ವಿಜಯಪುರ ಜಿಲ್ಲೆಯ ಕೊಲ್ಹಾರದ ಸರ್ವೇ ನಂ.718ರಲ್ಲಿರುವ ಕಲ್ಲು ಗಣಿಗಾರಿಕೆ ಬಂದ್ ಮಾಡುವಂತೆ ಆಗ್ರಹಿಸಿ ಕೊಲ್ಹಾರ ರೈತರ ಸಂಘಟನೆಯಿಂದ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, “ಕಲ್ಲಿನ ಗಣಿಯಲ್ಲಿ ಬೃಹತ್ ಕಲ್ಲುಗಳನ್ನು ಬ್ಲಾಸ್ಟ್ ಮಾಡಲಾಗುತ್ತಿದೆ. ಇದರಿಂದ ಸಮೀಪದ ಜಮೀನುಗಳಲ್ಲಿ ವಾಸಿಸುತ್ತಿರುವ ರೈತರಲ್ಲಿ ಭಯದ ವಾತಾವರಣ ಸೃಯಾಗಿದೆ. ಪಕ್ಕದಲ್ಲಿಯೇ ಕೋಲ್ಹಾರ ಸೇತುವೆಯೂ ಇರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಕಲ್ಲಿನ ಗಣಿ ಬಂದ್ ಮಾಡಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಕಳುಹಿಸಬೇಕು. ಅಲ್ಲಿರುವ ಸಮಸ್ಯೆಗಳ ಕುರಿತು ನೈಜವಾಗಿ ಪರೀಕ್ಷೆ ಮಾಡಬೇಕು. ಅದರಿಂದಾಗುವ ಅನಾಹುತಗಳನ್ನು ತಿಳಿದು ಕಾನೂನು ಕ್ರಮ ಕೈಗೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಕ್ಫ್ ಆಸ್ತಿಯ ಸಮಗ್ರ ತನಿಖೆಗೆ ಬಿಜೆಪಿ ಒತ್ತಾಯ
ಮಲ್ಲಿಕಾರ್ಜುನ ಮಹಾಂತಮಠ, ಕಲ್ಲಪ್ಪ ಗಿಡ್ಡಪ್ಪಗೊಳ, ಶ್ರೀಶೈಲ ಸೊನ್ನದ, ಯಲ್ಲಪ್ಪ ಸೋನ್ನದ, ಶಶಿಕಾಂತ ಬಿರಾದಾರ, ಮಲ್ಲಿಕಾರ್ಜುನ ಸೊನ್ನದ, ವಿರುಪಾಕ್ಷಿ ಅಥಣಿ, ಸಂಗಪ್ಪ ಅಥಣಿ, ಸಂಗಪ್ಪ ಟಕ್ಕೆ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಮನಗೌಡ ಪಾಟೀಲ, ಪುಂಡಲಿಕ ಸೊನ್ನದ ಸೇರಿದಂತೆ ಇತರರು ಇದ್ದರು.