ಗ್ರಾಮದಲ್ಲಿ ನಡೆದ ಹನುಮಾನ ಜಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ನ.3ರಂದು ಭಾನುವಾರ ಸಂಜೆ ನಡೆದಿದೆ.
ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ನ.3ರಂದು ಜರುಗಿದ ಹನುಮಾನ ಜಾತ್ರಾ ಮೆರವಣಿಗೆಯ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ದಲಿತ ಸಮುದಾಯದ ಯುವಕರು ಮತ್ತು ಸವರ್ಣೀಯರ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಸವರ್ಣೀಯರು ಜಾತಿ ನಿಂದನೆ ಮಾಡಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ದಲಿತ ಓಣಿಗೆ ನುಗ್ಗಿ ಕೆಲವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ‘ನಿಮಗೆ ಗ್ರಾಮದ ಒಳಗಡೆ ಬರಲು ಬಿಡುವುದಿಲ್ಲ. ಗ್ರಾಮದ ಎಲ್ಲ ರೀತಿಯ ಅಂಗಡಿಗಳನ್ನು ನಿಮಗಾಗಿ ಮುಚ್ಚುತ್ತೇವೆ’ ಎಂದು ಹೇಳಿ ಉದ್ದೇಶಪೂರ್ವಕವಾಗಿ ದಲಿತ ಯುವಕರ ಹಲ್ಲೆ ನಡೆಸಲಾಗಿದೆ ಎಂದು ದಲಿತ ಸಮುದಾಯದವರು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಲ್ಲಿ ದಲಿತ ಸಮುದಾಯದ ಕೆಲ ಯುವಕರು, ಮಹಿಳೆಯರು ಗಾಯಗೊಂಡಿದ್ದಾರೆ. ಸವರ್ಣಿಯರಿಂದ ಹಲ್ಲೆಗೊಳಗಾದ ದಲಿತ ಸಮುದಾಯವರು ನ.4ರಂದು ಖಟಕ ಚಿಂಚೋಳಿ ಠಾಣೆಗೆ ತೆರಳಿ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ನೋಟಿಸ್
ಘಟನೆ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ 73 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.