ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?

Date:

Advertisements
ವಿಜಯಪುರದ ಧರಣಿಯ ಹಿಂದೆ ಬಿಜೆಪಿಯ ಭಿನ್ನಮತವಿದೆ. ನಾಯಕತ್ವಕ್ಕಾಗಿನ ಕಚ್ಚಾಟವಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಹಣಿಯುವ ಉದ್ದೇಶವಿದೆ. ಭಿನ್ನರ ಬೆನ್ನಿಗೆ ಈಗ ಶೋಭಾ ಕರಂದ್ಲಾಜೆ ನಿಂತು ಬೆಂಬಲಿಸುತ್ತಿರುವುದು, ಹಲವರಿಗೆ ಹಲವು ಸಂದೇಶಗಳನ್ನು ರವಾನಿಸುತ್ತಿದೆ. ಹಾಗಾಗಿ ವಿಜಯಪುರದ ಧರಣಿ, ವಕ್ಫ್ ಕಾಯ್ದೆ ವಾಪಸ್ ಪಡೆಯಲೂ ಅಲ್ಲ, ರೈತರ ಪರವೂ ಅಲ್ಲ.

ವಕ್ಫ್ ಕಾಯ್ದೆ ರದ್ದುಗೊಳಿಸಲು ಕೋರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಈ ಧರಣಿಯ ಉದ್ದೇಶವೇನು ಎಂದು ಧರಣಿನಿರತ ಬಿಜೆಪಿ ನಾಯಕರನ್ನು ಪ್ರಶ್ನಿಸಿದರೆ, ‘ರಾಜ್ಯ ಸರ್ಕಾರ ರೈತರ ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ. ನಾವು ರೈತರ ಪರ ನಿಂತು ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಅತ್ತ ರಾಜ್ಯ ಸರ್ಕಾರದ ವತಿಯಿಂದ, ‘ರೈತರಿಗೆ ಕೊಟ್ಟಿರುವ ನೋಟಿಸ್ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಾನೂನು ಕ್ರಮ. ಬಿಜೆಪಿ ಸರ್ಕಾರದಲ್ಲೂ ರೈತರಿಗೆ ನೋಟಿಸ್ ನೀಡಲಾಗಿತ್ತು. ರೈತರಿಗೆ ಯಾವುದೇ ಕಾರಣಕ್ಕೆ ತೊಂದರೆ ಆಗುವುದಿಲ್ಲ, ನೋಟಿಸ್ ಹಿಂಪಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ.

Advertisements

ಅಲ್ಲಿಗೆ ಈ ಅನಿರ್ದಿಷ್ಟಾವಧಿ ಧರಣಿ ನಿಲ್ಲಬೇಕಾಗಿತ್ತು. ಆದರೆ ನಾಲ್ಕನೇ ದಿನಕ್ಕೆ ಮುಂದುವರೆದಿದೆ. ಸಾಲದು ಎಂದು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪತಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಅಧ್ಯಕ್ಷ ಜಗದಂಬಿಕಾ ಪಾಲ್ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ. ಇದರ ನಡುವೆ, ‘ನಾನು ಕೋರಿದ್ದಕ್ಕೆ ಜೆಪಿಸಿ ಅಧ್ಯಕ್ಷರು ರಾಜ್ಯಕ್ಕೆ ಬಂದಿದ್ದಾರೆ’ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿರುವುದು, ಹಲವು ಹತ್ತು ಸಂಗತಿಗಳತ್ತ ಬೆಳಕು ಚೆಲ್ಲುತ್ತಿದೆ.

ಶೋಭಾ ಕರಂದ್ಲಾಜೆಯವರು ಕೇಂದ್ರ ಸರ್ಕಾರದಲ್ಲಿ ಪ್ರಸ್ತುತ ಕಾರ್ಮಿಕ ಮತ್ತು ಉದ್ಯೋಗ, ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರಾಗಿದ್ದಾರೆ. ಅವರಿಗೆ ಅವರ ಖಾತೆಗೆ ಸಂಬಂಧಿಸಿ ವಿಷಯಗಳೇ ನೂರಾರು ಇರುತ್ತವೆ. ಅವುಗಳಿಗೆ ಸಮಯ ಕೊಡುವುದೇ ಕಷ್ಟವಿರುತ್ತದೆ. ಅಂಥದ್ದರಲ್ಲಿ, ವಿಜಯಪುರಕ್ಕೆ ಬಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಾಲ್ಕು ದಿನಗಳ ಕಾಲ ಧರಣಿಯಲ್ಲಿ ಕೂರುವ ಜರೂರು ಏನಿದೆ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸುಪ್ರೀಮ್ ಕೋರ್ಟ್ ಮಹತ್ತರ ತೀರ್ಪು- ಮದರಸಾಗಳಿಗೆ ಮಸಿ ಬಳಿವ ವಿಕೃತಿ ನಿಲ್ಲಲಿ

ಶೋಭಾ ಅವರಿಗೆ ನಿಜವಾಗಲೂ ರೈತ ಪರ ಕಾಳಜಿ ಇದ್ದರೆ, ದಿಲ್ಲಿಯಲ್ಲಿ ಧರಣಿನಿರತ ರೈತರೊಂದಿಗೆ ಕೂರಬಹುದಿತ್ತು. ತಾವು ಒಕ್ಕಲಿಗರಾಗಿ ಹುಟ್ಟಿದ್ದಕ್ಕೆ, ಜಾತಿಯ ನೆಪದಲ್ಲಿ ಅಧಿಕಾರದ ಸ್ಥಾನಗಳನ್ನು ಏರಿದ್ದಕ್ಕೆ ನ್ಯಾಯ ಒದಗಿಸಬಹುದಾಗಿತ್ತು. ಕಳೆದ ಸಾಲಿನಲ್ಲಿ ಕೇಂದ್ರ ಕೃಷಿ ಸಚಿವೆಯಾಗಿದ್ದಾಗ, ರೈತರ ಕಲ್ಯಾಣಕ್ಕಾಗಿ ಅನೇಕ ಕೆಲಸಗಳನ್ನು ಮಾಡಬಹುದಿತ್ತು.

ಮಾಡುವ ಅಧಿಕಾರ ಮತ್ತು ಅವಕಾಶಗಳಿದ್ದರೂ ಮಾಡದೆ, ಈಗ ವಿಜಯಪುರಕ್ಕೆ ಬಂದು ಧರಣಿ ಕೂತಿರುವುದು ಏಕೆ?

ವಿಜಯಪುರದ ಧರಣಿಯ ಹಿಂದೆ ಬಿಜೆಪಿಯ ಭಿನ್ನಮತವಿದೆ. ನಾಯಕತ್ವಕ್ಕಾಗಿ ಕಚ್ಚಾಟವಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಹಣಿಯುವ ಉದ್ದೇಶವಿದೆ. ಅಪ್ಪ-ಮಕ್ಕಳ ಅಟಾಟೋಪದ ವಿರುದ್ಧ ಇಲ್ಲಿಯವರೆಗೆ ಹೋರಾಡಿ ಸುಸ್ತಾದ ನಾಯಕರ ಬೆನ್ನಿಗೆ ಈಗ ಶೋಭಾ ಕರಂದ್ಲಾಜೆ ನಿಂತು ಬೆಂಬಲಿಸುತ್ತಿರುವುದು, ಹಲವರಿಗೆ ಹಲವು ಸಂದೇಶಗಳನ್ನು ರವಾನಿಸುತ್ತಿದೆ.

ಹಾಗಾಗಿ ವಿಜಯಪುರದ ಧರಣಿ, ವಕ್ಫ್ ಕಾಯ್ದೆ ವಾಪಸ್ ಪಡೆಯಲೂ ಅಲ್ಲ, ರೈತರ ಪರವೂ ಅಲ್ಲ. ವಕ್ಫ್ ಎಂದಾಕ್ಷಣ ಮುಸ್ಲಿಮರು ಎದ್ದು ನಿಲ್ಲುತ್ತಾರೆ. ಅದು ಹಿಂದು-ಮುಸ್ಲಿಂ ಸಂಘರ್ಷಕ್ಕೆ ಕಾರಣವಾಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗುತ್ತದೆ. ಪಕ್ಷದ ಅಜೆಂಡವೂ ಅದೇ ಆದ್ದರಿಂದ, ಪಕ್ಷದ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಸಹಜವಾಗಿಯೇ ಸುದ್ದಿ ಮಾಧ್ಯಮಗಳು, ಇದು ರೈತ ಪರ ಹೋರಾಟವೆಂದು ಭಾವಿಸಿ ಸುದ್ದಿ ಮಾಡುತ್ತವೆ.

ಇದಕ್ಕೆ ಕಳಶವಿಟ್ಟಂತೆ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ನಾನು ಮತ್ತು ಶೋಭಾ ಕರಂದ್ಲಾಜೆಯೇ ಕರ್ನಾಟಕದ ಮುಂದಿನ ನಾಯಕರು, ನಾವಿಬ್ಬರೂ ಒಟ್ಟಿಗೆ ಧರಣಿ ಕೂತಿರುವುದು ನಮ್ಮ ಪಕ್ಷದ ಕೆಲವರಿಗೆ ಆಶ್ಚರ್ಯ ಉಂಟುಮಾಡಿದೆ. ನಾವಿಬ್ಬರೇ ಮುಂದಿನ ನಾಯಕರು ಎಂಬುದನ್ನು ಅವರು ಅರಿಯಬೇಕು’ ಎಂದು ತಮ್ಮ ವಿರೋಧಿಗಳಿಗೆ ಸಂದೇಶ ರವಾನಿಸಿರುವುದು, ಮೇಲಿನ ಸಂಶಯಗಳಿಗೆ ಸ್ಪಷ್ಟತೆಯನ್ನು ದೊರಕಿಸಿಕೊಡುತ್ತದೆ.

ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಗುಂಪು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದೆ. ವಿಜಯೇಂದ್ರ ಅಧ್ಯಕ್ಷರಾಗಿರುವವರೆಗೂ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸುವುದಿಲ್ಲ, ಪಕ್ಷದ ಪರ ಪ್ರಚಾರ, ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಉಪ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳನ್ನು ಸೋಲಿಸಿ, ಅದರ ಹೊಣೆಯನ್ನು ವಿಜಯೇಂದ್ರನ ತಲೆಗೆ ಕಟ್ಟಿ ಕೆಳಗಿಳಿಸುವ ಷಡ್ಯಂತ್ರವೂ ಇದರ ಹಿಂದಿದೆ ಎನ್ನಲಾಗುತ್ತಿದೆ.

ಆದರೆ, ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ವಿಜಯೇಂದ್ರರಿಗೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಹೆಚ್ಚೆಂದರೆ, ‘ಯತ್ನಾಳ ಮತ್ತು ಜಾರಕಿಹೊಳಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅದು ಉಪಚುನಾವಣೆ ಮೇಲೆ ಪರಿಣಾಮ ಬೀರಲ್ಲ’ ಎಂದು ಹೇಳಿಕೆ ಕೊಡುವಷ್ಟಕ್ಕೇ ಸೀಮಿತವಾಗಿದೆ. ಏಕೆಂದರೆ, ಅಪ್ಪ-ಮಕ್ಕಳ ವಿರುದ್ಧ ಸಮರ ಸಾರಿರುವವರ ಹಿಂದೆ ಕೇಂದ್ರ ಸಚಿವರಾದ ಸೋಮಣ್ಣ, ಪ್ರಲ್ಹಾದ ಜೋಷಿ, ಮಾಜಿ ಸಂಸದರಾದ ಸಿದ್ದೇಶ್, ಕೋರೆ, ಹಾಲಿ ಸಂಸದ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿಗಳಿದ್ದಾರೆ. ಸಂಘ ಪರಿವಾರದ ಅಧ್ವರ್ಯುಗಳಿದ್ದಾರೆ. ಬಿಜೆಪಿ ಹೈಕಮಾಂಡಿನ ನಾಯಕರಿದ್ದಾರೆ.

ಈ ಬಂಡಾಯದ ಗುಂಪಿಗೆ ಯಡಿಯೂರಪ್ಪನವರ ಕಡೆಯಿಂದಲೇ ರಾಜಕಾರಣಕ್ಕೆ ಬಂದ ಶೋಭಾ ಕರಂದ್ಲಾಜೆ ಸೇರ್ಪಡೆಗೊಂಡಿದ್ದು ಹೇಗೆ ಮತ್ತು ಏಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಶೋಭಾ ಅವರು ರಾಜ್ಯ ರಾಜಕಾರಣದತ್ತ ಮುಖ ಮಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನೋಡಿದರು, ವಿಜಯೇಂದ್ರ ಬಿಡಲಿಲ್ಲ. ಆ ನಂತರ ಲೋಕಸಭಾ ಚುನಾವಣೆಯ ವೇಳೆ, ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಟಿಕೆಟ್ ಸಿಗದಂತೆ ನೋಡಿಕೊಳ್ಳಲಾಯಿತು. ಸದಾನಂದಗೌಡರಿಂದ ತೆರವಾದ ಸ್ಥಾನಕ್ಕೆ- ಬೆಂಗಳೂರು ಉತ್ತರಕ್ಕೆ- ಶೋಭಾಗೆ ಟಿಕೆಟ್ ಕೊಟ್ಟು ಸೋಲಿಸಲು ನೋಡಿದರು. ಅದೃಷ್ಟಕ್ಕೆ ಗೆದ್ದು ಕೇಂದ್ರದಲ್ಲಿ ಸಚಿವರಾದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಗರ ಅತಿರೇಕದ ಮಾತುಗಳೂ, ಕಾಂಗ್ರೆಸ್ಸಿಗರ ಕರುಣಾಜನಕ ಸ್ಥಿತಿಯೂ

ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾದಾಗ, ತೋರಿಕೆಗಾದರೂ ಕರೆದು ಸನ್ಮಾನಿಸಲಿಲ್ಲ. ರಾಜಕೀಯ ಗುರುಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಲು ಬಿಡಲಿಲ್ಲ. ಇದು, ತಮ್ಮನ್ನು ಪಕ್ಷದಲ್ಲಿ ಬೆಳೆಯಲು ಬಿಡದೆ, ಮೂಲೆಗುಂಪು ಮಾಡಲಾಗುತ್ತಿದೆಯೇ ಎಂಬ ಅನುಮಾನಕ್ಕೆ ಕಾರಣವಾಯಿತು. ಅಸಮಾಧಾನಗೊಂಡ ಶೋಭಾರನ್ನು ಭಿನ್ನಮತದ ಕ್ಯಾಂಪಿನತ್ತ ಕರೆದೊಯ್ದಿತು. ಬಸನಗೌಡ ಪಾಟೀಲ ಯತ್ನಾಳರ ಜೊತೆ ಧರಣಿಯಲ್ಲಿ ಕೂತು ಅಪ್ಪ-ಮಕ್ಕಳಿಗೆ ಸಂದೇಶ ರವಾನಿಸಿತು.

ರಾಜಕೀಯ ನಾಯಕರ ನಡುವಿನ ಕಚ್ಚಾಟ, ಕಾಲೆಳೆದಾಟ ಸಾಮಾನ್ಯ ಸಂಗತಿ. ಅದು ಎಲ್ಲ ಪಕ್ಷಗಳಲ್ಲೂ ಇದ್ದದ್ದೇ. ಆದರೆ ಅದಕ್ಕೆ ವಕ್ಫ್ ನೆಪವಾಗಿದ್ದು ದುರಂತ. ಆ ಸತ್ಯ ಸುದ್ದಿಯಾಗದಿರುವುದು ಸೋಜಿಗ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X