ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಾವು ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಏಳು ನಿರ್ಣಾಯಕ ರಾಜ್ಯಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಡೆಮಾಕ್ರೆಟಿಕ್ ಪಕ್ಷಕ್ಕೆ ಎರಡನೇ ಬಾರಿ ಸೋಲಿನ ರುಚಿ ತೋರಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಜಾಗತಿಕವಾಗಿ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಇಸ್ರೇಲ್ – ಹಮಾಸ್ ನಡುವಿನ ದೀರ್ಘ ಅವಧಿಯ ಯುದ್ಧವೂ ಇದರಲ್ಲಿ ಒಂದಾಗಿದೆ. ಗಾಜಾ ಯುದ್ಧದ ಬಗ್ಗೆ ತಮ್ಮ ಭಾಷಣಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ತಾಸಿನೊಳಗೆ ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸುತ್ತೇನೆ ಎಂದಿದ್ದರು.
ಇದೀಗ ಅದೇ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿರುವ ಹಮಾಸ್ ಹಿರಿಯ ಅಧಿಕಾರಿ ಸಮಿ ಅಬು ಜುಹ್ರಿ, ‘ಯುದ್ಧ ನಿಲ್ಲಿಸುವ ಟ್ರಂಪ್ ಹೇಳಿಕೆ ಪರೀಕ್ಷೆಗೆ ಒಳಪಡುತ್ತದೆ’ ಎಂದಿದ್ದಾರೆ.
ಅಲ್ಲದೇ , ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ ತಪ್ಪುಗಳಿಂದ ಟ್ರಂಪ್ ಪಾಠ ಕಲಿಯಲಿ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ ಚುನಾವಣೆ | ಕಮಲಾ ಹ್ಯಾರಿಸ್ – ಡೊನಾಲ್ಡ್ ಟ್ರಂಪ್; ಮತದಾರರ ಚಿತ್ತ ಯಾರತ್ತ?
ಅಮೆರಿಕದಲ್ಲಿನ ಅರಬ್ ಮೂಲದ ಪ್ರಜೆಗಳಿಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಪ್ರಮುಖ ವಿಷಯ ವಸ್ತುವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪರವಾಗಿ ಬಲವಾದ ವಾದ ಮಂಡಿಸಿದ್ದಾರೆ. ಆದರೆ ಗಾಜಾ ಬಿಕ್ಕಟ್ಟಿಗೆ ಜೋ ಬೈಡನ್ ಆಡಳಿತದ ನೀತಿಗಳು ಕಾರಣ ಎಂಬ ಅಭಿಪ್ರಾಯವೂ ನೆಲೆಯೂರಿದೆ. ಯುದ್ಧ ವಿರೋಧಿ ನಿಲುವಿನೊಂದಿಗೆ ಈ ಭಾಗದಲ್ಲಿ ಶಾಂತಿ ನಿರ್ಮಿಸಲು ಡೊನಾಲ್ಡ್ ಟ್ರಂಪ್ ಪರ್ಯಾಯ ವ್ಯಕ್ತಿಯಾಗಿ ಅರಬ್ ಅಮೆರಿಕನ್ನರಿಗೆ ಕಾಣಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಮಿಚಿಗನ್‌ನಲ್ಲಿ ಇಮಾಮ್ ಬೆಲಾಲ್ ಅಲ್ಝುಹೈರಿ ಅವರು ಟ್ರಂಪ್‌ಗೆ ಬೆಂಬಲ ಘೋಷಿಸಿದ್ದು ಇದಕ್ಕೆ ಸಾಕ್ಷಿ. ಟ್ರಂಪ್ ಅವರು ‘ಶಾಂತಿಯ ಅಭ್ಯರ್ಥಿ’ ಎಂದು ಬಣ್ಣಿಸಿದ್ದ ಇಮಾಮ್, ‘ಕೊನೆಯಿಲ್ಲದ ಯುದ್ಧಗಳನ್ನು’ ತಡೆಯುವ ಅವರ ಬದ್ಧತೆಯನ್ನು ಶ್ಲಾಘಿಸಿದ್ದರು.
ನಿರ್ಣಾಯಕ ಎಲೆಕ್ಟೋರಲ್ ರಾಜ್ಯಗಳಲ್ಲಿ ಗೆಲುವು ಸಾಧಿಸಿದ ನಂತರ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅಧಿಕೃತ ಘೋಷಣೆಯೊಂದು ಮಾತ್ರ ಬಾಕಿಯುಳಿದಿದೆ.
ಟ್ರಂಪ್ 25 ರಾಜ್ಯಗಳಲ್ಲಿ ಮತ್ತು ಕಮಲಾ ಹ್ಯಾರಿಸ್ 16 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 538 ಕ್ಷೇತ್ರಗಳ ಪೈಕಿ ಡೊನಾಲ್ಡ್ ಟ್ರಂಪ್ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುಂದಿದ್ದಾರೆ. ಗೆಲುವಿಗೆ 270 ಸ್ಥಾನಗಳ ಅವಶ್ಯಕತೆಯಿದ್ದು, ಈ ಸ್ಥಾನಗಳಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಮುಂದಿನ ವರ್ಷದ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.