ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಾಲಕನೊಬ್ಬ ಬರಿಗೈಯಲ್ಲಿಯೇ ಮಲ ಬಾಚಿರುವ ಅಮಾನವೀಯ ಘಟನೆ ಗೃಹ ಸಚಿವ ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿಯೇ ನಡೆದಿದ್ದು, ಮಲ ಹೊರುವ ಪದ್ದತಿ ಇನ್ನೂ ಜೀವಂತವಿರುವುದನ್ನು ಎತ್ತಿ ತೋರಿಸಿದೆ.
ಮಲ ಹೊರುವ ಪದ್ದತಿಯನ್ನು ಸರ್ಕಾರ ನಿಷೇಧ ಮಾಡಿದ್ದರೂ ಕೂಡ ಕೆಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೌಚಾಲಯದ ಗುಂಡಿ ತುಂಬಿ ಹರಿಯುತ್ತಿದ್ದ ಮಲವನ್ನು ದಲಿತ ಸಮುದಾಯದ ಬಾಲಕಾರ್ಮಿಕ ಹಾಗೂ ವ್ಯಕ್ತಿಯಿಂದ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಗೃಹ ಸಚಿವ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ನಿಲ್ದಾಣದ ಆವರಣದಲ್ಲಿ ಈ ಘಟನೆ ನಡೆದಿದ್ದು, ನಿಲ್ದಾಣದ ಒಳಗಿರುವ ಸಾರ್ವಜನಿಕ ಶೌಚಾಲಯದ ಗುಂಡಿಯಿಂದ ತುಂಬಿ ಹರಿಯುತ್ತಿದ್ದ ಮಲವನ್ನು ದಲಿತರಿಂದ ಸ್ವಚ್ಛಗೊಳಿಸಿದ್ದಾರೆ. ದಲಿತ ಸಮುದಾಯದ 10 ವರ್ಷದ ಬಾಲಕ ಹಾಗೂ ಓರ್ವ ವ್ಯಕ್ತಿ ಮಲವನ್ನು ಸ್ವಚ್ಛಗೊಳಿಸುತ್ತಿದ್ದ ದೃಷ್ಯ ಕಂಡುಬಂದಿದೆ.

ದಲಿತರಿಂದ ಮಲ ಸ್ವಚ್ಛಗೊಳಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾಧ್ಯಮದವರನ್ನು ಕಂಡ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಾಲಕ, “ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಕುಮಾರಣ್ಣ ಎಂಬುವರು ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದಾರೆ. ನಾನು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದು, ತನಗೆ 10 ವರ್ಷ” ಎಂದು ಹೇಳಿಕೊಂಡಿದ್ದಾನೆ.
ಮಾಧ್ಯಮದವರ ಜತೆಗೆ ಮಾತನಾಡುತ್ತಿದ್ದ ಬಾಲಕನಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ದೂರದಿಂದಲೇ ಕೈಸನ್ನೆ ಮಾಡಿ ಮಾತನಾಡದಂತೆ ಗದರಿಸಿದ್ದಾನೆ. ಕೂಡಲೇ ಇಬ್ಬರೂ ಕೆಲಸ ಬಿಟ್ಟು ಅಲ್ಲಿಂದ ಶೌಚಾಲಯದ ಕಡೆ ತೆರಳುವ ದೃಷ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಸ್ ನಿಲ್ದಾಣದೊಳಗೆ ನೂರಾರು ಪ್ರಯಾಣಿಕರ ಸಮ್ಮುಖದಲ್ಲೇ ಸುಡುವ ಬಿಸಿಲಿನಲ್ಲಿ ಬರಿ ಮೈಯಲ್ಲಿದ್ದ ಆ ಬಾಲಕ ಮಲವನ್ನು ಬಾಚುತ್ತಿದ್ದ ಮನಕಲಕುವ ದೃಷ್ಯ ಕಂಡುಬಂದಿರುವುದು ನಮ್ಮ ಸಮಾಜದ ಅಮಾನವೀಯತೆಯನ್ನು ತೋರಿಸುತ್ತದೆ. ಬಾಲಕ ಹಾಗೂ ವ್ಯಕ್ತಿಯಿಂದ ಬರಿ ಕೈಯಲ್ಲಿಯೇ ಮಲ ಬಾಚಿಸುವ ಮೂಲಕ ಮಾನವ ಹಕ್ಕು ಉಲ್ಲಂಘನೆ ಮಾಡಿರುವುದಲ್ಲದೆ, ಮಲ ಹೊರುವ ಪದ್ದತಿ ನಿಷೇಧ ಕಾನೂನು ಉಲ್ಲಂಘನೆ ನಡೆದಿದೆ.
ಶೌಚಗುಂಡಿ ತುಂಬಿದ ಕೂಡಲೇ ಸೆಪ್ಟಿಂಕ್ ಟ್ಯಾಂಕ್ ಯಂತ್ರದ ಮೂಲಕ ಸ್ವಚ್ಛಗೊಳಿಸುವ ಕೆಲಸವನ್ನು ಮಾಡಬೇಕಿತ್ತು. ಆದರೆ ನಿಲ್ದಾಣದ ಅಧಿಕಾರಿಗಳು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಶೌಚಾಲಯದ ಗುಂಡಿ ತುಂಬಿ ನಿಲ್ದಾಣದ ಒಳಕ್ಕೆ ಹರಿಯತೊಡಗಿದೆ. ಇದರಿಂದ ನಿಲ್ದಾಣದಲ್ಲಿ ದುರ್ನಾತ ಆವರಿಸಿ ಎಲ್ಲರೂ ಮೂಗು ಮುಚ್ಚಿಕೊಂಡು ಒಡಾಡುವಂತಾಗಿತ್ತು. ಈ ನಿಲ್ದಾಣಕ್ಕೆ ಬರುವ ಅದೆಷ್ಟು ಮಂದಿ ಪ್ರಯಾಣಿಕರು ರೋಗ ರುಜಿನಗಳಿಗೆ ತುತ್ತಾಗಿದ್ದರೋ ದೇವರೆ ಬಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಡವರು, ದಲಿತರ ಅಸಹಾಯಕತೆಯನ್ನು ಬಳಸಿಕೊಂಡು ಬರಿಗೈಯಲ್ಲಿ ಸ್ವಚ್ಛತೆ ಕಾರ್ಯಕ್ಕೆ ಬಳಸಿಕೊಂಡಿರುವುದು ನಿಜಕ್ಕೂ ಅಮಾನವೀಯ ಹಾಗೂ ಕಾನೂನು ಬಾಹಿರ.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ | ರೈತರಿಗೆ ನೀಡಿದ ನೋಟಿಸ್ ಹಿಂಪಡೆಲು ಅಧಿಕಾರಿಗಳಿಗೆ ಸಚಿವ ಕೆ ಎಚ್ ಮುನಿಯಪ್ಪ ಸೂಚನೆ
ದೇಶದಲ್ಲಿ ಮಾನವನಿಂದ ಮಲ ಹೊರುವ ಪದ್ದತಿ ನಿಷೇಧ ಹಾಗೂ ಬಾಲಕಾರ್ಮಿಕ ಪದ್ದತಿ ನಿಷೇಧ ಕಾನೂನುಗಳು ಜಾರಿಯಲ್ಲಿದ್ದರೂ ಅಧಿಕಾರಿಗಳ ಸಮ್ಮುಖದಲ್ಲೇ ಕಾನೂನು ಉಲ್ಲಂಘನೆಯಾಗಿರುವುದು ನಿಜಕ್ಕೂ ದುರಂತ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ವಕ್ಷೇತ್ರದಲ್ಲೇ ರಾಜಾರೋಷವಾಗಿ ನಿರ್ಭೀತಿಯಿಂದ ಇಂತಹ ಘಟನೆ ನಡೆದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.