ಕುಲಾಂತರಿ ಬೀಜ ನಿಯಮ ಜಾರಿಗೆ ವಿರೋಧಿಸಿ,ಹೇಮಾವತಿ ನಾಲೆಗೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ರದ್ದು ಹಾಗೂ ಮಳೆಯಿಂದ ಆಗಿರುವ ಬೆಳೆಹಾನಿಗೆ ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ರವೀಶ್ ಅವರ ನೇತೃತ್ವದಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಪರಿಸರವಾದಿ ಸಿ.ಯತಿರಾಜು, ಮ್ಯಾನ್ಸೆಂಟೋ,ಭೆಯರ್,ಕಾರ್ಗಿಲ್ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಕುಲಾಂತರಿ ತಳಿಗಳನ್ನು ಜಾರಿಗೆ ತರುವ ಮೂಲಕ,ದೇಶಿಯ ತಳಿಗಳನ್ನು ನಾಶಮಾಡಿ, ಜೀವ ವೈವಿದ್ಯತೆಯನ್ನು ಹಾಳುಮಾಡಿ ಕೃಷಿಕ್ಷೇತ್ರವನ್ನು ಮತ್ತು ಆಹಾರ ಸಾರ್ವಭೌಮತೆಯನ್ನು ತನ್ನ ಕೈಯಲ್ಲಿ ಹೊಂದುವ ಹುನ್ನಾರವನ್ನು ಕಳೆದ 25 ವರ್ಷಗಳಿಂದಲೂ ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಲೇ ಬಂದಿವೆ.ಕುಲಾಂತರಿ ತಳಿಗಳ ಬೆಳೆಗಳಿಂದ, ಆಪಾರವಾದ ಕೀಟನಾಶಕಗಳ ಸಿಂಪರಣೆಯಿಂದ ಮನುಷ್ಯನ ಆರೋಗ್ಯದ ಮೇಲೆ, ಪರಿಸರದ ಮೇಲೆ, ಮಣ್ಣಿನ ಮೇಲೆ ಮತ್ತು ಕುಲಾಂತರಿ ಆಹಾರ ಬಳಸುವ ಜನರ ಮೇಲೆ ಎಂತಹ ಪರಿಣಾಮ ಬೀರುತ್ತದೆ .ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗ ತುತ್ತಾಗಬೇಕಾಗುತ್ತದೆ. ಕೃಷಿ ಮತ್ತು ಆಹಾರ ಸಾರ್ವಭೌಮತ್ವ ಹೋಗುತ್ತದೆ. ಹಾಗಾಗಿ ಸುಪ್ರಿಂಕೋರ್ಟಿನ ನಿರ್ದೇಶನದ ಮೇರೆಗೆ ಕುಲಾಂತರಿ ಬೀಜ ನೀತಿ ರೂಪಿಸಲು ಹೊರಟಿರುವ ಕೇಂದ್ರ ಸರಕಾರ ಇದರಿಂದ ಹಿಂದೆ ಸರಿಯಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ರೈತ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ಮಾತನಾಡಿ, ತುಮಕೂರು ಜಿಲ್ಲೆಯ ರೈತರು ತಮ್ಮ ಪಾಲಿನ ಹೇಮಾವತಿ ನೀರನ್ನು ಪಡೆಯಲು ಒದ್ದಾಡುತ್ತಿರುವಾಗ ನೇರವಾಗಿ ಮಾಗಡಿಗೆ ನೀರು ಹರಿಸಲು ತುಮಕೂರು ಮೂಲ ನಾಲೆಯ 70ನೇ ಕಿಲೋಮೀಟರ್ ನಿಂದ ಲಿಂಕ್‌ಕೆನಲ್ ಪೈಪ್ ಲೈನ್ ಮಾಡಲು ಹೊರಟಿರುವುದರಿಂದ ತುಮಕೂರು ಜಿಲ್ಲೆಯ ಸುಮಾರು 6 ತಾಲೂಕುಗಳ ರೈತರು ಹೇಮಾವತಿ ನೀರಿನಿಂದ ವಂಚಿತರಾಗುತ್ತಾರೆ.ಹಂಚಿಕೆಯಾಗಿರುವ ನೀರನ್ನು ಮೂಲ ನಾಲೆಯಿಂದ ಪಡೆಯಲು ಅವಕಾಶವಿರುವ್ಯದರಿಂದ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ಬಿಡಬೇಕು. ಈ ಸಂಬಂಧ ರಾಜ್ಯ ಸರರ್ಕಾರ ಹಠಮಾರಿತನ ಧೋರಣೆಯನ್ನು ಕೈಬಿಟ್ಟು ರೈತರ ಹಿತವನ್ನು ಕಾಪಾಡಬೇಕೆಂದು ರೈತ ಸಂಘದ ಒತ್ತಾಯವಾಗಿದೆ.ಒಂದು ವೇಳೆ ಸರಕಾರ ರೈತರ ವಿರೋಧದ ನಡುವೆಯೂ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮುಂದುವರೆಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡ ಹೊಸೂರು ರವೀಶ್ ಮಾತನಾಡಿ,ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತಲೆದೊರಿದೆ,ತ್ರಿಫೇಸ್ ವಿದ್ಯುತ್ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರ ಜೊತೆಗೆ ಬರದ ನಡುವೆಯೂ ಬ್ಯಾಂಕುಗಳು ಬೆಳೆ ಕಟಾವಿಗೆ ಮೊದಲೇ ಸಾಲ ಮರುಪಾವತಿಗೆ ಬಲವಂತದ ಕ್ರಮಗಳನ್ನು ಕೈಗೊಳ್ಳುತ್ತಿರುವುದು ರೈತರನ್ನು ಆಂತಕಕ್ಕೆ ದೂಡಿದೆ. ಇದಲ್ಲದೆ ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸದೆ ಕಚೇರಿಗೆ ಅಲೆಯುವಂತೆ ಮಾಡಲಾಗಿದೆ. ಈ ಎಲ್ಲಾ ಸಮಸ್ಯೆಗಳ ಕಡೆಗೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ ಮಾತನಾಡಿ,ತುಮಕೂರು ತಾಲೂಕು ಹೆಬ್ಬೂರು ಹೋಬಳಿ ವೃತ್ತದ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳನ್ನು ಜಿಲ್ಲಾಡಳಿತ ನಿಯೋಜನೆ ಮೇಲೆ ಕೆಲಸಕ್ಕೆ ತೆಗೆದುಕೊಂಡಿರುವುದರಿಂದ ಹಲವಾರು ಸಮಸ್ಯೆಗಳು ಉದ್ಬವಿಸಿವೆ. ನಾಡ ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಒಂದು ಕೆಲಸವೂ ನಡೆಯುತ್ತಿಲ್ಲ. ಹಾಗಾಗಿ ಹೆಬ್ಬೂರು ಹೋಬಳಿಯ ಎಲ್ಲಾ ವೃತ್ತದ ಗ್ರಾಮ ಆಡಳಿತಾಧಿಕಾರಿಗಳ ನಿಯೋಜನೆಯನ್ನು ರದ್ದುಪಡಿಸಿ, ಅವರ ಮೂಲ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮೋಹನ್ ಕುಮಾರ್,ಕೃಷ್ಣಪ್ಪ,ಮಹೇಶ್,ಡಿ.ಕೆ.ರಾಜು, ನರಸಪ್ಪ, ನಾಗರಾಜು, ರಾಮಚಂದ್ರಪ್ಪ, ಸುರೇಶ್,ತಿಮ್ಮೇಗೌಡ,ಎಸ್.ಕೃಷ್ಣಪ್ಪ,ಶ್ರೀನಿವಾಸ್, ನಾರಾಯಣಪ್ಪ,ಪುಟ್ಟಸ್ವಾಮಿ ಗಂಗಾದರಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
