಾಥಮಿಕ ಅತಿಥಿ ಶಿಕ್ಷಕರ ಗೌರವ ಧನ ದೀಪಾವಳಿ ಹಬ್ಬದ ಮುಂಚೆ ದಿನವೇ ಶಿಕ್ಷಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಹಬ್ಬದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುವ ಕಾರಣ ಖಾತೆಗೆ ಹಣ ವರ್ಗಾವಣೆ ಆಗಿಲಿಲ್ಲ. ಇಂದು ಅಥವಾ ನಾಳೆ ಜಮೆ ಆಗುತ್ತದೆ. ಪ್ರೌಢ ಶಾಲೆ ಅತಿಥಿ ಶಿಕ್ಷಕರ ಸಂಭಾವನೆ ಇನ್ನೂ ವರ್ಗಾವಣೆ ಮಾಡಲಿಲ್ಲʼ ಎಂದಿದ್ದಾರೆ.
ʼಬೀದರ್ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 49 ಅತಿಥಿ ಶಿಕ್ಷಕರಿಗೆ ಪಾವತಿಸಬೇಕಿದ್ದ ಗೌರವ ಧನ ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ವರ್ಗಾವಣೆ ಆಗಿಲ್ಲ. ಬಂದ ಬಳಿಕ ಶಿಕ್ಷಕರ ಖಾತೆಗೆ ವರ್ಗಾವಣೆ ಮಾಡಲಾಗುವುದುʼ ಎಂದು ಬಿಇಒ ಟಿ.ಆರ್.ದೊಡ್ಡೆ ತಿಳಿಸಿದ್ದಾರೆ.
ʼರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಶಿಕ್ಷಕರಿಗೆ ಮೆರಿಟ್ ನೇಮಕಾತಿ ಪ್ರಕ್ರಿಯೆ ಕೈಬಿಡಬೇಕು. ಬೇಸಿಗೆ ಸೇರಿ 12 ತಿಂಗಳ ವೇತನ ನೀಡಬೇಕು ಜೊತೆಗೆ ಶೇ.5ರಷ್ಟು ಕೃಪಾಂಕ ನೀಡಬೇಕು. ಸರ್ಕಾರಿ ಶಿಕ್ಷಕರಿಗೆ ನೀಡುವ ವಿಮೆ, ಸೇವಾ ಭದ್ರತೆ ಸೇರಿ ಇತರೆ ಸೌಲಭ್ಯಗಳು ಅತಿಥಿ ಶಿಕ್ಷಕರಿಗೂ ಕೊಡಬೇಕು. ಅತಿಥಿ ಶಿಕ್ಷಕ ಬದಲಾಗಿ ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎಂದು ನಮೂದಿಸುವುದು. ಪ್ರತಿ ತಿಂಗಳು ನೇರವಾಗಿ ಖಾತೆಗೆ ವೇತನ ಪಾವತಿಸಬೇಕುʼ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ಔರಾದ್ ತಾಲೂಕು ಘಟಕ ಅಧ್ಯಕ್ಷ ನಾಗೇಂದ್ರ ಚಿಟಗೀರೆ ಆಗ್ರಹಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ವಕ್ಫ್ ಬಿಗ್ ಬ್ರೇಕಿಂಗ್: ಬಿಜೆಪಿ ಪ್ರಣಾಳಿಕೆಯಲ್ಲಿ ತಾನೇ ಒತ್ತುವರಿ ತೆರವು ಭರವಸೆ ನೀಡಿದ್ದ ಮೋದಿ
ʼಔರಾದ್ ತಾಲೂಕಿನ ಒಟ್ಟು 147 ಅತಿಥಿ ಶಿಕ್ಷಕರಲ್ಲಿ 100 ಅತಿಥಿ ಶಿಕ್ಷಕರ ಗೌರವ ಧನ ನ.4ರಂದು ಖಾತೆಗೆ ವರ್ಗಾವಣೆ ಮಾಡಲಾಗಿದೆ. ಉಳಿದ 47 ಅತಿಥಿ ಶಿಕ್ಷಕರ ಹಾಜರಾತಿ, ರಜೆ ಪ್ರಕ್ರಿಯೆ ಪರಿಶೀಲಿಸಿ ಬಳಿಕ ಎರಡು ದಿನಗಳ ಒಳಗಾಗಿ ಅವರ ಖಾತೆಗೂ ಗೌರವ ಧನ ಜಮೆ ಮಾಡಲಾಗುವುದು ಎಂದು ಔರಾದ್ ತಾಲೂಕು ಪ್ರಭಾರ ಬಿಇಒ ಪ್ರಕಾಶ್ ರಾಠೋಡ್ ʼಈದಿನ.ಕಾಮ್ʼ ಗೆ ಮಾಹಿತಿ ನೀಡಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.