- ಇಟಲಿ ಎಮಿಲಿಯಾ-ರೊಮಾಗ್ನಾ ಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹ
- ಇಮೋಲಾದಲ್ಲಿ ಆಯೋಜನೆ ಆಗಿದ್ದ ಫಾರ್ಮಲಾ ಒನ್ ಕಾರ್ಯಕ್ರಮ ರದ್ದು
ಇಟಲಿ ದೇಶದ ಉತ್ತರ ಭಾಗದ ಎಮಿಲಿಯಾ-ರೊಮಾಗ್ನಾ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಗುರುವಾರ (ಮೇ 18) ವರದಿಯಾಗಿದೆ.
ದೇಶದ ಕೆಲವು ಪ್ರದೇಶಗಳಲ್ಲಿ ವಾರ್ಷಿಕವಾಗಿ ಆಗುವ ಅರ್ಧದಷ್ಟು ಮಳೆಯು ಕಳೆದ 36 ಗಂಟೆಗಳಲ್ಲಿ ಸುರಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ನಾಗರಿಕ ರಕ್ಷಣಾ ಸಚಿವ ನೆಲ್ಲೊ ಮುಸುಮೆಸಿ ಹೇಳಿದ್ದಾರೆ.
ಭಾರೀ ಮಳೆಯಿಂದ ನದಿಗಳು ತುಂಬಿದ ಪರಿಣಾಮ ಅವುಗಳ ದಂಡೆಗಳು ಒಡೆದು ನೀರು ಇಟಲಿ ಪಟ್ಟಣಗಳಿಗೆ ನುಗ್ಗಿದ್ದು ಸಾವಿರಾರು ಎಕರೆ ಕೃಷಿ ಭೂಮಿಯೂ ಮುಳುಗಡೆಯಾಗಿದೆ.
ಏತನ್ಮಧ್ಯೆ ಹಾನಿಗೊಳಗಾದ ಪ್ರದೇಶಗಳಿಗೆ ಸನಿಹದಲ್ಲಿರುವ ಇಮೋಲಾದಲ್ಲಿ ಫಾರ್ಮಲಾ ಒನ್ ಗ್ರ್ಯಾಂಡ್ ಪ್ರಿ ಕಾರ್ಯಕ್ರಮ ಭಾನುವಾರ (ಮೇ 21) ನಿಗದಿಯಾಗಿತ್ತು.
ಈಗ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ತುರ್ತು ಸೇವೆಗಳಿಗೆ ತೊಂದರೆಯಾಗಬಾರದು ಹಾಗೂ ಮೋಟಾರ್ ರೇಸಿಂಗ್‌ನ ಗ್ರ್ಯಾಂಡ್ ಪ್ರಿ ಕಾರ್ಯಕ್ರಮದಲ್ಲಿ ಅಪಾರ ಜನರು ಸೇರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಟಲಿ ಎಮಿಲಿಯಾ-ರೊಮಾಗ್ನಾ ಪ್ರದೇಶದ ಅಧ್ಯಕ್ಷ ಸ್ಟೆಫಾನೊ ಬೊನಾಸಿನಿ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಹಿಂದೆಂದೂ ನೋಡಿರದ ದುರಂತಕ್ಕೆ ಸಾಕ್ಷಿಯಾಗಿದ್ದೇವೆ. ಅಪಾರ ಪ್ರಮಾಣ ಮಳೆ ನೆಲದ ಮೇಲೆ ಬಿದ್ದ ಪರಿಣಾಮ ಹಾನಿಯಾಗಿದೆ” ಎಂದು ಹೇಳಿದರು.
ಕ್ರಿಶ್ಚಿಯನ್ ಪರಂಪರೆ ತಾಣಗಳಿಗೆ ಪ್ರಸಿದ್ಧವಾದ ಅಡ್ರಿಯಾಟಿಕ್ ಕರಾವಳಿ ನಗರ ರಾವೆನ್ನಾ ನಿರಂತರ ಮಳೆಯಿಂದ ಭಾರೀ ಹಾನಿಗೀಡಾಗಿದೆ.
ಭಾರೀ ಮಳೆಯಿಂದ ಅಪಾರ ಹಾನಿಯಾಗಿದ್ದು ತೊಂದರೆಗೀಡಾಗಿರುವ ಸುಮಾರು 14 ಸಾವಿರ ಜನರನ್ನು ಶೀಘ್ರದಲ್ಲಿ ಸ್ಥಳಾಂತರಿಸಲಾಗುವುದು ಎಂದು ಸ್ಥಳೀಯ ಆಂತರಿಕ ಸಚಿವಾಲಯದ ಪ್ರತಿನಿಧಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಜಮ್ಮು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಹಚರನ ನಿವಾಸ ಸೇರಿ, 12 ಸ್ಥಳದಲ್ಲಿ ಸಿಬಿಐ ಶೋಧ
ದೇಶದಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ 37 ಪಟ್ಟಣಗಳು ಹಾಗೂ ಸಮುದಾಯಗಳಿಗೆ ಹಾನಿಯಾಗಿದೆ. ಸುಮಾರು 120 ಭೂಕುಸಿತ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಟಲಿ ಬೊಲೊಗ್ನಾ ನಗರದ ಬಳಿ ಒಂದು ಸೇತುವೆ ಕುಸಿದು ಬಿದ್ದಿದೆ. ಕೆಲವು ರಸ್ತೆಗಳು ಪ್ರವಾಹದ ನೀರಿನಿಂದ ಆವೃತವಾಗಿವೆ. ಅನೇಕ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.