ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು ಎಂದು ನಿಖಿಲ್ ಕುಮಾರಸ್ವಾಮಿ ಅವರಿಗೆ ಹೇಳಿಕೊಡಲಾಗಿದೆ. ಸೋಲಿನ ಭಯ ಕಾಡುತ್ತಿದೆ ಅದಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪ್ರಚಾರದ ವೇಳೆ ಅತ್ತ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕುಡ್ಲೂರು ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋತಿದ್ದ, ನಂತರ ರಾಮನಗರದಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಈಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಯೋಗೇಶ್ವರ್ ಗೆಲ್ಲುವುದು ಶತಸಿದ್ಧ” ಎಂದು ಹೇಳಿದ್ದಾರೆ.
“ಮಾಜಿ ಪ್ರಧಾನಿ ದೇವೇಗೌಡರು ಮೂರು-ನಾಲ್ಕು ದಿನಗಳಿಂದ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ. ಹೇಗಾದರೂ ತಮ್ಮ ಮೊಮ್ಮಗನನ್ನು ಗೆಲ್ಲಿಸಬೇಕು ಎಂದು ಹೊರಟಿದ್ದಾರೆ. ಕಟುಗರಿಗೆ ಕಣ್ಣೀರು ಬರಲ್ಲ ಎಂದು ದೇವೇಗೌಡ್ರು ಹೇಳಿದರು. ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲಿ ಹೋಗಿ ಅಳಿ ದೇವೇಗೌಡರೇ. ಇಲ್ಲಿ ಅತ್ತರೆ ಏನು ಪ್ರಯೋಜನ” ಎಂದು ಸಿಎಂ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಲೋಕಾಯುಕ್ತ ವಿಚಾರಣೆ | ಸುಳ್ಳು ಆರೋಪಕ್ಕೆ ಸತ್ಯವನ್ನು ತಿಳಿಸಿದ್ದೇನೆ: ಸಿಎಂ ಸಿದ್ದರಾಮಯ್ಯ
“ನಾವು ಈಗಾಗಲೇ ಕ್ಷೇತ್ರಕ್ಕೆ ರೂ. 500 ಕೋಟಿಗೂ ಹೆಚ್ಚು ಕೊಟ್ಟಿದ್ದೀವಿ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ನೀಡುತ್ತೇವೆ. ಇನ್ನೂ ಮೂರುವರೆ ವರ್ಷ ನಮ್ಮ ಸರ್ಕಾರವೇ ಇರುತ್ತದೆ. ಕುಮಾರಸ್ವಾಮಿ ಸರ್ಕಾರ ಬರಲ್ಲ. ಅನುದಾನ ನೀಡುವುದು ನಾನು ಮತ್ತು ಡಿ.ಕೆ. ಶಿವಕುಮಾರ್” ಎಂದು ಹೇಳಿದರು.
ಇನ್ನು “ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡುತ್ತಾರೆ ಎಂದು ಬಿಜೆಪಿ- ಜೆಡಿಎಸ್ ಸುಳ್ಳು ಪ್ರಚಾರ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಇರುವವರೆಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ” ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
