ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿರುವ ಈಶಾನ್ಯ ಹಿಲ್ ವಿಶ್ವವಿದ್ಯಾಲಯದಲ್ಲಿ (ಎನ್‌ಇಎಚ್‌ಯು) ಉದ್ವಿಗ್ನತೆ ಮುಂದುವರೆದಿದೆ. ವಿಶ್ವವಿದ್ಯಾಲಯದ ಕುಲಪತಿ ಪ್ರಭಾ ಶಂಕರ್ ಶುಕ್ಲಾ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನೂ ವಿದ್ಯಾರ್ಥಿಗಳು ಆರಂಭಿಸಿದ್ದಾರೆ.
ಎನ್‌ಇಎಚ್‌ಯುನ ಸ್ಟೂಡೆಂಟ್ಸ್ ಯೂನಿಯನ್ (NEHUSU) ಮತ್ತು ಖಾಸಿ ವಿದ್ಯಾರ್ಥಿ ಸಂಘ (KSU) ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. “ಕುಲಪತಿ ಪ್ರಭಾ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ. ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ರಿಜಿಸ್ಟ್ರಾರ್ ಮತ್ತು ಡೆಪ್ಯುಟಿ ರಿಜಿಸ್ಟ್ರಾರ್ ಪದಚ್ಯುತಿಗೊಳಿಸಬೇಕು. ಪರಿಷ್ಕೃತ ಹಾಸ್ಟೆಲ್ ಶುಲ್ಕಗಳು, ಶುದ್ಧ ಕುಡಿಯುವ ನೀರು, ವೈ-ಫೈ ಹಾಗೂ ಆಂಬ್ಯುಲೆನ್ಸ್ ಸೇವೆಗಳು ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು” ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
“ನಮ್ಮ ವಿಶ್ವವಿದ್ಯಾನಿಲಯದ ಗುಣಮಟ್ಟ ಕುಸಿಯುತ್ತಿದೆ. ವಿಶ್ವವಿದ್ಯಾಲಯದಲ್ಲಿ ನ್ಯಾಯಸಮ್ಮತತೆ ಇರಬೇಕು. ಅಧಿಕಾರ ದುರುಪಯೋಗಕ್ಕೆ ಅವಕಾಶ ಕೊಡಬಾರದು. ಉಪಕುಲಪತಿಯನ್ನು ಹೊರಹಾಕಬೇಕು” ಎಂದು ಆಗ್ರಹಿಸಿದ್ದಾರೆ.
ಉಪಕುಲಪತಿಗಳು ತಮ್ಮ ಸ್ವಾರ್ಥಕ್ಕಾಗಿ ವಿಶ್ವವಿದ್ಯಾನಿಲಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ತಮ್ಮ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುವವರನ್ನು ರಿಜಿಸ್ಟಾರ್ ಮತ್ತು ಡೆಪ್ಯೂಟಿ ರಿಜಿಸ್ಟ್ರಾರ್ ಆಗಿ ನೇಮಿಸಿಕೊಂಡಿದ್ದಾರೆ. ಈ ಅಧಿಕಾರಿಗಳು ತಾವು ಮಾಡಬೇಕಾದ ಕೆಲಸಕ್ಕೆ ಸಂಪೂರ್ಣವಾಗಿ ಸಮರ್ಥರಲ್ಲ” ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
“ಕುಲಪತಿ, ರಿಜಿಸ್ಟಾರ್ ಓಂಕಾರ್ ಸಿಂಗ್ ಮತ್ತು ಡೆಪ್ಯೂಟಿ ರಿಜಿಸ್ಟಾರ್ ಅಮಿತ್ ಗುಪ್ತಾ ಅಧಿಕಾರದಿಂದ ಕೆಳಗಿಳಿಯುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಎನ್‌ಇಎಚ್‌ಯು ಬೋಧಕರ ಸಂಘ (NEHUTA) ಬೆಂಬಲ ನೀಡಿದೆ.