ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ವರ್ಷಗಳಿಂದ ಎಲ್ಲೆಂದರಲ್ಲಿ ಕೊಳಚೆ ನೀರು, ರಸ್ತೆ ಉದ್ದಕ್ಕೂ ಕಂಡುಬರುವ ತಿಪ್ಪೆಗಳ ಸಾಲುಗಳ ಜತೆಗೆ ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆ.
ಗ್ರಾಮದಲ್ಲಿ ಜನರಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸ್ಥಿತಿ ನಿರ್ಮಾಣವಾಗಿದ್ದು, ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಸ್ಥಿತಿ ಉಂಟಾಗಿದೆ. ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವ ಹಿನ್ನೆಲೆಯಲ್ಲಿ ಸಿದ್ಧನಾಥ ಗ್ರಾಮದಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದು, ಗ್ರಾಮಸ್ಥರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಣ ಸಚಿವರು ಒಮ್ಮೆ ಭೇಟಿ ನೀಡಿ, ಶಾಲೆ ಸುತ್ತ ನಿರ್ಮಾಣವಾಗಿರುವ ಅವ್ಯವಸ್ಥೆಗಳನ್ನು ಗಮನಿಸಬೇಕು. ಗ್ರಾಮಸ್ಥರು ಶಾಲಾ ಕಾಂಪೌಂಡ್ ಸುತ್ತಲೂ ತಿಪ್ಪೆಗಳನ್ನು ಹಾಕಿ ಎಮ್ಮೆಗಳನ್ನು ಕಟ್ಟಿದ್ದಾರೆ. ಶಾಲೆಯ ಅವ್ಯವಸ್ಥೆ ಕಂಡು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಕೂಡಲೇ ಶಾಲೆಯ ಸುತ್ತಲೂ ಇರುವ ತಿಪ್ಪೆಗಳನ್ನು ತೆಗೆಸಬೇಕು. ಇದು ಹೀಗೆ ಮುಂದುವರೆದರೆ ಶಾಲೆಗೆ ಬೀಗ ಹಾಕಿ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುತ್ತೇವೆಂದು ಸ್ಥಳೀಯರು ಆಕ್ರೋಶದ ಮಾತುಗಳನ್ನಾಡುತ್ತಾರೆ.

“ಗ್ರಾಮದಲ್ಲಿ ಚರಂಡಿ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ಚರಂಡಿ ನೀರು ನಿಂತಲ್ಲಿಯೇ ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಯಲ್ಲಿರುವ ಕಸ ವಿಲೇವಾರಿ ವಾಹನವನ್ನು ಸ್ವಚ್ಛತೆಗೆ ಬಳಸುತ್ತಿಲ್ಲ. ಬದಲಿಗೆ ಗ್ರಾಮದಲ್ಲಿ ಕಾರ್ಯಕ್ರಮಗಳು ನಡೆದರೆ ಅನೌನ್ಸ್ ಮಾಡುವುದಕ್ಕೆ ಮಾತ್ರ ಕಸ ವಿಲೇವಾರಿ ವಾಹನ ಬಳಸುತ್ತಿದ್ದಾರೆ” ಎಂದು ಸ್ಥಳೀಯರು ದೂರಿದ್ದಾರೆ.

“ಸಿದ್ದನಾಥ ಗ್ರಾಮದ ಎರಡನೇ ವಾರ್ಡ್‌ನಲ್ಲಿ ಸದ್ದಾಮ ದಡೆದ ಅವರ ಮನೆ ಹತ್ತಿರ ಚರಂಡಿ ನೀರು ಮುಂದಕ್ಕೆ ಹರಿಯದೆ ನಿಂತಲ್ಲಿಯೇ ನಿಂತು ಗಬ್ಬೆದ್ದು ನಾರುತ್ತಿದೆ. ಶಾಲೆಯ ಸುತ್ತಲೂ ತಿಪ್ಪೆ ತೆಗೆಯುವಂತೆ ಸಾಕಷ್ಟು ಬಾರಿ ಪಿಡಿಒಗೆ ಹೇಳಿದರೂ ನಮ್ಮ ಮಾತು ಕೇಳುತ್ತಿಲ್ಲ” ಎನ್ನುತ್ತಾರೆ ಸ್ಥಳೀಯ ನಿವಾಸಿ ಪರಸಪ್ಪ ಕಲಾದಗಿ.
“ಚರಂಡಿ ಸ್ವಚ್ಛತೆ ಮಾಡಿ ಎಂದರೆ ಇಲ್ಲಿನ ಪಿಡಿಒ ಜಗಳಕ್ಕೆ ಬರುತ್ತಾರೆ. ಪೋನ್ ಮಾಡಿದರೆ ಗ್ರಾಮಸ್ಥರ ಪೋನ್ ಸ್ವಿಕರಿಸುವುದಿಲ್ಲ” ಎನ್ನುತ್ತಾರೆ ಯಮನಪ್ಪ ಶಿರಬೂರ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಳಿವಿನಂಚಿನಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ; ದುರಸ್ತಿ ಕಾರ್ಯಕ್ಕೆ ಬೇಕಿದೆ ಸಹಾಯದ ಹಸ್ತ
“ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಲಿಖಿತವಾಗಿ, ಮೌಖಿಕವಾಗಿ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸುತ್ತ ಬಂದಿದ್ದಾರೆ. ಇನ್ನಾದರೂ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸುವರೇ ಕಾದು ನೋಡಬೇಕಿದೆ. ಇದೇ ರೀತಿ ನಿಷ್ಕಾಳಜಿ ಮುಂದುವರೆದರೆ ಗ್ರಾಮಸ್ಥರು, ಮಹಿಳೆಯರು ಸೇರಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ದನಾಥ ಗ್ರಾಮ ಪಂಚಾಯಿತಿ ಅಧಿಕಾರಿಯನ್ನು ಈ ದಿನ.ಕಾಮ್ ಸಂಪರ್ಕಿಸಿದರೂ ಕರೆಗೆ ಲಭ್ಯವಾಗಿಲ್ಲ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು