ರಾಜ್ಯಾದ್ಯಂತ ಸುದ್ದಿಯಲ್ಲರುವ ವಕ್ಫ್ ಆಸ್ತಿಯ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಲ್ಲಿ ಬಿಜೆಪಿ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
“ಶಾಂತಿ ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ವಕ್ಫ್ ಮಂಡಳಿಯ ಮೂಲಕ ರಾಜ್ಯವನ್ನು ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ. ಅದರಲ್ಲೂ ಕೇಂದ್ರದ ನರೇಂದ್ರ ಮೋದಿ ನೆತೃತ್ವದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡ್ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ. ಅದರಲ್ಲೂ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲ ಕುಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ನೇರವಾಗಿ ಕುಮ್ಮಕ್ಕು ಕೊಡುತ್ತಿರುವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ” ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
“ವಿಜಯಪುರ ಜಿಲ್ಲೆಯ ಹೊನ್ನಾವಡದ ರೈತರ 1,500 ಎಕರೆ ಜಮೀನು ವಕ್ಸ್ ಆಸ್ತಿಯೆಂದು ಘೋಷಿಸಿ ತಹಶೀಲ್ದಾರ್‌ರಿಂದ ಪುಷ್ಠೀಕರಿಸಿ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ವಿಧಾನಸೌಧವೂ ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫ್‌ಗೆ ಸೇರಿದ್ದೆಂದು ಮುಸ್ಲಿಂ ನಾಯಕರು ಹೇಳಿಕೆಯಿತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1,649 ಆಸ್ತಿಗಳ ಹಕ್ಕಿಗಾಗಿ ವಕ್ಫ್ ಪ್ರತಿಪಾದಿಸುತ್ತಿದೆ. ಸವಣೂರು ತಾಲೂಕು ಕಡಕೋಳ ಗ್ರಾಮಪಂಚಾಯಿತಿ ವ್ಯಾಪ್ತಿಯ ಹನುಮಂತ ದೇವಸ್ಥಾನದ ಅತಿಕ್ರಮಣಕ್ಕೆ ವಕ್ಫ್ ಬೋರ್ಡ್ ಮುಂದಾಗಿದೆ” ಎಂದರು.
“ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯವೂ ವಕ್ಫ್ ಆಸ್ತಿಯೆಂದು ಹಕ್ಕು ಮಂಡಿಸಿದೆ. ಸರ್ಕಾರಿ ಅಧೀನದಲ್ಲಿರುವ ಆಸ್ತಿಗಳನ್ನೇ ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇಗುಲಕ್ಕೆ ಸೇರಿದ 6 ಗುಂಟೆ ಜಮೀನು ವಕ್ಸ್ ಆಸ್ತಿಯೆಂದು ನಮೂದಾಗಿದೆ. ವಿಜಯಪುರ ಜಿಲ್ಲೆಯ 1500 ವರ್ಷ ಇತಿಹಾಸವಿರುವ ಸಿಂಧಗಿಯ ವಿರಕ್ತ ಮಠವೂ ವಕ್ಫ್ ಆಸ್ತಿಯೆಂದು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. 2000 ವರ್ಷ ಇತಿಹಾಸವಿರುವರುವ ಸೋಮನಾಥೇಶ್ವರ ದೇವಾಲಯವೂ ವಕ್ಫ್ ಆಸ್ತಿಯೆಂಬ ಹಕ್ಕು ಪ್ರತಿಪಾದನೆ ವಕ್ಫ್ ಮಂಡಳಿಯಿಂದ ಬರುತ್ತಿದೆ” ಎಂದರು.
“ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಪೂರ್ವಜರಿಂದ ಬಂದ ಜಮೀನುಗಳನ್ನು ಅನುಭವಿಸುತ್ತಿದ್ದ ರೈತರಿಗೂ ವಕ್ಫ್ ಆಸ್ತಿಯೆಂದು ತಹಶೀಲ್ದಾರ್‌ನಿಂದ ನೋಟಿಸ್ ನೀಡಲಾಗಿದೆ. ಕರ್ನಾಟಕದ ವಿಜಯಪುರ ಜಿಲ್ಲೆ ಹೊನ್ನಾವಡದ ರೈತರ 1500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಿ ತಹಶೀಲ್ದಾರ್‌ರಿಂದ ಪುಷ್ಠೀಕರಿಸಿ ನೋಟೀಸ್ ನೀಡಿದ್ದನ್ನು ಬಿಜೆಪಿ ಪ್ರಶ್ನಿಸಿ ಒತ್ತಾಯಿಸಿದ್ದರಿಂದ ಆದೇಶ ಹಿಂಪಡೆಯಲಾಗಿದೆ” ಎಂದರು.
“ಇದೇ ತೆರನಾದ ನಿಲುವುಗಳನ್ನು ಮುಂದುವರೆಸಿದಲ್ಲಿ ರಾಜ್ಯದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ರಾಜ್ಯದ ಹಿತಕ್ಕೆ, ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ಯಾವುದೇ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಗೊಳ್ಳುವ ಮತ್ತು ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುವ ತನ್ನ ಹಳೇ ಚಾಳಿಯನ್ನು ಕೈಬಿಡಬೇಕು” ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
“ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಬಿಜೆಪಿಯು ಈ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರೆಯಲಿದೆ. ಮತ್ತದೇ ರೀತಿಯ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಸರ್ಕಾರ ಮುಂದುವರೆಸಿದಲ್ಲಿ ಇಡೀ ರಾಜ್ಯದ ಜನತೆಯನ್ನು ಒಗ್ಗೂಡಿಸಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನ.16ರಿಂದ 18ರವರೆಗೆ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ್, ಸೋಮಶೇಖರ ಬೆಳಗುಂಪಾ, ಬಸವರಾಜ ಬೆಣ್ಣೂರ್, ಶರಣಪ್ಪ ತಳವಾರ್, ಚಂದ್ರಶೇಖರ ಅವಂಟಿ, ತಾಲೂಕು ಮಂಡಲ ಅಧ್ಯಕ್ಷ ರವಿಂದ್ರ ಸಜ್ಜನಶೆಟ್ಟಿ, ಮಣಿಕಂಠ ರಾಠೋಡ್, ನಾಗರಾಜ ಹೂಗಾರ್, ನಾಗರಾಜ ಭಂಕಲಗಿ, ಸುರೇಶ್ ಬೆನಕನಳ್ಳಿ, ರಮೇಶ್ ಬೋಮ್ಮನಳ್ಳಿ, ಮಹ್ಮದ್ ಯೂನೂಸ್, ಮಹೇಶ್ ಬಾಳಿ, ಚಂದ್ರು ಕಾಳಗಿ, ಅಯ್ಯಪ್ಪ ರಾಮತೀರ್ಥ, ಗುಂಡು ಮತ್ತಿಮೂಡ್, ದೇವರಾಜ ಬೆಣ್ಣೂರ್, ಶಿವರಾಮ ಚೌಹಾಣ್ ಸೇರಿದಂತೆ ಬಹುತೇಕರು ಇದ್ದರು.
ವರದಿ : ಆನಂತ್ ದೇಶಪಾಂಡೆ