ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ

Date:

Advertisements
ಬಾಂಗ್ಲಾ, ಶ್ರೀಲಂಕಾದಲ್ಲಿ ಸರಣಿ ಜಯಿಸಿದ್ದ ಅತಿಯಾದ ಆತ್ಮವಿಶ್ವಾಸ ಭಾರತಕ್ಕೆ ಮುಳುವಾಯಿತು. ಇದರ ಜೊತೆ ಚುಟುಕು ಕ್ರಿಕೆಟಿನ ಹಣದ ಅಮಲು ನೆತ್ತಿಗೇರಿತ್ತು. ಇವೆಲ್ಲ ಕಾರಣಗಳಿಂದ ಭಾರತ ತಂಡದ ಗರ್ವಭಂಗವಾಗಿದೆ. ಹಿರಿಯ ಆಟಗಾರರು ವಿಫಲವಾಗಿರುವ ಕಾರಣ ಭಾರತ ತಂಡದಲ್ಲಿರುವ 35 ವರ್ಷ ವಯಸ್ಸು ದಾಟಿರುವ ಆಟಗಾರರು ನಿವೃತ್ತಿ ಪಡೆಯಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. 

ಕಳೆದ 18 ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಬಂಡವಾಳ ಬಟಾ ಬಯಲಾಗಿದೆ. ನ್ಯೂಜಿಲೆಂಡ್ ವಿರುದ್ಧ 3-0 ಸರಣಿ ಸೋತು ತವರಿನಲ್ಲಿ ಆಡಿದ 92 ವರ್ಷಗಳ ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಣಿ ಸೋಲಿನ ಆಘಾತ ಅನುಭವಿಸಿದೆ. ಇದೇ ಸಂದರ್ಭದಲ್ಲಿ ಸೋತ ತಂಡದಲ್ಲಿದ್ದ ಬಹುತೇಕ ಆಟಗಾರರನ್ನು ಎಲ್ಲ 10 ತಂಡಗಳಿಗೆ 2025ರ ಐಪಿಎಲ್ ಟೂರ್ನಿಗೆ ಹರಾಜು ಪ್ರಕ್ರಿಯೆಯಲ್ಲಿ ಉಳಿಸಿಕೊಳ್ಳಲಾಗಿದೆ. ಇವೆಲ್ಲವನ್ನು ಗಮನಿಸಿದರೆ ಆಟ, ಪ್ರತಿಭೆಗಳಿಗಿಂತ ಹಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಯಾರಿಗೂ ಅನಿಸದೆ ಇರದು.

ತಂಡಗಳ ನಾಯಕತ್ವ ವಹಿಸಿದ್ದ ಪ್ರಮುಖ ಆಟಗಾರರಾದ ಕೆ ಎಲ್‌ ರಾಹುಲ್, ರಿಷಬ್‌ ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್ ಆಯಾ ಫ್ರಾಂಚೈಸಿ ತಂಡಗಳು ಕೈಬಿಟ್ಟರೂ ಉಳಿದ ತಂಡಗಳು ಈ ಆಟಗಾರರನ್ನು ಅತ್ಯಧಿಕ ಬೆಲೆಗೆ ಖರೀದಿಸಲು ತುದಿಗಾಲಲ್ಲಿ ನಿಂತಿವೆ. ಆರ್‌ಸಿಬಿ ತಂಡ ವಿರಾಟ್‌ ಕೊಹ್ಲಿಯನ್ನು 21 ಕೋಟಿ ರೂ.ಗೆ ಉಳಿಸಿಕೊಂಡಿದೆ. ಹೈದರಾಬಾದ್‌ ತಂಡ ದಕ್ಷಿಣ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ ಅವರನ್ನು 23 ಕೋಟಿ ರೂ.ಗೆ ರೀಟೈನ್‌ ಮಾಡಿಕೊಂಡಿದೆ. ಐಪಿಎಲ್‌ ಎಂಬ ಸಾವಿರಾರು ಕೋಟಿ ಹರಿದು ಬರುವ ಲಾಭದಾಯಕ ಉದ್ಯಮದಲ್ಲಿ ನೈಜ ಪ್ರತಿಭೆ ಬೆಳಕಿಗೆ ಬರುವುದೇ ಇಲ್ಲ. ಐಪಿಎಲ್‌ನಲ್ಲಿ ಮಿಂಚಿದ ಬಹುತೇಕ ಆಟಗಾರರು ದೇಶಿಯ ಕ್ರಿಕೆಟ್‌ನಲ್ಲಾಗಲಿ ಅಥವಾ ಏಕದಿನ, ಟೆಸ್ಟ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವುದಿಲ್ಲ.          

ಟೆಸ್ಟ್‌, ಏಕದಿನ ಸೇರಿದಂತೆ ದೇಶಿಯ ಕ್ರೀಡೆಗಳಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್‌, ಸರ್ಫರಾಜ್‌ ಖಾನ್, ರಿಂಕು ಸಿಂಗ್, ತಿಲಕ್ ವರ್ಮಾ, ಧ್ರುವ್ ಜುರೆಲ್, ರಿಯಾನ್ ಪರಾಗ್, ಮಯಾಂಕ್ ಯಾದವ್ ಸೇರಿದಂತೆ ಹಲವು ಆಟಗಾರರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಹುತೇಕ ಸಂದರ್ಭದಲ್ಲಿ ಅವಕಾಶ ದೊರಕುವುದಿಲ್ಲ. ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಸೇರಿದಂತೆ ಹಲವು ಹಿರಿಯ ಆಟಗಾರರು ರಣಜಿ ಸೇರಿದಂತೆ ದೇಶೀಯ ಟೂರ್ನಿಯ ಬಗ್ಗೆ ತಾತ್ಸಾರ ತೋರುತ್ತಾರೆ. ಆದರೂ ಹಣ ಹರಿಯುವ ಐಪಿಎಲ್‌ ಟೂರ್ನಿಗೆ ಇವರನ್ನು ಖರೀದಿಸಲು ಫ್ರಾಂಚೈಸಿ ಮಾಲೀಕರು ಮುಗಿ ಬೀಳುತ್ತಾರೆ. ಈ ತಿಂಗಳ ಕೊನೆಯಲ್ಲಿ ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಅಂತಿಮ ಹಂತದ ಹರಾಜು ಪ್ರಕ್ರಿಯೆಯಲ್ಲಿ ಕೆಲವೇ ಆಟಗಾರರಿಗಾಗಿ ಕೋಟ್ಯಂತರ ದುಡ್ಡು ಹರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.

Advertisements

ಐಪಿಎಲ್, ಟಿ20ನಂತಹ ಚುಟುಕು ಕ್ರಿಕೆಟ್ ಪಂದ್ಯಗಳು ಶುರುವಾದ ನಂತರ ಅಪ್ಪಟ ಕ್ರಿಕೆಟ್‌ನ ಸೊಗಡು ಬಹುತೇಕ ಕಣ್ಮರೆಯಾಗತೊಡಗಿದೆ. ಇಲ್ಲಿ ಏನಿದ್ದರೂ ಹಣಕ್ಕಷ್ಟೆ ಮಹತ್ವ. ಇದಲ್ಲದೆ ಬ್ಯಾಟರ್‌ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತಾರು ನಿಯಮಗಳನ್ನು ಕೂಡ ಬದಲಿಸಲಾಗಿದೆ. ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿದ್ದ ಆಟಗಾರರು ಬಿಡುವು ಸಿಕ್ಕಾಗಲೆಲ್ಲ ರಣಜಿ ಹಾಗೂ ದೇಶಿಯ ಪಂದ್ಯಗಳಲ್ಲಿ ಆಡಿ ತಮ್ಮ ತಂಡಗಳನ್ನು ಗೆಲ್ಲಿಸುತ್ತಿದ್ದರು. ಇದು ಸ್ಥಳೀಯ ಮಟ್ಟದಲ್ಲಿ ಕ್ರೀಡಾಪಟುಗಳಿಗೂ ಸ್ಪೂರ್ತಿ ಹಾಗೂ ಪ್ರೋತ್ಸಾಹ ದೊರಕುತ್ತಿತ್ತು. ಆದರೆ ಈ ರೀತಿಯ ವಾತಾವರಣ ಈಗ ಬಹುತೇಕ ಕಣ್ಮರೆಯಾಗುತ್ತಿದೆ. ಬಹುತೇಕ ಆಟಗಾರರು ತಮ್ಮ ಆಟವನ್ನು ಐಪಿಎಲ್‌ಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇ‍‍ಷ | ಮಹಿಳಾ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು?

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ಸರಣಿಗೂ ಮುನ್ನ ದೇಶೀಯ ದುಲೀಪ್‌ ಟ್ರೋಫಿಯಲ್ಲಿ ಆಡಬೇಕೆಂಬ ಬಿಸಿಸಿಐ ಸೂಚನೆಯನ್ನು ಬಹುತೇಕ ಹಿರಿಯ ಆಟಗಾರರು ತಿರಸ್ಕರಿಸಿದ್ದರು. ಸೆ.5ರಿಂದ 22ರ ವರೆಗೆ ಬೆಂಗಳೂರು, ಆಂಧ್ರಪದೇಶದಲ್ಲಿ ದುಲೀಪ್‌ ಟ್ರೋಫಿ ನಡೆದಿತ್ತು. ಈ ಸರಣಿಯಲ್ಲಿ ಆಡಲು ವಿರಾಟ್‌ ಕೊಹ್ಲಿ, ರೋಹಿತ್‌, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜಾಗೆ ಬಿಸಿಸಿಐ ಸೂಚಿಸಿತ್ತು. ಆದರೆ ಇವರ್‍ಯಾರು ದುಲೀಪ್‌ ಟ್ರೋಫಿಯಲ್ಲಿ ಆಟವಾಡಲಿಲ್ಲ. ಶುಭಮನ್‌ ಗಿಲ್‌, ಸರ್ಫರಾಜ್‌ ಖಾನ್‌, ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌ ಮಾತ್ರ ದುಲೀಪ್‌ ಟ್ರೋಫಿ ಆಡಿದ್ದರು. ದುಲೀಪ್‌ ಟೂರ್ನಿ ಆಡಿದ ಇವರೆಲ್ಲಲೂ ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ತಕ್ಕಮಟ್ಟಿನ ಪ್ರದರ್ಶನ ತೋರಿದ್ದರು ಎಂಬುದು ಗಮನಾರ್ಹ.  

ದಿಗ್ಗಜ ಆಟರಾರರ ವೈಫಲ್ಯ, ಕೋಚ್‌ ಬಗ್ಗೆ ಟೀಕೆ

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಕೊಹ್ಲಿ ಸರಣಿಯ 3 ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ 15.50ರ ಸರಾಸರಿಯಲ್ಲಿ ಕಲೆ ಹಾಕಿದ್ದು ಕೇವಲ 93 ರನ್‌. ಇದರಲ್ಲಿ ಬೆಂಗಳೂರಿನಲ್ಲಿ ಪೇರಿಸಿದ 70 ರನ್‌ ಕೂಡ ಸೇರಿದೆ. ಅಂದರೆ ಉಳಿದ 5 ಇನಿಂಗ್ಸ್‌ನಲ್ಲಿ ಗಳಿಸಿದ್ದು ಕೇವಲ 23 ರನ್‌. ರೋಹಿತ್ 2024ರಲ್ಲಿ ಆಡಿದ 12 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ 22.72ರ ಸರಾಸರಿಯಲ್ಲಿ 250 ರನ್‌ ಗಳಿಸಿದ್ದು, ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ.

India Vs England ICC Cricket World Cup 2023 Match No

ರೋಹಿತ್‌ ಶರ್ಮಾ ಕಿವೀಸ್‌ ವಿರುದ್ಧ 6 ಇನಿಂಗ್ಸ್‌ನಲ್ಲಿ ಸರಾಸರಿ ಕೇವಲ 15.16 ನಲ್ಲಿ ಪೇರಿಸಿದ್ದು 91 ರನ್‌ ಮಾತ್ರ. ಒಟ್ಟಾರೆ ರೋಹಿತ್‌ ಈ ವರ್ಷ 11 ಟೆಸ್ಟ್‌ಗಳ 21 ಇನಿಂಗ್ಸ್‌ಗಳಲ್ಲಿ 29.40ರ ಸರಾಸರಿಯಲ್ಲಿ 588 ರನ್‌ ಬಾರಿಸಿದ್ದಾರೆ. ಈ ಇಬ್ಬರ ಪ್ರದರ್ಶನ ತಂಡಕ್ಕೆ ಆಧಾರಸ್ತಂಭವಾಗಿದ್ದು, ಇಬ್ಬರೂ ವೈಫಲ್ಯ ಅನುಭವಿಸಿದ್ದು ಭಾರತ ಸಂಪೂರ್ಣ ಸರಣಿ ಸೋಲಲು ಪ್ರಮುಖ ಕಾರಣವಾಗಿದೆ. ನ.22 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೂ ಮುನ್ನವೇ ಹಿರಿಯ ಆಟಗಾರರು ತವರಲ್ಲಿ ದಯನೀಯ ಪ್ರದರ್ಶನ ನೀಡಿದ್ದು, ತಂಡದ ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ. ಕೆ ಎಲ್‌ ರಾಹುಲ್‌ ಸೇರಿದಂತೆ ಬಹುತೇಕ ಆಟಗಾರರು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿದ್ದಾರೆ. ರಿಷಭ್‌ ಪಂತ್‌ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ತವರಿನ ಪಿಚ್‌ನಲ್ಲೇ ಆತ್ಮವಿಶ್ವಾಸ ಕಳೆದುಕೊಂಡಂತೆ ಆಡಿದ್ದು, ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಗೌತಮ್‌ ಗಂಭೀರ್‌ ಟೀಂ ಇಂಡಿಯಾ ಕೋಚ್‌ ಹುದ್ದೆಗೇರಿದ ಕೆಲವು ತಿಂಗಳಲ್ಲೇ ಭಾರತ ತಂಡವು ಹಲವು ವೈಫಲ್ಯಗಳನ್ನು ಅನುಭವಿಸಿದೆ. ತಮ್ಮ ಆಯ್ಕೆಯ ಸಹಾಯಕ ಸಿಬ್ಬಂದಿ ನೀಡಿದರೂ ಗಂಭೀರ್‌ ಕೋಚಿಂಗ್‌ನಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಅವರ ಕೋಚಿಂಗ್‌ ಶೈಲಿಯ ಬಗ್ಗೆಯೂ ಅಪಸ್ವರಗಳು ಎದ್ದಿವೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತಿತ್ತು. ಲಂಕಾ ವಿರುದ್ಧ ಬರೋಬ್ಬರಿ 27 ವರ್ಷಗಳ ಬಳಿಕ ಭಾರತ ಸರಣಿ ಸೋತ ಅಪಖ್ಯಾತಿಗೆ ತುತ್ತಾಗಿತ್ತು. ಮತ್ತೊಂದೆಡೆ ಕಿವೀಸ್‌ ವಿರುದ್ಧ ತವರಲ್ಲೇ ಹೀನಾಯ ಸೋಲು ಗಂಭೀರ್‌ಗೆ ಮತ್ತಷ್ಟು ಹಿನ್ನಡೆ ಉಂಟುಮಾಡಿದೆ. ಅವರ ಕಾರ್ಯಕ್ಷಮತೆ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.

ದಾಖಲೆಗಳು ಇರುವುದೇ ಮುರಿಯಲು ಎಂಬ ಮಾತು ಕ್ರೀಡೆಗಳಲ್ಲಿ ಚಾಲ್ತಿಯಲ್ಲಿದೆ. ಈ ಹಿಂದೆ ಕ್ರಿಕೆಟ್‌ ಜಗತ್ತಿನ ಬಲಿಷ್ಠ ತಂಡಗಳು ಎನಿಸಿದ್ದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಕೂಡ ಇಂತಹ ಸೋಲು ಅನುಭವಿಸಿವೆ. ಭಾರತ ತಂಡವೇ ಎರಡು ಬಾರಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಅಗ್ರಮಾನ್ಯ ತಂಡವೊಂದು ಕನಿಷ್ಠ ಹೋರಾಟವನ್ನೂ ತೋರದೆ ಸೋಲಿಗೆ ಶರಣಾಗುವುದು ಅಕ್ಷಮ್ಯವಾಗುತ್ತದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯು ಇದಕ್ಕೆ ಉತ್ತಮ ನಿದರ್ಶನ. ಅತಿಯಾದ ಆತ್ಮವಿಶ್ವಾಸ, ಅನಗತ್ಯ ಪ್ರಯೋಗಗಳು ಟೀಂ ಇಂಡಿಯಾಗೆ ತಿರುಗುಬಾಣವಾಗಿದೆ.

ಭಾರತ ತಂಡದಲ್ಲಿ ಸ್ಪಿನ್ನರ್‌ಗಳಿಂದ ಒಂದಿಷ್ಟು ಉತ್ತಮ ಆಟ ಬಂದಿತ್ತು. ಬ್ಯಾಟಿಂಗ್ ಬಹುತೇಕ ಕಳಪೆಯಾಗಿತ್ತು. ರೋಹಿತ್, ವಿರಾಟ್ ಕೊಹ್ಲಿ ಮಾತ್ರವಲ್ಲದೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಅವರು ಕೂಡ ನಿರೀಕ್ಷೆ ಹುಸಿಗೊಳಿಸಿದರು. ಸ್ಪಿನ್‌ ಬೌಲಿಂಗ್‌ ಮುಂದೆಯೇ ಬ್ಯಾಟರ್‌ಗಳು ನೆಲಕಚ್ಚಿದ್ದು ವಿಪರ್ಯಾಸ. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಹನುಮ ವಿಹಾರಿ, ಅಜಿಂಕ್ಯ ರಹಾನೆ ಅವರಂತಹ ತಾಳ್ಮೆಯ ಬ್ಯಾಟರ್‌ಗಳ ಕೊರತೆ ಎದ್ದುಕಂಡಿತು. ಬಾಂಗ್ಲಾ, ಶ್ರೀಲಂಕಾದಲ್ಲಿ ಸರಣಿ ಜಯಿಸಿದ್ದ ಅತಿಯಾದ ಆತ್ಮವಿಶ್ವಾಸ ಭಾರತಕ್ಕೆ ಮುಳುವಾಯಿತು. ಇದರ ಜೊತೆ ಚುಟುಕು ಕ್ರಿಕೆಟಿನ ಹಣದ ಅಮಲು ನೆತ್ತಿಗೇರಿತ್ತು. ಇವೆಲ್ಲ ಕಾರಣಗಳಿಂದ ಭಾರತ ತಂಡದ ಗರ್ವಭಂಗವಾಗಿದೆ. ಹಿರಿಯ ಆಟಗಾರರು ವಿಫಲವಾಗಿರುವ ಕಾರಣ ಭಾರತ ತಂಡದಲ್ಲಿರುವ 35 ವರ್ಷ ವಯಸ್ಸು ದಾಟಿರುವ ಆಟಗಾರರು ನಿವೃತ್ತಿ ಪಡೆಯಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.    

ಪ್ರಮುಖ ಆಟಗಾರ ಕೇನ್ ವಿಲಿಯಮ್ಸನ್ ಗಾಯದಿಂದ ಹೊರಗುಳಿದಿದ್ದರು. ಆದರೂ ನ್ಯೂಜಿಲೆಂಡ್ ತಂಡದ ಇತರ ಆಟಗಾರರು ಉತ್ತಮವಾಗಿ ಆಡಿದರು. ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಬ್ಯಾಟರ್‌ಗಳಾದ ಡೆವೊನ್ ಕಾನ್ವೆ, ಯುವ ಆಟಗಾರ ರಚಿನ್ ರವೀಂದ್ರ, ಟಾಮ್ ಲೇಥಮ್ ಅವರು ಟೀಂ ಇಂಡಿಯಾದ ವಿಶ್ವದರ್ಜೆಯ ಸ್ಪಿನ್ನರ್‌ಗಳನ್ನು ಯಶಸ್ವಿಯಾಗಿ ಎದುರಿಸಿದರು. ಇದೆಲ್ಲವೂ ತಂಡವು ಭಾರತದ ವಿರುದ್ಧ ಇತಿಹಾಸ ನಿರ್ಮಿಸಲು ಸಾಧ್ಯವಾಯಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಎರಡನೇ ಸ್ಥಾನಕ್ಕಿಳಿದಿದೆ. ಕಿವೀಸ್‌ ವಿರುದ್ಧದ ಸರಣಿ ಸೋಲು ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸುವ ಗುರಿಗೆ ಆತಂಕ ಎದುರಾಗಲಿದೆ. ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರರು ತಾವು ಸ್ಟಾರ್‌ ಆಟಗಾರರೆನ್ನುವ ಹಣೆಪಟ್ಟಿಯನ್ನು ಪಕ್ಕಕ್ಕೆ ಇಟ್ಟು ಸೋಲಿಗೆ ಪ್ರಾಮಾಣಿಕ ಆತ್ಮಾವಲೋಕನ ಮಾಡಿಕೊಂಡು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಗೆಲ್ಲಲು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಬೇಕಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X