ಇ-ಶೌಚಾಲಯ ಹಾಗೂ ಕ್ಯಾಬಿನ್ ಶೌಚಾಲಯಗಳು ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ, ಸ್ಮಾರ್ಟ್ ಸಿಟಿ ಅಡಿಯಲ್ಲಿ 24 ಇ-ಟಾಯ್ಲೆಟ್(ಇ -ಶೌಚಾಲಯ) ಮತ್ತು 9 ಕ್ಯಾಬಿನ್ ಶೌಚಾಲಯ ನಿರ್ಮಿಸಿದ್ದು, ಶೌಚಾಲಯಗಳು ಉದ್ಘಾಟನೆಯಾದ ದಿನದಿಂದ ಇಂದಿಗೂ ಸೇವೆಗೆ ಲಭ್ಯವಾಗಲಿಲ್ಲ ಎಂಬುದು ಶಿವಮೊಗ್ಗ ನಾಗರಿಕರು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕೆ ನಿರ್ಮಿಸಿರುವ ಇ-ಶೌಚಾಲಯಗಳು ಇಂದಿಗೂ ಬಳಕೆಗೆ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಕಳ್ಳಾಟ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನ ಹರಿಸಿ ಸೂಕ್ತ ಕ್ರಮ ಜರುಗಿಸುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಸ್ಥಳೀಯರು ಕಾದು ಕುಳಿತಿದ್ದಾರೆ.
ಸ್ಥಳೀಯ ನಿವಾಸಿಗಳಾದ ಶಂಕರ್ ಕಾರ್ಪೆಂಟರ್, ಗೂಡ್ಸ್ ಆಟೋ ಚಾಲಕ ಶೇಖರ್ ಹಾಗೂ ಇಂದುಶೇಖರ್ ಎಂಬುವವರು ಈ ದಿನ.ಕಾಮ್‌ನೊಂದಗೆ ಮಾತನಾಡಿ, “ಸಾರ್ವಜನಿಕರ ತೆರಿಗೆ ಹಣದಿಂದ ಶಿವಮೊಗ್ಗ ನಗರದಲ್ಲಿ ಇ-ಶೌಚಾಲಯ ಹಾಗೂ ಕ್ಯಾಬಿನ್ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಇಂದಿಗೂ ಲಭ್ಯವಾಗಿಲ್ಲ. ಹಾಗೆಯೇ ಸಾರ್ವಜನಿಕರು, ಮಹಿಳೆಯರು, ವೃದ್ಧರು, ಮಕ್ಕಳು, ಕೂಲಿ ಕಾರ್ಮಿಕರಿಗೆ ಇ-ಶೌಚಾಲಯವನ್ನು ಹೇಗೆ ಉಪಯೋಗಿಸಬೇಕೆಂಬುದರ ಗುರುತುಗಳನ್ನೂ ನೀಡಿಲ್ಲ. ಅಲ್ಲದೆ ಉಪಯೋಗಿಸಲು ಯೋಗ್ಯವಿಲ್ಲದ ಸ್ಥಳಗಳಲ್ಲಿ ಇ ಶೌಚಾಲಯ ನಿರ್ಮಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಗರದ ಬಹುಭಾಗಗಳಲ್ಲಿ ಮನೆಗಳ ಶೌಚಾಲಯದ ನೀರು ಹಾಗೂ ಬಟ್ಟೆ ತೊಳೆದ ನೀರು ಎಲ್ಲ ಇಲ್ಲಿಗೆ ಬರುತ್ತೆ. ಅಂತಹ ಜಾಗದಲ್ಲಿ ಇ-ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಎಲ್ಲೂ ಕೂಡಾ ಇ-ಶೌಚಾಲಯಕ್ಕೆ ದಾರಿಯಿಲ್ಲ, ಯಾವುದೇ ರೀತಿಯ ನಾಮ ಫಲಕಗಳಿಲ್ಲ. ಕಾಯಿನ್ ಹಾಕಿ ಇ ಶೌಚಾಲಯ ಬಳಸಬೇಕು. ಎಲ್ಲಿ ಕಾಯಿನ್ ಹಾಕಬೇಕು, ಹೇಗೆ ಬಳಸಬೇಕು ಎನ್ನುವ ಯಾವುದೇ ಮಾಹಿತಿಯಿಲ್ಲ. ಆಕಸ್ಮಿಕವಾಗಿ ಒಳಗೆ ಹೋದಾಗ ನಂತರ ಬಾಗಿಲು ತೆರಯದೆ ಹೋದರೆ ಏನು ಮಾಡಬೇಕೆಂಬ ಭಯದಿಂದ ಯಾರೂ ಕೂಡಾ ಶೌಚಾಲಯ ಬಳಕೆಗೆ ಮುಂದಾಗುತ್ತಿಲ್ಲ” ಎಂದರು.

“ಈ ರೀತಿ ನಮ್ಮ ತೆರಿಗೆ ಹಣ ಪೋಲು ಮಾಡುತ್ತಿರುವುದು ಎಷ್ಟು ಸರಿ. ದೂರದ ಊರಿಂದ ಬಂದಂತಹವರು, ಸ್ಥಳೀಯರು, ನಿತ್ಯ ಕೆಲಸ ಮಾಡುವ ಕೂಲಿ ಕಾರ್ಮಿಕರು, ಮಹಿಳಾ ಕಾರ್ಮಿಕರು, ಮಕ್ಕಳು, ವೃದ್ಧರು ಹೀಗೆ ಅನೇಕರಿಗೆ ಭರವಸೆ ಉಂಟು ಮಾಡಿದ್ದ ಇ-ಶೌಚಾಲಯದಿಂದ ಈಗ ನಿರಾಸೆ ಉಂಟಾಗಿದೆ. ಇ-ಶೌಚಾಲಯದ ಪಕ್ಕದಲ್ಲಿರುವ ಜಾಗದಲ್ಲಿ ಅನಿವಾರ್ಯವಾಗಿ ಶೌಚಾಲಯಕ್ಕೆ ಬಳಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ” ಎಂದು ಹೇಳಿದರು.

“ಇದರ ಸಂಬಂಧ ಸ್ಥಳೀಯ ನಿವಾಸಿ ಮಹಾನಗರ ಪಾಲಿಕೆ ಸದಸ್ಯರಿಗೆ ಕೇಳಿದಕ್ಕೆ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಹಾಗೆಯೇ ಅದಕ್ಕೆ ಪ್ರತಿಯಾಗಿ ನಾವೂ ಕೂಡಾ, ನೀವು ಇಲ್ಲಿಯ ನಿವಾಸಿಗಳೇ. ನೀವು ಚುನಾವಣೆ ಬಂದಾಗ ಇದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಬೇಕಾಗುತ್ತೆಂದು ಹೇಳಿದ್ದೇವೆ. ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಅವರನ್ನು ಕೇಳಿ, ಇವರನ್ನು ಕೇಳಿ ಅಂತಾರೆ. ಯಾರು ಕೂಡ ಸ್ಪಂದಿಸುತ್ತಿಲ್ಲ. ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣ ಪೋಲಾಗಿದೆ” ಎಂದರು.

ಇ-ಶೌಚಾಲಯಗಳು ಇಂದಿಗೂ ತೆರಯದೆ, ತುಕ್ಕು ಹಿಡಿಯುವ ಮಟ್ಟಿಗೆ ಬಂದಿದ್ದು, ಜತೆಗೆ ನಿರ್ವಹಣೆಯಿಲ್ಲದೆ, ಉಪಕರಣಗಳೂ ಕೂಡಾ ಹಾಳಾಗಿವೆ. ವೈರ್ ಕನೆಕ್ಷನ್ ಬಿಚ್ಚಿಕೊಂಡಿದ್ದು, ಸಾರ್ವಜನಿಕರು ಅರಿಯದೆ ಅದರ ಪಕ್ಕದಲ್ಲಿ ನಿಂತು ಶೌಚಾಕ್ಕೆ ಹೋದಲ್ಲಿ ಕರೆಂಟ್ ಶಾಕ್ ತಗುಲುವ ಸಂಭವವೂ ಇದೆ.

ಮಾಜಿ ಸೈನಿಕ ಹಾಗೂ ಮಾನವ ಹಕ್ಕು ಹೋರಾಟದ ಮುಖಂಡ ಮಂಜುನಾಥ್ ಪೂಜಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿವಮೊಗ್ಗ ನಗರದ ಮುಖ್ಯ ಭಾಗವಾಗಿರುವ ಆರ್‌ಟಿಒ ಕಚೇರಿ ಪಕ್ಕದಲ್ಲಿರುವ ಜಿಲ್ಲಾಧಿಕಾರಿ ಕಚೇರಿ, ಕೋರ್ಟ್, ಜಯನಗರ ಪೊಲೀಸ್ ಸ್ಟೇಷನ್ ಪತ್ರಿಕಾ ಭವನ ಸ್ಥಳಗಳಿಗೆ ನಿತ್ಯ ನೂರಾರು ಜನರು ಕೆಲಸದ ಸಲುವಾಗಿ ಆಗಮಿಸುತ್ತಾರೆ. ಹಾಗಾಗಿ ಇಲ್ಲಿಯೂ ಶೌಚಾಲಯದ ಅವಶ್ಯಕತೆಯಿದೆ. ಇಲ್ಲಿ ಈವರೆಗೆ ಶೌಚಾಲಯ ತೆರೆಯದೆ ಸಾರ್ವಜನಿಕರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಶೌಚಾಲಯದ ಪಕ್ಕದಲ್ಲಿರುವ ನೀರಿನ ಟ್ಯಾಂಕ್ ಸೋರುತ್ತಿದೆ. ಅದನ್ನು ಯಾರೂ ಸಹ ಸರಿಪಡಿಸದೆ ಟ್ಯಾಂಕ್ ಆಚೆ ಪೈಂಟ್ ಮಾಡಿಸಿ ಏನೂ ಆಗಿಲ್ಲವೆಂಬಂತೆ ಮಾಡಿದ್ದಾರೆ. ಜನರ ತೆರಿಗೆ ಹಣ ಪೋಲು ಮಾಡಿ ಸಾರ್ವಜನಿಕರಿಗೆ ಮೋಸವೆಸಗಿದ್ದಾರೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಿ ಇದನ್ನು ಉಪಯೋಗಿಸಲು ಸಾಧ್ಯವಾಗುವಂತೆ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.

ಸ್ಮಾರ್ಟ್ ಸಿಟಿ ಇಇ(ಎಸ್‌ಎಸ್‌ಸಿಎಲ್) ವಿಜಯ್ ಕುಮಾರ್ ಮಾತನಾಡಿ, “ನಮ್ಮ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ನಂತರ ಅದು ಮಹಾನಗರ ಪಾಲಿಕೆ ವ್ಯಾಪ್ತಿಯಗೆ ನೀಡಿದ್ದೇವೆ. ಇಂದಿಗೂ ಅವರು ಟೆಂಡರ್ ಕರೆಯುತ್ತಿಲ್ಲ, ಈಗ ನಮ್ಮ ಸ್ಮಾರ್ಟ್ ಸಿಟಿ ವಾಯ್ದೆ ಮುಗಿದಿದೆ. ಹಾಗಾಗಿ ನಮ್ಮ ಗುರಿ ಏನಿದ್ದರೂ ಇಡೀ ದೇಶದಲ್ಲಿ 100 ಸ್ಮಾರ್ಟ್ ಸಿಟಿ ಯೋಜನೆಗೂ ಒಂದೇ ಕಾನೂನು. ನಾವು ಕೆಲಸ ಮಾಡಿ ಮಹಾನಗರ ಪಾಲಿಕೆಗೆ ಒಪ್ಪಿಸುವುದು ಅಷ್ಟೇ, ತದನಂತರದ ಎಲ್ಲವನ್ನು ಪಾಲಿಕೆಯವರು ಮುಂದುವರೆಸಬೇಕು. ನಾವು ಇ-ಶೌಚಾಲಯ ಮಾಡಿದಾಗ ಬಳಕೆಯಲ್ಲಿತ್ತು. ನಂತರ ದಿನಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಸೇರಿದಂತೆ ಯಾವುದೇ ಪ್ರಕ್ರಿಯೆಗಳು ನಡೆಯದ ಕಾರಣ ಅನುಪಯುಕ್ತವಾಗಿವೆ. ಈ ಸಂಬಂಧ ಮಹಾನಗರ ಪಾಲಿಕೆ ಇಂಜಿನಿಯರ್ ಗಮನಕ್ಕೆ ತರುವುದು ಸೂಕ್ತ” ಎಂದು ಹೇಳಿದರು.

“ನಾವು ಮಾಡಿದ ಎಲ್ಲ ಇ-ಶೌಚಾಲಯಗಳ ನಿರ್ವಹಣೆ ಹಾಗೂ ಸಿಬ್ಬಂದಿಗಳು ಇಲ್ಲದ ಕಾರಣ ಅಲ್ಲಿದ್ದಂತಹ ಉಪಕರಣಗಳು ಕಳುವಾಗಿವೆ. ನಮ್ಮ ಬಳಿಯೂ ಅದರ ಫೋಟೋ ಹಾಗೂ ವಿಡಿಯೋಗಳಿವೆ. ನಾವು ಪೊಲೀಸ್ ಕಂಪ್ಲೇಂಟ್ ನೀಡಿದ್ದೇವೆ. ನಾವು ಪ್ರತಿದಿನ ಹೇಗೆ ನೋಡಿಕೊಳ್ಳೋದು ಮಹಾನಗರ ಪಾಲಿಕೆ ಇದೆಲ್ಲದಕ್ಕೂ ಉತ್ತರಿಸಬೇಕು. ನಮ್ಮದು ಈಗ ಎಲ್ಲ ಸ್ಮಾರ್ಟ್ ಸಿಟಿ ಕೆಲಸ ಮುಗಿದಿದೆ” ಎಂದು ಜಾರಿಕೊಂಡರು.

ಮಹಾನಗರ ಪಾಲಿಕೆ ಎ ಇ ತ್ರಿವೇಣಿಯವರಿಗೆ ಈ ದಿನ.ಕಾಮ್ ಸಂಪರ್ಕಿಸಿದಾಗ ಮಾತನಾಡಿ, “ನಾನು ಇತ್ತೀಚೆಗೆ ಬಂದಿದ್ದೇನೆ. ಹಾಗಾಗಿ ಸ್ಮಾರ್ಟ್ ಸಿಟಿಯಿಂದ ಪ್ರಸ್ತಾವನೆ ಬಂದಿದೆಯಾ, ಟೆಂಡರ್ ಪ್ರಕ್ರಿಯೆ ಮಾಡಲು ಅವರು ಅಲ್ಲಿಂದ ನಮಗೆ ಕಳಿಸಿಕೊಡಬೇಕು. ಹಾಗಾಗಿ ನಿಮಗೆ ಸ್ಮಾರ್ಟ್ ಸಿಟಿಯವರು ತಪ್ಪು ಮಾಹಿತಿ ನೀಡಿದ್ದಾರೆ. ನಮಗೆ ಸ್ಮಾರ್ಟ್ ಸಿಟಿಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ನಾನು ನಮ್ಮ ಮುಖ್ಯ ಎಂಜಿನಿಯರ್ ಜತೆಗೆ ಮತ್ತೊಮ್ಮೆ ಪರಿಶೀಲಿಸಿ ನಿಮಗೆ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಲೋಕಾಪುರ ಸವದತ್ತಿ ರೈಲುಮಾರ್ಗ ನಿರ್ಮಾಣಕ್ಕೆ ಆಗ್ರಹ
“ಮಹಾನಗರ ಪಾಲಿಕೆಯವರು ಸ್ಮಾರ್ಟ್ ಸಿಟಿ ಮೇಲೆ, ಸ್ಮಾರ್ಟ್ ಸಿಟಿಯವರು ಮಹಾನಗರ ಪಾಲಿಕೆ ಮೇಲೆ ಗೂಬೆ ಕುರಿಸೋ ಕೆಲಸ ಮಾಡುತ್ತ ಕಳ್ಳಾಟವಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇದರ ಕುರಿತಾಗಿ ಏನೆಲ್ಲ ಅವ್ಯವಹಾರವಾಗಿದೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಮಾಡಿರುವ ಕೆಲಸಗಳ ಲೋಪವನ್ನು ಸರಿಪಡಿಸಿ ಮತ್ತೊಮ್ಮೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡುತ್ತಾರೆಯೇ ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೇವೆ” ಎಂದು ಶಿವಮೊಗ್ಗದ ಪ್ರಜ್ಞಾವಂತ ಪ್ರಜೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
