ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆಯೋ ಅಥವಾ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆಯೋ ಎಂಬ ಅನುಮಾನವು ಪ್ರಗತಿಪರ ವಲಯದಲ್ಲಿ ಕೇಳಿಬರತೊಡಗಿದೆ. ಇದಕ್ಕೆ ಕಾರಣ, ಮಂಗಳೂರಿನಲ್ಲಿ ಇತ್ತೀಚೆಗೆ ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಮಂಗಳೂರು ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿರುವುದು.
ಪ್ಯಾಲೆಸ್ತೀನ್ ಮೇಲಿನ ದಾಳಿ ವಿರೋಧಿಸಿ, ಕದನ ವಿರಾಮಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಎಡಪಕ್ಷಗಳ ವತಿಯಿಂದ ನ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಒಂದು ವಾರಕ್ಕೆ ಮುಂಚಿತವಾಗಿಯೆ ಪ್ರತಿಭಟನೆಯ ಮಾಹಿತಿ ನೀಡಿ, ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದ್ದರೂ, ಕಾನೂನು ಸುವ್ಯವಸ್ಥೆ ಡಿಸಿಪಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಸಿಪಿಐಎಂ ಕಚೇರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಕಾನೂನು ಸುವ್ಯವಸ್ಥೆಯ ಕಾರಣವನ್ನು ಮುಂದೊಡ್ಡಿದ್ದರು. ಆದರೂ, ಪ್ರತಿಭಟನೆ ರದ್ದುಗೊಳಿಸಲು ನಿರಾಕರಿಸಿದ್ದ ಎಡಪಕ್ಷಗಳ ನಾಯಕರು, ಧ್ವನಿ ವರ್ಧಕ ಬಳಸದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ‘ಅದಕ್ಕೂ ಅವಕಾಶ ಇಲ್ಲ, ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದರು.

ಈ ಎಚ್ಚರಿಕೆಗೆ ಮಣಿಯದ ಎಡಪಕ್ಷಗಳು ಪ್ರತಿಭಟನಾ ಸಭೆಯನ್ನು ತೀರ್ಮಾನದಂತೆ ನಡೆಸಿದರು. ಪೊಲೀಸ್ ಇಲಾಖೆಯ ಈ ನಡೆಯನ್ನು, ಪ್ಯಾಲೆಸ್ತೀನ್ ನಾಗರಿಕರ ಮೇಲಿನ ಬರ್ಬರ ದಾಳಿಯ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನಿರಾಕರಿಸುವ ನಿಲುವನ್ನು ಸಭೆಯಲ್ಲಿ ಬಲವಾಗಿ ಖಂಡಿಸಿದ್ದರು.
ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಪ್ರವೀಣ್ ಕೆ ಎಂಬುವವರು 14 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
“ಅಕ್ರಮಕೂಟ ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದು, 11 ಮಂದಿಯ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಉಲ್ಲೇಖಿಸಿದ್ದಾರೆ.
ಎಫ್ಐಆರ್ನಲ್ಲಿ ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾಧವ ಶೆಟ್ಟಿ, ಸಂತೋಷ್ ಬಜಾಲ್, ಸುಕುಮಾರ್ ರಾವ್, ಇಮ್ತಿಯಾಜ್, ಮುನೀರ್ ಕಾಟಿಪಳ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಹಯವದನ ರಾವ್, .ಸೀತಾರಾಮ ಬೆರಿಂಜ ಹಾಗೂ ಇತರರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಒಂದು ಕಡೆ ಕಾಂಗ್ರೆಸ್ ಪಕ್ಷವು ಇಸ್ರೇಲ್ ನಡೆಯನ್ನು ಖಂಡಿಸಿ, ಹೇಳಿಕೆ ನೀಡುತ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಪ್ಯಾಲೆಸ್ತೀನ್ ಪರವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ ಎಫ್ಐಆರ್ ದಾಖಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆಯೋ ಅಥವಾ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆಯೋ ಎಂಬ ಅನುಮಾನವು ಪ್ರಗತಿಪರ ಚಿಂತಕರು ಪ್ರಶ್ನಿಸುತ್ತಿದ್ದಾರೆ. ಮಂಗಳೂರು ಪೊಲೀಸರು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲವೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

