ಕೊಡಗು ಜಿಲ್ಲೆಯ ಕುಶಾಲನಗರದ ವೀರಭೂಮಿ ಜಾನಪದ ಗ್ರಾಮದಲ್ಲಿ ನವೆಂಬರ್ 09ರಂದು ʼಹಿ ಚಿ ಹಬ್ಬ ಅಥವಾ ಹಿ ಚಿ ಸಂಭ್ರಮ ಬುಡಕಟ್ಟು ಜಾನಪದ ಸಂಪತ್ತಿಗೆ 70 ವರ್ಷʼ ಎಂಬ ಧ್ಯೇಯದಡಿ ಕನ್ನಡದ ಪ್ರಖ್ಯಾತ ದೇಸಿ ವಾಹಿನಿ ಜನಪದ ಸಿರಿ ಕಾರ್ಯಕ್ರಮ ಆಯೋಜಿಸಿದೆ ಎಂದು ಜರಗನಹಳ್ಳಿ ಕಾಂತರಾಜು ಹೇಳಿದರು.
ಕುಶಾಲನಗರದ ವೀರಭೂಮಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕರ್ನಾಟಕದ ಬುಡಕಟ್ಟು ಜಾನಪದ ಅಧ್ಯಯನ, ಸಂಶೋಧನೆ, ಉಳಿವಿಗಾಗಿ ಬದುಕನ್ನೇ ಮುಡಿಪಿಟ್ಟ ನಾಡಿನ ಖ್ಯಾತ ವಿದ್ವಾಂಸ ಪ್ರೊ. ಹಿ ಚಿ ಬೋರಲಿಂಗಯ್ಯ ಅವರ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ ಮತ್ತು ಬುಡಕಟ್ಟು ಕಲೆಗಳನ್ನು ಆ ವೇದಿಕೆಗೆ ಕರೆತಂದು ಪ್ರಚಾರ ಮಾಡುವುದು ಮತ್ತು ಅವರೆಲ್ಲರನ್ನೂ ನಾಡಿನ ಮುಖ್ಯವಾಹಿನಿಗೆ ಪರಿಚಯ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದರು.
“ಮೂಲ ಜಾನಪದವನ್ನು ಉಳಿಸುತ್ತ, ಬೆಳೆಸುತ್ತ ಬರುತ್ತಿರುವಂತಹ ಬುಡಕಟ್ಟು, ಅಲೆಮಾರಿ ಸಮುದಾಯಗಳ ಜಾನಪದ ಕಲಾವಿದರಿಗೆ, ತಂಡಗಳಿಗೆ ಅತಿ ಹೆಚ್ಚಿನ ಪ್ರಶಸ್ತಿಗಳು ಈ ಬಾರಿ ಲಭಿಸುತ್ತಿರುವುದು ಖುಷಿಯ ಸಂಗತಿ. “ಒಬ್ಬ ಜನಪದ ಕಲಾವಿದ, ಬರೀ ಜಾನಪದ ಕಲಾವಿದ ಅಲ್ಲ; ನಮ್ಮ ಸಂಸ್ಕೃತಿಯ ಮೂಲ ಆಶಯಗಳ ಪ್ರತಿಬಿಂಬ” ಹಾಗಾಗಿ ಈ ತರಹದ ವಿಷಯಗಳನ್ನು ಜನರಿಗೆ ಮುಟ್ಟಿಸುವ ಅವಶ್ಯಕತೆ ಅಗತ್ಯವಾಗಿದೆ” ಎಂದು ಜನಪದರ ಗಟ್ಟಿಧ್ವನಿ ಜರಗನಹಳ್ಳಿ ಕಾಂತರಾಜು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಅದರ ಅಂಗಸಂಸ್ಥೆಯಾದಂತಹ ಕರ್ನಾಟಕ ಜಾನಪದ ಅಕಾಡೆಮಿಗೆ ಸಂಬಂಧಪಟ್ಟಂತಹ ನೈಜ ಕಲಾವಿದರಿಗೆ ಹೆಚ್ಚು ಸೇರದೇ ಇರುತ್ತಿರುವುದು ದುರಾದೃಷ್ಟಕರ ಸಂಗತಿ. ರಾಜ್ಯದಲ್ಲಿ ಈವರೆಗೂ ಯಾರೂ ಕೂಡ ಜಾನಪದ ಕಲಾವಿದರಿಗೆ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಕೊಡುವಂತಹ ಮನಸ್ಥಿತಿ, ಧೈರ್ಯ, ಸಾಹಸ ಮಾಡಿರಲಿಲ್ಲ. ಜನಪದ ಕಲಾವಿದರು ಅನ್ಯಾಯ, ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದನ್ನು ಮನಗಂಡು ಜನಪದ ಸಿರಿ ಕಾಂತರಾಜು ಅವರು ಈ ರೀತಿ ಮುಂಚೂಣಿಯಾಗಿ ಕಲಾವಿದರನ್ನು ಮುನ್ನೆಲೆಗೆ ತರಬೇಕೆಂದು ಸಿಕ್ಕ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಕಲಾವಿದರಿಗೆ ಅನುಕೂಲವಾಗುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ ಮೂಲ ಜನಪದ ಕಲಾವಿದರಿಗೆ ಗೌರವ ಸಲ್ಲಬೇಕೆಂಬ ಆಶಯವನ್ನಿಟ್ಟುಕೊಂಡು ಈ ವರ್ಷದಿಂದ ಕೊಡಮಾಡಲ್ಪಡುತ್ತಿರುವ ಜಾನಪದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲು ಮುಂದಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಹತ್ತು ಬುಡಕಟ್ಟು ಜನಾಂಗದ ಜನಪದ ಕಲಾತಂಡಗಳಿಗೆ ಕೊಡುತ್ತಿರುವುದು ಶ್ಲಾಘನೀಯ ಕಾರ್ಯ ಹಾಗೂ ಇನ್ನೂ ಹತ್ತು ಆಯ್ದ ಕಲಾವಿದರಿಗೆ ಪ್ರಶಸ್ತಿ ಕೊಡುತ್ತಿರುವುದು ಮಾದರಿಯ ಕೆಲಸ ಎನ್ನಬಹುದು.
ಜನಪದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು-2024
- ಶ್ರೀ ಪುರುಷೋತ್ತಮ ಗೌಡ (ಹಾಲಕ್ಕಿ ಒಕ್ಕಲಿಗ ಸಮುದಾಯ)
- ಶ್ರೀ ದೊಂಡು ಪಾಟೀಲ್ ಧನಗರ್ ಗೌಳಿ (ಗೌಳಿ ಸಮುದಾಯ)
- ಶ್ರೀ ನಾಗರಾಜ ದುರ್ಗಯ್ಯ ಗೊಂಡ (ಗೊಂಡ ಸಮುದಾಯ
- ಶ್ರೀಮತಿ ಶಾರದ ಕುಡಿಯ (ಕುಡಿಯ ಸಮುದಾಯ)
- ಶ್ರೀಮತಿ ಲಿಲ್ಲಿ ಜಾಕಿ ಸಿದ್ಧಿ (ಸಿದ್ಧಿ ಸಮುದಾಯ)
- ಶ್ರೀ ಬಸವರಾಜ್ ಸೋಲಿಗ (ಸೋಲಿಗ ಸಮುದಾಯ)
- ಶ್ರೀ ಜೆ. ಕೆ ರಾಮು (ಜೇನು ಕುರುಬ ಸಮುದಾಯ)
- ಶ್ರೀ ಚಂದ್ರ ನಾಯಕ್ ಕುಡುಬಿ (ಕುಡುಬಿ ಸಮುದಾಯ)
- ಶ್ರೀ ಮಂಜುನಾಥ್ ಸಿ. ಕೆಂಗಲ್ ಹಟ್ಟಿ (ಕಾಡುಗೊಲ್ಲ ಸಮುದಾಯ)
- ಶ್ರೀಮತಿ ಜ್ಯೋತಿ. ಎನ್ (ಬಂಜಾರ ಸಮುದಾಯ)
- ಶ್ರೀ ಆರ್. ಮಹೇಂದ್ರ (ಜಾನಪದ ಗಾಯಕರು)
- ಶ್ರೀ ಆರ್. ರವಿಕುಮಾರ್ (ಜಾನಪದ ಶೈಲಿಯ ಗೀತ ರಚನೆಕಾರರು)
- ಡಾ. ಪ್ರದೀಪ್ ಕುಮಾರ್ ಎಂ (ಜಾನಪದ ಸಾಹಿತ್ಯ:ಮಹಾಕಾವ್ಯಗಳ ಅಧ್ಯಯನ)
- ಶ್ರೀ ಏಕದಾರಿ ಕೆ.ಎಂ ರಾಮಯ್ಯ (ಕಂಚಿನ ಕಂಠದ ಜಾನಪದ ಗಾಯಕರು)
- ಶ್ರೀ ರಾಚಯ್ಯ (ತತ್ವಪದ ಗಾಯಕರು)
- ಶ್ರೀ ಶಂಕರ್ ದಾಸ್ ಚಂಡ್ಕಳ (ಜಾನಪದ ಕಲಾವಿದರು)
- ಶ್ರೀ ಕೃಷ್ಣೇಗೌಡ (ಸೋಬಾನೆ ಕಲಾವಿದರು)
- ಶ್ರೀಮತಿ ಶಾಂತಾ ಹೆಗ್ಗೋಡು (ಡೊಳ್ಳು ಕಲಾವಿದರು)
- ಶ್ರೀಮತಿ ಬುರ್ರಕಥಾ ಕಮಲಮ್ಮ (ಬುರ್ರಕಥೆ ಕಲಾವಿದರು)
- ಶ್ರೀ ಮಹೇಶ್ (ಕಂಸಾಳೆ ಕಲಾವಿದರು)
- ಶ್ರೀ ಪಿ. ಸೋಮು (ಖ್ಯಾತ ಜಾನಪದ ಸಮರ ಕಲೆ ಕಲಾವಿದರು, ಮೈಸೂರು)
- ಡಾ. ಕೆ.ಪಿ ದೇವರಾಜ್ (ಪೂಜಾ ಕುಣಿತ ಕಲಾವಿದರು)
- ಶ್ರೀ ಕೆ. ಬಿ ಸ್ವಾಮಿ (ಪೂಜಾ ಕುಣಿತ ಕಲಾವಿದರು)
- ಚೇತನ್ ರಾಜ್ ಓ (ರಂಗಭೂಮಿ ಮತ್ತು ಜಾನಪದ ಕಲಾವಿದ)
- ಶ್ರೀ ಅಖಿಲೇಶ್ ಎಚ್.ಕೆ (ಪಟ ಕುಣಿತ ಕಲಾವಿದರು)
- ಶ್ರೀ ರುದ್ರೇಶ್ವರಯ್ಯ ಎಚ್. ಬಿ (ವೀರಭದ್ರ ಕುಣಿತ ಕಲಾವಿದರು)
- ಶ್ರೀ ಕಿರಣ್ ಗಿರ್ಗಿ (ಖ್ಯಾತ ರಂಗನಿರ್ದೇಶಕರು, ರಂಗ ನಟರು)
- ಶ್ರೀ ಹೆಚ್. ಆರ್ ನಾಗೇಂದ್ರ (ಜಾನಪದ ಕಲೆಗಳ ಪರಿಚಾರಕರು)
- ಶ್ರೀಮತಿ ನಾಗರತ್ನ ಎಸ್. ಹಿರೇಮಠ (ಯೋಗ ಸಾಧಕಿ, ಬೆಂಗಳೂರು)