ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ಸಂಸದರು ರಾಜೀನಾಮೆ ನೀಡಿದ ಕಾರಣದಿಂದಾಗಿ ಖಾಲಿಯಾದ ಹುದ್ದೆಗೆ ಉಪಚುನಾವಣೆ ನಡೆಯಲು ಇನ್ನು ಹತ್ತು ದಿನಗಳಷ್ಟೇ ಬಾಕಿಯಿದೆ. ಈ ನಡುವೆ ಚುನಾವಣಾ ಆಯೋಗವು (ಇಸಿಐ) 14 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ದಿನಾಂಕವನ್ನು ಬದಲಾಯಿಸಿದೆ.
ಚುನಾವಣಾ ಆಯೋಗವು ಸೋಮವಾರ ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಮನವಿಯಂತೆ ಉಪಚುನಾವಣೆಯನ್ನು ನವೆಂಬರ್ 13ರಿಂದ ನವೆಂಬರ್ 20ಕ್ಕೆ ಮರು ನಿಗದಿಪಡಿಸಿದೆ.
ಇಸಿಐ ಅಕ್ಟೋಬರ್ 15ರಂದು 48 ವಿಧಾನಸಭಾ ಸ್ಥಾನಗಳಿಗೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳನ್ನು ಘೋಷಿಸಿದೆ. 20ರಂದು ಮತದಾನ ನಡೆಯುವ ಮಹಾರಾಷ್ಟ್ರದ ನಾಂದೇಡ್ ಸಂಸದೀಯ ಕ್ಷೇತ್ರ ಮತ್ತು ಉತ್ತರಾಖಂಡದ ಕೇದಾರನಾಥ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಎಲ್ಲಾ ಸ್ಥಾನಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿತ್ತು. ಆದರೆ ಇದೀಗ ದಿನಾಂಕ ಬದಲಾವಣೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಸಂಡೂರು ಉಪಚುನಾವಣೆ | ರೆಡ್ಡಿ-ರಾಮುಲು v/s ಲಾಡ್-ತುಕಾರಾಮ್; ಗೆಲ್ಲೋದ್ಯಾರು?
“ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ದಿನಾಂಕ ಬದಲಾವಣೆಗಾಗಿ ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು (ಬಿಜೆಪಿ, ಐಎನ್‌ಸಿ, ಬಿಎಸ್‌ಪಿ, ಆರ್‌ಎಲ್‌ಡಿ ಸೇರಿದಂತೆ) ಮತ್ತು ಕೆಲವು ಸಾಮಾಜಿಕ ಸಂಸ್ಥೆಗಳು ಮನವಿ ಮಾಡಿದೆ. ಮನವಿಯನ್ನು ಪರಿಗಣಿಸಿ ದಿನಾಂಕವನ್ನು ಬದಲಾಯಿಸಲಾಗಿದೆ” ಎಂದು ಚುನಾವಣಾ ಆಯೋಗ ತಿಳಿಸಿದೆ.
ಯಾವೆಲ್ಲ ಕ್ಷೇತ್ರಗಳಲ್ಲಿ ದಿನಾಂಕ ಬದಲು?
ಕೇರಳದ ಪಾಲಕ್ಕಾಡ್, ಪಂಜಾಬ್‌ನ ಡೇರಾ ಬಾಬಾ ನಾನಕ್, ಚಬ್ಬರ್ವಾಲ್, ಗಿಡ್ಡರ್ಬಹಾ, ಬರ್ನಾಲಾ, ಉತ್ತರ ಪ್ರದೇಶದ ಮೀರಾಪುರ, ಕುಂದರ್ಕಿ, ಗಾಜಿಯಾಬಾದ್, ಖೈರ್, ಕರ್ಹಾಲ್, ಸಿಸಮೌ, ಫುಲ್ಪುರ್, ಕತೇಹಾರಿ ಮತ್ತು ಮಜವಾನ್ ಕ್ಷೇತ್ರಗಳಲ್ಲಿ ನವೆಂಬರ್ 13ರ ಬದಲಾಗಿ ನವೆಂಬರ್ 20ರಂದು ಉಪಚುನಾವಣೆ ನಡೆಯಲಿದೆ. ಮತ ಎಣಿಕೆ ಈ ಹಿಂದೆ ಘೋಷಿಸಿದಂತೆ ನವೆಂಬರ್ 23ರಂದೇ ನಡೆಯಲಿದೆ.
