ಶಿವಮೊಗ್ಗ ಜಿಲ್ಲೆಯ ಸಾಗರದ ವರದಹಳ್ಳಿ ರಸ್ತೆಯಲ್ಲಿರುವ ವನಶ್ರೀ ವಸತಿ ವಿದ್ಯಾಲಯದ ಮುಖ್ಯಸ್ಥ, ಆರ್‌ಎಸ್‌ಎಸ್ ಮುಖಂಡ ಮಂಜಪ್ಪ ವಿರುದ್ಧ ಮತ್ತೊಂದು ಪೋಕ್ಸೊ ಕಾಯ್ದೆಯ ಜತೆಗೆ ದಲಿತ ದೌರ್ಜನ್ಯ ಪ್ರಕರಣವನ್ನು ದಾಖಲಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ದಲಿತ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಪೋಕ್ಸೊ ಜತೆಗೆ ಅಟ್ರಾಸಿಟಿ ಪ್ರಕರಣವನ್ನೂ ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಬುಧವಾರ ದಾಖಲಿಸಲಾಗಿದೆ.
ಬೆಂಗಳೂರು ಮೂಲದ ವಿದ್ಯಾರ್ಥಿನಿ ವನಶ್ರೀ ವಸತಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ನಾಲ್ಕು ತಿಂಗಳಿಂದ ಶಾಲೆಯ ಮುಖ್ಯಸ್ಥ ಮಂಜಪ್ಪ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ವಿದ್ಯಾರ್ಥಿನಿ ಪೋಷಕರೊಂದಿಗೆ ಸಾಗರ ಗ್ರಾಮಾಂತರ ಠಾಣೆಗೆ ಬುಧವಾರ ಭೇಟಿ ನೀಡಿ ದೂರು ದಾಖಲಿಸಿದ್ದಾಳೆ. ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಅಧಿಕಾರಿ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ,ಪರಿಶೀಲಿಸಿದ್ದಾರೆ ನಡೆಸಿದ್ದಾರೆ. ಆರೋಪಿ ಮಂಜಪ್ಪ ಸದ್ಯ ನಾಪತ್ತೆಯಾಗಿದ್ದು, ಪೋಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ‘ಚಕ್ರಾ–ಸಾವೇಹಕ್ಲು’ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ನೀಡಿ: ಹೋರಾಟಗಾರರ ಆಗ್ರಹ
ಕಳೆದ ವರ್ಷ ಜೂನ್ ಮೊದಲ ವಾರದಲ್ಲಿ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ತೇಜಸ್ವಿನಿ ಎಂಬಾಕೆ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಳು. ಆಕೆಗೆ ಭಾರೀ ಪ್ರಮಾಣದಲ್ಲಿ ನೀರು ಕುಡಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿ ಬಾಲಕಿಯ ಸಹಪಾಠಿಗಳು ಆರೋಪಿಸಿದ್ದರು. ಆ ಬಳಿಕ ಈ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ವನಶ್ರೀ ಮಂಜಪ್ಪ ಎಂದೇ ಹೆಸರಾಗಿರುವ ಎಚ್ ಪಿ ಮಂಜಪ್ಪ ಆರ್‌ಎಸ್‌ಎಸ್ ನಂಟು ಹೊಂದಿದ್ದು, ಬಹಳ ವರ್ಷಗಳಿಂದಲೂ ಮಕ್ಕಳನ್ನು ಮತ್ತು ವಸತಿ ಶಾಲೆಯಲ್ಲಿ ಕೆಲಸಕ್ಕೆ ಸೇರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿತ್ತು.
