ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ 2024ರ ಮತ ಎಣಿಕೆ ಚಟುವಟಿಕೆ ಬುಧವಾರ ಮುಂಜಾನೆಯಿಂದಲೇ ಚುರುಕುಗೊಂಡಿದೆ. ಆರಂಭಿಕ ಹಂತದಲ್ಲಿ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್ ಹಿನ್ನಡೆಯಲ್ಲಿದ್ಧಾರೆ.
ಅತ್ಯಂತ ದೊಡ್ಡ ಎಲೆಕ್ಟೋರಲ್ ರಾಜ್ಯಗಳಲ್ಲಿ ಒಂದಾದ ಕ್ಯಾಲಿಫೋರ್ನಿಯಾದಲ್ಲಿ ಕಮಲಾ ಹ್ಯಾರಿಸ್ ಗೆಲುವು ಸಾಧಿಸಿ, ವಾಷಿಂಗ್ಟನ್ ಹಾಗೂ ವರ್ಜೀನಿಯಾದಲ್ಲೂ ಗೆಲುವು ಪಡೆದಿದ್ದಾರೆ. ಮತ್ತೊಂದು ದೊಡ್ಡ ಎಲೆಕ್ಟೋರಲ್ ರಾಜ್ಯ ನಾರ್ತ್ ಕರೋಲಿನಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ.
538 ಕ್ಷೇತ್ರಗಳ ಪೈಕಿ ಟ್ರಂಪ್ 248 ಕಡೆಗಳಲ್ಲಿ ಮುನ್ನಡೆಯಲ್ಲಿದ್ದರೆ, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ 216 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಹುಮತಕ್ಕೆ 270 ಕ್ಷೇತ್ರಗಳನ್ನು ಗೆಲ್ಲುವ ಅಗತ್ಯವಿದೆ. ದೇಶಾದ್ಯಂತ ಮತಗಳ ಎಣಿಕೆ ಪ್ರಗತಿಯಲ್ಲಿದ್ದರೂ,ಅಂತಿಮ ಫಲಿತಾಂಶಗಳು ಲಭ್ಯವಿಲ್ಲ. ಪ್ರಮುಖ ಕ್ಷೇತ್ರಗಳಲ್ಲೊಂದಾದ ಪೆನ್ಸಿಲ್ವೇನಿಯಾದಲ್ಲಿ ಕಮಲಾ ಹ್ಯಾರಿಸ್ ಕೂದಲೆಳೆ ಅಂತರದಲ್ಲಿ ಮುನ್ನಡೆ ಸಾಧಿಸಬಹುದು ಎಂದು ವರದಿಗಳು ಹೇಳುತ್ತವೆ.
ಅಧ್ಯಕ್ಷೀಯ ಚುನಾವಣೆಯನ್ನು ಹೊರತುಪಡಿಸಿ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷ 34 ಹಾಗೂ ರಿಪಬ್ಲಿಕನ್ ಪಕ್ಷ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜನಪ್ರತಿನಿಧಿ ಸಭೆಯಲ್ಲಿ ರಿಪಬ್ಲಿಕನ್ನರು 36-18 ಮುನ್ನಡೆಯಲ್ಲಿದ್ದರೆ, ಗವರ್ನರ್‌ಗಳಾಗಿ 20 ಮಂದಿ ಡೆಮಾಕ್ರಟಿಕ್ ಸದಸ್ಯರು ಹಾಗೂ 22 ಮಂದಿ ರಿಪಬ್ಲಿಕನ್ ಸದಸ್ಯರು ಗೆಲುವಿನ ಹಾದಿಯಲ್ಲಿಯಲ್ಲಿದ್ದಾರೆ.
ಸ್ವಿಂಗ್ ರಾಜ್ಯಗಳಿಂದ ಗೆಲುವು ನಿರ್ಧಾರ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ರಾಜ್ಯಗಳನ್ನು ಅಂದು ಅಲ್ಲಿ ಸ್ವಿಂಗ್ ರಾಜ್ಯಗಳು ಎಂದು ಕರೆಯಲಾಗುತ್ತದೆ. ಸ್ವಿಂಗ್ ರಾಜ್ಯಗಳು ಅಲ್ಲಿನ ಚುನಾವಣೆಯಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರಾಜ್ಯಗಳು ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡಕ್ಕೂ ಸರಿಸುಮಾರು ಸಮಾನ ಮಟ್ಟದ ಬೆಂಬಲವನ್ನು ಹೊಂದಿವೆ. ಈ ಚುನಾವಣೆಯಲ್ಲಿ ಸ್ವಿಂಗ್ ರಾಜ್ಯಗಳ ಪಟ್ಟಿಯಲ್ಲಿ ಪೆನ್ಸಿಲ್ವೇನಿಯಾ, 19 ಎಲೆಕ್ಟೋರಲ್ ಕಾಲೇಜು ಮತಗಳನ್ನು ಹೊಂದಿದ್ದರೆ, ಮಿಚಿಗನ್ (10), ಜಾರ್ಜಿಯಾ (16), ವಿಸ್ಕಾನ್ಸಿನ್ (10), ಉತ್ತರ ಕೆರೊಲಿನಾ (16), ನೆವಾಡಾ (6) ಮತ್ತು ಅರಿಜೋನಾ (11) ಮತ ಹೊಂದಿವೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ ಚುನಾವಣೆ | ಕಮಲಾ ಹ್ಯಾರಿಸ್ – ಡೊನಾಲ್ಡ್ ಟ್ರಂಪ್; ಮತದಾರರ ಚಿತ್ತ ಯಾರತ್ತ?
ಯಾರೇ ಗೆದ್ದರೂ ಇತಿಹಾಸ ಸೃಷ್ಟಿ
60 ವರ್ಷ ವಯಸ್ಸಿನ ಕಮಲಾ ಹ್ಯಾರಿಸ್ ಗೆದ್ದರೆ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಯಾಗಲಿದೆ. ಈ ಹುದ್ದೆಗೇರಿದ ಮೊದಲ ವರ್ಣೀಯ ಮತ್ತು ದಕ್ಷಿಣ ಏಷ್ಯಾ ಮೂಲದ ಮಹಿಳೆ ಎನಿಸಿಕೊಳ್ಳುವರು. ಹಾಗೆಯೆ ಕಳೆದ 32 ವರ್ಷದಲ್ಲಿ ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿಲ್ಲ. ಕಮಲಾ ಗೆದ್ದರೆ ಆ ಸಾಧನೆ ಮಾಡಲಿದ್ದಾರೆ.
74 ವರ್ಷದ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದರೆ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ ಅಭ್ಯರ್ಥಿ ಎನಿಸಿಕೊಳ್ಳುವರು. ಕಳೆದ 132 ವರ್ಷಗಳಲ್ಲಿ ಒಮ್ಮೆ ಸೋತು, ಮತ್ತೊಂದು ಅವಧಿಗೆ ಸ್ಪರ್ಧಿಸಿ ಯಾರೂ ಗೆದ್ದಿಲ್ಲ. ಟ್ರಂಪ್ ಗೆದ್ದರೆ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ. ಅದೇ ರೀತಿ ಗಂಭೀರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥನಾದ ವ್ಯಕ್ತಿ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಿದಂತಾಗಲಿದೆ.
ಹಲವು ಭಾರತೀಯ ಮೂಲದವರ ಸ್ಪರ್ಧೆ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಲವು ಭಾರತೀಯ ಮೂಲದವರು ಸ್ಪರ್ಧಿಸಿದ್ದಾರೆ. ಇತ್ತೀಚಿನ ಚುನಾವಣಾ ಫಲಿತಾಂಶದ ವರದಿಯಂತೆ, ಸುಹಾಸ್ ಸುಬ್ರಹ್ಮಣ್ಯಂ ಅವರು ಅಮೆರಿಕದ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟಿಕ್‌ನಿಂದ ಆಯ್ಕೆಯಾಗಿದ್ದಾರೆ.ಇಡೀ ಪೂರ್ವ ಕರಾವಳಿಯಿಂದ ಚುನಾಯಿತರಾದ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಡೆಮಾಕ್ರಟಿಕ್ ಭದ್ರಕೋಟೆಯಾದ ವರ್ಜೀನಿಯಾದಿಂದ ಜನಪ್ರತಿನಿಧಿಗಳ ಸಭೆಗೆ(ಕಾಂಗ್ರೆಸ್) ಸ್ಪರ್ಧಿಸಿದ್ದ ಸುಬ್ರಮಣ್ಯಂ ಅವರು ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಅವರನ್ನು ಸೋಲಿಸಿದ್ದಾರೆ.
ಪ್ರಸ್ತುತ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಶ್ರೀಥಾನೇದಾರ್
ಸೇರಿ ಐವರು ಭಾರತೀಯ ಅಮೆರಿಕನ್ನರನ್ನು ಒಳಗೊಂಡಿರುವ ಕಾಂಗ್ರೆಸ್‌ನ ಸಮೋಸಾ ಕಾಕಸ್‌ಗೆ ಸುಬ್ರಹ್ಮಣ್ಯಂ
ಸೇರ್ಪಡೆಯಾಗಿದ್ದಾರೆ.
