ಈ ದಿನ ಸಂಪಾದಕೀಯ | ಸುಪ್ರೀಮ್ ಕೋರ್ಟ್ ಮಹತ್ತರ ತೀರ್ಪು- ಮದರಸಾಗಳಿಗೆ ಮಸಿ ಬಳಿವ ವಿಕೃತಿ ನಿಲ್ಲಲಿ

Date:

Advertisements

ಮದರಸಾ ಕಾಯಿದೆಯು 14ನೆಯ ವರ್ಷದವರೆಗೆ ಅಥವಾ ಎಂಟನೆಯ ತರಗತಿ ತನಕ ಕಡ್ಡಾಯವಾಗಿ ಗುಣಮಟ್ಟದ ಮತ್ತು ಉಚಿತ ಸಾರ್ವತ್ರಿಕ ಶಿಕ್ಷಣ ನೀಡುವಲ್ಲಿ ಈ ಕಾಯಿದೆ ವಿಫಲವಾಗಿದೆ. ಮದರಸಾಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಹೀಗಾಗಿ ಸಂವಿಧಾನದ 21ನೆಯ ಕಲಮಿನ ಉಲ್ಲಂಘನೆಯಾಗಿದೆ ಎಂದೂ ಅರ್ಜಿದಾರರು ವಾದಿಸಿದ್ದರು.

2004ರ ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಮ್ ಕೋರ್ಟ್ ಮಂಗಳವಾರ (ನ.5) ಎತ್ತಿ ಹಿಡಿದಿರುವುದು ಅಭಿನಂದನಾರ್ಹ.

ಭಾರತದ ಜಾತ್ಯತೀತ ತತ್ವಗಳನ್ನು ಎತ್ತಿ ಹಿಡಿದಿರುವ ಐತಿಹಾಸಿಕ ತೀರ್ಪು ಇದಾಗಿದೆ. ಶಿಕ್ಷಣ ಸಂಸ್ಥೆಯೊಂದು ಅಲ್ಪಸಂಖ್ಯಾತರು ಅಥವಾ ಬಹುಸಂಖ್ಯಾತರು ನಡೆಸುತ್ತಿರಬಹುದು. ಆಯಾ ಧರ್ಮದ ತತ್ವಗಳನ್ನು ಕೆಲಮಟ್ಟಿಗೆ ಬೋಧಿಸುತ್ತಿರಬಹುದು. ಇಂತಹ ಸಂಸ್ಥೆಗಳಲ್ಲಿನ ಕಲಿಕೆಯನ್ನು ಶಿಕ್ಷಣ ಎಂಬ ಪದದ ವ್ಯಾಪ್ತಿಯಿಂದ ಹೊರಗಿಡುವುದು ಸರಿಯಲ್ಲ ಎಂದು ಸುಪ್ರೀಮ್ ಕೋರ್ಟು ಸಾರಿದೆ.

Advertisements

ಮದರಸಾಗಳನ್ನು ಸ್ಥಾಪಿಸಿ ನಡೆಸುವುದು ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿನ ಪರಿಧಿಗೇ ಸೇರುತ್ತದೆ. ಈ ಸಂಸ್ಥೆಗಳು ನೀಡುವ ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸಲು ಕಾಯಿದೆಯೊಂದರ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಜಾತ್ಯತೀತ ತತ್ವಗಳನ್ನು ಉಲ್ಲಂಘಿಸಿದೆಯೆಂದು ಅಲಹಾಬಾದ್ ಹೈಕೋರ್ಟು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಈ ಕಾಯಿದೆಯನ್ನು ರದ್ದುಗೊಳಿಸಿತ್ತು. ಹೈಕೋರ್ಟಿನ ತೀರ್ಪಿಗೆ ಸುಪ್ರೀಮ್ ಕೋರ್ಟು ತಡೆಯಾಜ್ಞೆ ನೀಡಿತ್ತು. ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಕುರಿತು ತಾನು ನಿರ್ಧರಿಸುವ ತನಕ ಈ ತಡೆಯಾಜ್ಞೆ ಜಾರಿಯಲ್ಲಿತ್ತು. ಹೈಕೋರ್ಟಿನ ಈ ತೀರ್ಪಿನಿಂದಾಗಿ ಮದರಸಾದಲ್ಲಿ ಓದಿದ ಲಕ್ಷಾಂತರ ಮಕ್ಕಳ ಭವಿಷ್ಯ ಅನಿಶ್ಚಯತೆಗೆ ಗುರಿಯಾಗಿತ್ತು. ಉತ್ತರಪ್ರದೇಶದ 13,364 ಮದರಸಾಗಳು 12 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಲಿವೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್.ಸಿ.ಇ.ಆರ್.ಟಿ) ಪಠ್ಯಕ್ರಮದ ಜೊತೆ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡಲು ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆಗ ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಾರ್ಟಿ ಸರ್ಕಾರವಿತ್ತು.

ಈ ಕಾಯಿದೆಯ ಪ್ರಕಾರ ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ಈ ಮಂಡಳಿಯ ಅಧಿಕಾಂಶ ಸದಸ್ಯರು ಮುಸಲ್ಮಾನರೇ ಆಗಿದ್ದರು. ‘ಮೌಲ್ವಿ’ಯಿಂದ (10ನೆಯ ತರಗತಿಗೆ ಸಮ) ಹಿಡಿದು, ‘ಫಾಝಿಲ್’ ವರೆಗಿನ (ಸ್ನಾತಕೋತ್ತರ ಪದವಿಗೆ ಸಮ) ಶಿಕ್ಷಣ ಪಠ್ಯಕ್ರಮ (ಕೋರ್ಸ್ ಮೆಟೀರಿಯಲ್) ಮತ್ತು ಪರೀಕ್ಷೆಗಳನ್ನು ನಡೆಸುವುದು ಈ ಮಂಡಳಿಯ ಕೆಲಸವಾಗಿತ್ತು.

ಈ ಕಾಯಿದೆಯನ್ನು ಉತ್ತರಪ್ರದೇಶದ ವಕೀಲರೊಬ್ಬರು ಅಲಹಾಬಾದ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಕಾಯಿದೆಯಲ್ಲಿನ ಪಠ್ಯಕ್ರಮ ಮತ್ತು ಅದು ಉಂಟು ಮಾಡುವ ವಾತಾವರಣವು ಕಾನೂನಿನ ಮುಂದೆ ಎಲ್ಲರೂ ಸಮಾನ ಎಂಬ ಸಾಂವಿಧಾನಿಕ ಹಕ್ಕನ್ನು (14ನೆಯ ಕಲಮು) ಉಲ್ಲಂಘಿಸಿದೆ. ಧರ್ಮ, ಜನಾಂಗ, ಜಾತಿ, ಲಿಂಗ ಹಾಗೂ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ನಿಷೇಧದ 15ನೆಯ ಕಲಮನ್ನು ಉಲ್ಲಂಘಿಸಿದೆ. ಆರರಿಂದ ಹದಿನಾಲ್ಕು ವರ್ಷ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕನ್ನೂ (21 ಎ ಕಲಮು) ಮದರಸಾ ಕಾಯಿದೆ ಉಲ್ಲಂಘಿಸಿದೆ ಎಂದೂ ವಕೀಲರು ಆಕ್ಷೇಪಿಸಿದ್ದರು.

ಪ್ರಶ್ನಿತ ಮದರಸಾ ಕಾಯಿದೆಯು 14ನೆಯ ವರ್ಷದವರೆಗೆ ಅಥವಾ ಎಂಟನೆಯ ತರಗತಿ ತನಕ ಕಡ್ಡಾಯವಾಗಿ ಗುಣಮಟ್ಟದ ಮತ್ತು ಉಚಿತ ಸಾರ್ವತ್ರಿಕ ಶಿಕ್ಷಣ ನೀಡುವಲ್ಲಿ ಈ ಕಾಯಿದೆ ವಿಫಲವಾಗಿದೆ. ಮದರಸಾಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಹೀಗಾಗಿ ಸಂವಿಧಾನದ 21ನೆಯ ಕಲಮಿನ ಉಲ್ಲಂಘನೆಯಾಗಿದೆ ಎಂದೂ ಅರ್ಜಿದಾರರು ವಾದಿಸಿದ್ದರು.

ಮದರಸಾ ಕಾಯಿದೆಯು ಸಂವಿಧಾನಬದ್ಧವಾಗಿದೆ. ಅಲಹಾಬಾದ್ ಹೈಕೋರ್ಟು ಈ ಕಾಯಿದೆಯನ್ನು ಇಡಿಯಾಗಿ ರದ್ದು ಮಾಡುವ ಅಗತ್ಯವಿರಲಿಲ್ಲ. ಕೇವಲ ಆಕ್ಷೇಪಾರ್ಹ ಅಂಶಗಳನ್ನು ಪರಿಶೀಲಿಸಬಹುದಿತ್ತು ಎಂಬ ನಿಲುವನ್ನು ಉತ್ತರಪ್ರದೇಶ ಸರ್ಕಾರ ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠದ ಮುಂದೆ ಮಂಡಿಸಿತ್ತು.

ಕೇಂದ್ರ ಸರ್ಕಾರವು 2020ರ ಫೆಬ್ರವರಿ ಮೂರರಂದು ಸಂಸತ್ತಿನ ಮುಂದೆ ಮಾಡಿಸಿರುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು 24,010 ಮದರಸಾಗಳಿವೆ. ಈ ಪೈಕಿ 14,528 ಮದರಸಾಗಳು (ಶೇ.60ಕ್ಕೂ ಹೆಚ್ಚು) ಉತ್ತರಪ್ರದೇಶದಲ್ಲಿವೆ. ಈ ಪೈಕಿ ಮಾನ್ಯತೆ ಪಡೆದ 11,621 ಮದರಸಾಗಳೂ ಸೇರಿವೆ. 2023ರಲ್ಲಿ ಹತ್ತು ಮತ್ತು 12ನೆಯ ತರಗತಿಗಳಿಗೆ ಸಮನಾದ ಯೂಪಿ ಮದರಸಾ ಶಿಕ್ಷಣ ಮಂಡಲಿಯ ಪರೀಕ್ಷೆಗಳಿಗೆ 1.69 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಸುಭಾಷ್ ವಿದ್ಯಾರ್ಥಿ ಮತ್ತು ವಿವೇಕ್ ಚೌಧರಿ ಅವರ ದ್ವಿಸದಸ್ಯ ಪೀಠವು 2004ರ ಯೂಪಿ ಮದರಸಾ ಕಾಯಿದೆ ಸಂವಿಧಾನಬಾಹಿರ ಎಂದು ಸಾರಿ ಅದನ್ನು ಇಡಿಯಾಗಿ ರದ್ದುಗೊಳಿಸಿತ್ತು. ಜಾತ್ಯತೀತತೆ, ಶಿಕ್ಷಣದ ಹಕ್ಕು, ಕೇಂದ್ರ ಕಾಯಿದೆಯೊಂದಿಗೆ ಸಂಘರ್ಷಕ್ಕಿಳಿಯುತ್ತದೆ ಎಂಬ ಮೂರು ಕಾರಣಗಳನ್ನು ಹೈಕೋರ್ಟು ಮುಂದೆ ಮಾಡಿತ್ತು. ಎಲ್ಲ ಧರ್ಮಗಳು ಮತ್ತು ಧಾರ್ಮಿಕ ಪಂಗಡಗಳನ್ನು ಪ್ರಭುತ್ವವು ಸಮಾನವಾಗಿ ಕಾಣಬೇಕು. ಯಾವುದೇ ಧರ್ಮ ಅಥವಾ ಪಂಗಡವನ್ನು ಅನುಗ್ರಹ, ಅನುಭೂತಿ ಅಥವಾ ಕೃಪಾದೃಷ್ಟಿಯಿಂದ ನೋಡಕೂಡದು ಮತ್ತು ಆ ಧರ್ಮ ಅಥವಾ ಪಂಗಡದೊಂದಿಗೆ ಗುರುತಿಸಿಕೊಳ್ಳಕೂಡದು ಎಂಬುದು ಜಾತ್ಯತೀತತೆಯ ಅರ್ಥ ಎಂದು ಹೈಕೋರ್ಟು ತನ್ನ ತೀರ್ಪಿನಲ್ಲಿ ಹೇಳಿತ್ತು. ಜಾತ್ಯತೀತತೆಯ ಈ ವಿವರಣೆಗೆ ಸಮರ್ಥನೆಯಾಗಿ ಈ ಹಿಂದೆ ಸುಪ್ರೀಮ್ ಕೋರ್ಟು ತೀರ್ಮಾನಿಸಿದ್ದ ಕೇಸುಗಳನ್ನು ಉಲ್ಲೇಖಿಸಿತ್ತು.

ಆರರಿಂದ ಹದಿನಾಲ್ಕು ವಯಸ್ಸಿನ ಎಲ್ಲ ಮಕ್ಕಳಿಗೆ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಇದು ಸಂವಿಧಾನ ನೀಡಿರುವ ಹಕ್ಕು (21 ಎ ಕಲಮು). ಆಧುನಿಕ ಪಠ್ಯ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡದಿರುವ ಕಾರಣ ಮದರಸಾ ಕಾಯಿದೆಯು ಈ ಹಕ್ಕನ್ನು ಉಲ್ಲಂಘಿಸಿದೆ. ಪಾರಂಪರಿಕ ಶಿಕ್ಷಣವನ್ನು ಅತ್ಯಂತ ಕನಿಷ್ಠ ಶುಲ್ಕ ಪಡೆದು ನೀಡುವ ಮೂಲಕ ತನ್ನ ಕರ್ತವ್ಯವನ್ನು ಪಾಲಿಸುತ್ತಿರುವುದಾಗಿ ಕುಂಟು ನೆಪವನ್ನು ಸರ್ಕಾರ ಒಡ್ಡುವಂತಿಲ್ಲ ಎಂದು ಹೈಕೋರ್ಟು ಹೇಳಿತ್ತು.

ಪದವಿಗಳನ್ನು ನೀಡುವ ಮದರಸಾ ಮಂಡಳಿ ಕಾಯಿದೆಯು 1956ರ ಯು.ಜಿ.ಸಿ. ಕಾಯಿದೆಯನ್ನು ವ್ಯತಿರೇಕಿಸುತ್ತದೆ. ಯು.ಜಿ.ಸಿ. ಕಾಯಿದೆಯ ಪ್ರಕಾರ ಮದರಸಾ, ಮದರಸಾ ಮಂಡಳಿಯೂ ಸೇರಿದಂತೆ ಇತರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಡಿಗ್ರಿಗಳನ್ನು ನೀಡುವಂತಿಲ್ಲ ಎಂದೂ ನ್ಯಾಯಾಲಯ ಸಾರಿತ್ತು.

ಪರ ಮತ್ತು ವಿರುದ್ಧ ವಾದಗಳನ್ನು ಆಲಿಸಿದ್ದ ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಇತ್ತೀಚೆಗೆ (ಅಕ್ಟೋಬರ್ 22) ಹೇಳಿದ್ದು- ಮದರಸಾ ಕಾಯಿದೆಯನ್ನು ರದ್ದುಗೊಳಿಸುವುದು ನೆಗಡಿ ಬಂದಿತೆಂದು ಮೂಗನ್ನು ಕೊಯ್ದುಕೊಂಡಂತೆ (ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ..to throw the baby out with the bathwater). ತನ್ನ ವ್ಯಾಪ್ತಿಯಲ್ಲಿ ನೀಡಲಾಗುವ ಶಿಕ್ಷಣ ಹೆಚ್ಚು ಜಾತ್ಯತೀತ ಸ್ವರೂಪದ್ದಾಗಿರುವಂತೆ ನಿಯಮಗಳನ್ನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ.

ಮದರಸಾ ನೀಡುತ್ತಿರುವ ಶಿಕ್ಷಣವು ಜಾತ್ಯತೀತವಾಗಿಲ್ಲ ಮತ್ತು ವಿದ್ಯಾರ್ಥಿಗಳು ಮುಖ್ಯಧಾರೆಗೆ ಸೇರಲು ಪೂರಕವಾಗಿಲ್ಲ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಕಡ್ಡಾಯ ಮತ್ತು ಉಳಿದ ಮುಖ್ಯಧಾರೆಯ ಪಠ್ಯ ವಿಷಯಗಳು ಐಚ್ಛಿಕ ಎಂಬ ಯಥಾಸ್ಥಿತಿಯನ್ನೇ ಮದರಸಾ ಕಾಯಿದೆಯು ಇನ್ನಷ್ಟು ಭದ್ರಗೊಳಿಸಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಸುಪ್ರೀಮ್ ಕೋರ್ಟ್ ನೆನ್ನೆ ನೀಡಿರುವ ತೀರ್ಪಿನ ನೇರ ಪರಿಣಾಮ ಉತ್ತರಪ್ರದೇಶದಲ್ಲಿ ಆಗಲಿದೆ. ಆದರೆ ಈ ತೀರ್ಪು ದೇಶಾದ್ಯಂತ ಧಾರ್ಮಿಕ ಶಿಕ್ಷಣದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಸಂಬಂಧದ ವಿಚಾರಣೆಯ ಸಂದರ್ಭದಲ್ಲಿ ಹಲವು ಬಾರಿ ಹೇಳಿದ್ದರು. ಗುರುಕುಲಗಳು ಮತ್ತು ಕಾನ್ವೆಂಟುಗಳೂ ಸೇರಿದಂತೆ ಈ ತೀರ್ಪು ದೇಶದಲ್ಲಿನ ಎಲ್ಲ ಧಾರ್ಮಿಕ ಶಿಕ್ಷಣದ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಪರಿಣಾಮ ಬೀರಲಿದೆ. ಜಾತ್ಯತೀತತೆಯ ತತ್ವಗಳು ಈ ಸಂಸ್ಥೆಗಳೊಂದಿಗೆ ಯಾವ ರೀತಿ ಸಂವಾದಿಸಲಿದೆ ಎಂಬುದನ್ನು ತೀರ್ಮಾನಿಸಿವೆ.

ಉತ್ತರಪ್ರದೇಶ ಮತ್ತು ಅಸ್ಸಾಂ ನಂತಹ ಕೆಲ ರಾಜ್ಯಗಳು ಮದರಸಾಗಳನ್ನು ಧಾರ್ಮಿಕ ಶಿಕ್ಷಣ ಸಂಸ್ಥೆಗಳೆಂಬ ಆಧಾರದ ಮೇಲೆ ಅವುಗಳ ಬಾಗಿಲು ಮುಚ್ಚಿಸಲು ಮುಂದಾಗಿವೆ. ಭಯೋತ್ಪಾದಕರನ್ನು ಬೆಳೆಸುವ ಕೇಂದ್ರಗಳೆಂಬ ಹಣೆಪಟ್ಟಿ ಹಚ್ಚಲಾಗಿದೆ. ಸಾಕ್ಷ್ಯಾಧಾರವಿಲ್ಲದ ಆರೋಪವಿದು. ಮದರಸಾಗಳಿಗೆ ಸರ್ಕಾರಿ ಹಣ ಪೂರೈಕೆಯನ್ನು ನಿಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಇತ್ತೀಚೆಗೆ ಶಿಫಾರಸು ಮಾಡಿತ್ತು. ಕಲಿಕೆಯ ಕೇಂದ್ರ ಅಥವಾ ಅಧ್ಯಯನ ಕೇಂದ್ರ ಎಂಬುದು ಮದರಸಾ ಪದದ ಅರ್ಥ. ಶಾಲೆ ಕಾಲೇಜಿಗೆ ಸಮಾನಾರ್ಥಕ ಪದ.

1989ರಲ್ಲಿ ಬೀದರ್ ನಲ್ಲಿ ಸ್ಥಾಪಿತವಾದ ಶಾಹೀನ್ ಅಕಾಡೆಮಿಯು ಮದರಸಾ ವಿದ್ಯಾರ್ಥಿಗಳನ್ನು ಮುಖ್ಯಧಾರೆಯೊಂದಿಗೆ ಬೆಸೆಯಲು ಶ್ರಮಿಸುತ್ತಿದೆ. ವರ್ಷಾಂತರಗಳಲ್ಲಿ ಈ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ಇತರೆ ಕ್ಷೇತ್ರಗಳಲ್ಲಿ ಉದ್ಯೋಗ ಗಳಿಸಿದ್ದಾರೆ.

ಇದನ್ನೂ ಓದಿ ಖಾಸಗಿ ಶಾಲೆಗಳು ಹೆಚ್ಚಾದವು, ಜೇಬಿಗೆ ಕತ್ತರಿ ಬಿತ್ತು, ಶಿಕ್ಷಣ ಕುಸಿಯಿತು…

2011-12ರಲ್ಲಿ 15,762 ಮುಸ್ಲಿಮೇತರ ವಿದ್ಯಾರ್ಥಿಗಳು ಸರ್ಕಾರಿ ಮಾನ್ಯತೆ ಪಡೆದ ಮದರಸಾಗಳನ್ನು ಸೇರಿ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ 12,069 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗಳಿಗೆ ಸೇರಿದವರು ಮತ್ತು 3,693 ವಿದ್ಯಾರ್ಥಿಗಳು ಬುಡಕಟ್ಟು ಪಂಗಡಗಳಿಗೆ ಸೇರಿದವರು. ಈ ಸಂಖ್ಯೆ 2015-16ರ ಹೊತ್ತಿಗೆ 20,195ಕ್ಕೆ ಹೆಚ್ಚಿತ್ತು. ಮದರಸಾದಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚು ಸಂಖ್ಯೆಯ ಹೆಣ್ಣುಮಕ್ಕಳು ಪ್ರವೇಶ ಪಡೆದಿರುವುದು ಮತ್ತೊಂದು ವಿಶೇಷ. 2015-16ರಲ್ಲಿ ಮದರಸಾಗಳಲ್ಲಿ ಮುಸ್ಲಿಮ್ ಬಾಲಕರ ಪ್ರವೇಶಾತಿ ಪ್ರಮಾಣ ಶೇ.38ಕ್ಕೆ ಕುಸಿದರೆ, ಮುಸ್ಲಿಮ್ ಬಾಲಕಿಯರ ಪ್ರಮಾಣ ಶೇ.62ಕ್ಕೆ ಜಿಗಿದಿದೆ. ಮದರಸಾದಲ್ಲಿ ಶಿಕ್ಷಣ ಪಡೆದವರು ವೈದ್ಯಕೀಯ- ಎಂಜಿನಿಯರಿಂಗ್ ಮಾತ್ರವಲ್ಲದೆ ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಮದರಸಾಗಳ ಪ್ರಾಥಮಿಕ ಉದ್ದೇಶವೇ ಶಿಕ್ಷಣ ಎಂದು ಸುಪ್ರೀಮ್ ಕೋರ್ಟ್ ಸಾರಿ ಹೇಳಿದೆ. ಈ ಸಂಸ್ಥೆಗಳ ಹೆಸರಿಗೆ ವಿನಾಕಾರಣ ಮಸಿ ಬಳಿದು ವಿಕೃತಗೊಳಿಸುವ ವಿವಾದಗಳು ಈಗಲಾದರೂ ನಿಲ್ಲಬೇಕಿದೆ.

ಮದರಸಾ ಶಿಕ್ಷಣವು ಮಗುವಿನ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದು ತಪ್ಪು ತಿಳಿವಳಿಕೆಯೆಂದು ಈ ತೀರ್ಪು ಸಾರಿದೆ. ಮುಸಲ್ಮಾನ ಬಡ ವರ್ಗಗಳಿಗೆ ಮೂಲಭೂತ ಶಿಕ್ಷಣದ ಬಾಗಿಲುಗಳನ್ನು ತೆರೆಯುತ್ತದೆ ಮತ್ತು ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಹಾಗೂ ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ತಾವೇ ನಿರ್ವಹಿಸುವ ಅಲ್ಪಸಂಖ್ಯಾತರ ಹಕ್ಕುಗಳನ್ನು ಈ ತೀರ್ಪು ಎತ್ತಿ ಹಿಡಿದಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X