ಕಾರ್ಕಳದ ಅಜೆಕಾರಿನಲ್ಲಿ ಪ್ರಿಯತಮನ ಜೊತೆ ಸೇರಿ ಗಂಡನನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷಿಗಳು ಸಿಕ್ಕಿದರೂ ಕೂಡಾ ಕೊಲೆಗಡುಕರನ್ನು ಪೊಲೀಸರು ರಕ್ಷಿಸುವ ಕೆಲಸ ನಡೆಸುತ್ತಿದ್ದಾರೆ ಎಂದು ಕೊಲೆಯಾದ ಬಾಲಕೃಷ್ಣ ಪೂಜಾರಿ ಸಹೋದರ ಪ್ರಕಾಶ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮಗೆ ಪೊಲೀಸ್ ಇಲಾಖೆ ಮೇಲೆ ಅನುಮಾನ ಬರುತ್ತಿದ್ದು, ಈ ತನಿಖೆ ನಮಗೆ ಬೇಜಾರು ತರುವ ರೀತಿಯಲ್ಲಿ ಹೋಗುತ್ತಿದೆ. ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಸಿಕ್ಕಿದರೂ ಕೂಡಾ ಇಲಾಖೆಯವರು ಈ ಪ್ರಕರಣವನ್ನು ವೇಗವಾಗಿ ಮುಗಿಸುತ್ತಿಲ್ಲ. ಹಣದ ಪ್ರಭಾವದಿಂದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಆರೋಪಿಯ ತಂದೆ ಸೂಟ್‌ಕೇಸ್ ಹಿಡಿದುಕೊಂಡು ಕಾರ್ಕಳ ಡಿವೈಎಸ್‌ಪಿ ಹಿಂದೆ ಸುತ್ತುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಸರಿಯಾದ ತನಿಖೆ ಮಾಡದೆ ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಖಚಿತ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ದುಷ್ಕರ್ಮಿಗಳ ತಂಡದಿಂದ ಯುವಕನ ಹತ್ಯೆ
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ ಅರುಣ್ ಕುಮಾರ್ ಅವರನ್ನು ಕುಟುಂಬದ ಸದಸ್ಯರು ಭೇಟಿಯಾಗಿ ಆರೋಪಗಳಿಗೆ ಕಾನೂನಿನಡಿಯಲ್ಲಿ ಸರಿಯಾದ ಶಿಕ್ಷೆಯಾಗುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಲೆಯಾದ ಬಾಲಕೃಷ್ಣ ಪೂಜಾರಿಯ ತಂದೆ ಸಂಜೀವ ಪೂಜಾರಿ, ಸಹೋದರಿ ಶಶಿರೇಖಾ ಇದ್ದರು.