ಚಕ್ರಾ–ಸಾವೇಹಕ್ಲು ಮುಳುಗಡೆಯ ಮೂಲ ಸಂತ್ರಸ್ತರ ಸಮಸ್ಯೆಗಳನ್ನು ನಿವಾರಿಸುವಂತೆ ಆಗ್ರಹಿಸಿ ರೈತರೊಂದಿಗೆ ಶೀಘ್ರ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸೋಶಿಯಲ್ ಜಸ್ಟಿಸ್ ಪಬ್ಲಿಕ್ ಪ್ರಾಬ್ಲಮ್ ಸಂಘಟನೆಯ ಪ್ರಮುಖ ರಿಯಾಜ್ ಅಹ್ಮದ್ ಹೇಳಿದರು.
ನೈಜ ಸಂತ್ರಸ್ತರಿಗೆ ಪುನರ್‌ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಇದರಿಂದಾಗಿ ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ದೂರಿದರು.
ದಾಖಲೆಗಳನ್ನು ಪರಿಶೀಲಿಸಿ ಭೂಮಿ ಮಂಜೂರು ಮಾಡಬೇಕು. ಹದ್ದುಬಸ್ತು ಮಾಡಿ, ಪಹಣಿಯನ್ನು ರೈತರಿಗೆ ನೀಡಬೇಕು. ಕೆಲವರಿಗೆ ಭೂಮಿ ಮಂಜೂರಾತಿ ಮಾಡಿದ್ದಾರೆ. ಆದರೆ ಹದ್ದುಬಸ್ತು ಮಾಡಿ ಪಹಣಿ ನೀಡಿಲ್ಲ. ಇನ್ನೂ ಕೆಲವರಿಗೆ ಭೂಮಿಯೇ ಮಂಜೂರಾತಿ ಮಾಡಿಲ್ಲ ಎಂದು ಆರೋಪಿಸಿದರು.

ಕೆಲವರ ಜಮೀನುಗಳು ಮುಳುಗಡೆ ಆಗಿಲ್ಲ. ಅಂತಹವರಿಗೆ ಜಮೀನುಗಳನ್ನು ಮನಸ್ಸಿಗೆ ಬಂದಂತೆ ಜಿಲ್ಲಾಡಳಿತ ಮಂಜೂರು ಮಾಡಿದೆ. ಇದು ಸಂಪೂರ್ಣ ಕಾನೂನು ಬಾಹಿರ. ಅವೈಜ್ಞಾನಿಕವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವ ಕೆಲವು ರೈತರು ಇದೀಗ ಅಂತಹ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಮೈಸೂರಿನ ಮುಡಾ ಹಗರಣಕ್ಕಿಂತ ದೊಡ್ಡ ಹಗರಣ ಭೂಮಿ ಮಂಜೂರಾತಿಯಲ್ಲಿ ನಡೆದಿದೆ. ಇದರಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.
ಚಕ್ರಾ–ಸಾವೇಹಕ್ಲು ಮುಳುಗಡೆಯ ಮೂಲ ಸಂತ್ರಸ್ತರ ಪೈಕಿ ಹಲವರು ಇನ್ನೂ ಜಮೀನು ಮಂಜೂರಾತಿಗಾಗಿ ಅಲೆದಾಡುತ್ತಿದ್ದಾರೆ. ಇಂತಹವರಿಗೆ ನ್ಯಾಯ ಕೊಡಿಸುವುದು ಕಂದಾಯ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು!
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಗಣೇಶ್, ಆನಂದ, ಲಿಂಗಪ್ಪ ಗೌಡ್ರು, ಶ್ರೀನಿವಾಸ್ ಚಕ್ಕರ್, ನಾಗರಾಜ್, ಜಯಶೀಲ ಮತ್ತು ಸೈಯದ್ ಸೈಫುಲಾ ಉಪಸ್ಥಿತರಿದ್ದರು.
