- ಕಾಂಗ್ರೆಸ್ ಸರ್ಕಾರದ ಏಕೈಕ ಡಿಸಿಎಂ ಡಿ ಕೆ ಶಿವಕುಮಾರ್
- ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ
ಅಂತೂ ಇಂತೂ ನೂತನ ಸರ್ಕಾರದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆಬಿದ್ದಿದ್ದು, ಎರಡನೇ ಬಾರಿಗೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರಕಿದೆ.
ಇದರ ಜೊತೆಜೊತೆಗೆ ಕಾಂಗ್ರೆಸ್ ಸರ್ಕಾರದ ಏಕೈಕ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ಬುಧವಾರ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆ ಸಿ ವೇಣುಗೋಪಾಲ್, ಹೈ ಕಮಾಂಡ್ ನಿರ್ದೇಶನದಂತೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ, ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆವರೆಗೂ ಉಪಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರೆಯುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ?:ಕಾಂಗ್ರೆಸ್ ಲಿಂಗಾಯತರಿಗೆ ಯಾವ ಹುದ್ದೆ ನೀಡಲಿದೆ ನೋಡೋಣ: ಬಸವರಾಜ ಬೊಮ್ಮಾಯಿ
ಇಂದು ಸಂಜೆಯೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇಲ್ಲಿ ಶಾಸಕಾಂಗ ನಾಯಕನ ಘೋಷಣೆ ಮಾಡಲಾಗುವುದು. ಮೇ 20ರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇವರೊಂದಿಗೆ ಕೆಲ ಪ್ರಮುಖರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರೂ ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿಸಿದ್ದಾರೆ. ಇವರಿಬ್ಬರೂ ಪಕ್ಷದ ಶಕ್ತಿಗಳು. ಇವರ ಸಹಯೋಗದ ನಾಯಕತ್ವದಲ್ಲೇ ಮುಂದಿನ ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ವೇಣುಗೋಪಾಲ್ ತಿಳಿಸಿದರು.