ಗಾಂಧೀಜಿಯವರ ಬಗ್ಗೆ ಇರುವ ಪ್ರಶ್ನೆಗಳಿಗೆ ಅವರೇ ಉತ್ತರವಾಗಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆ ಮಾರ್ಗದಲ್ಲಿ ನಡೆದಿದ್ದರು ಎಂದು ಬೀದರ ನೂತನ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ವಿಜಕುಮಾರ ಬಾವಗಿ ಹೇಳಿದರು.
ಬುಧವಾರ ಬೀದರ್ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜನಪದ ಕಲಾವಿದರ ಬಳಗ ಬೀದರ ಸಹಯೋಗದಲ್ಲಿ ಜರುಗಿದ ‘ಗಾಂಧೀಜಿಯವರ ವಿಚಾರ ಪ್ರಸ್ತುತತೆ ಯುವ ಜನತೆಗೆ’ ವಿಷಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಲು ಅವಕಾಶ ಕಲ್ಪಿಸುವ ಮೂಲಕ ಮಹತ್ಮಾ ಗಾಂಧೀಜಿಯವರು ಕ್ಲಾಸ್ ಮ್ಯೂಮೆಂಟ್‌ನಿಂದ ಮಾಸ್ ಮ್ಯೂಮೆಂಟ್ ಆಗಿ ಪರಿವರ್ತನೆ ಮಾಡಿದರು. ಗಾಂಧೀಜಿ ವಿಚಾರಧಾರೆಗಳು ಇಂದಿಗೂ ನಮ್ಮ ಭಾರತ ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಕಾಣಬಹುದು’ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಟಿ. ದಾಸರಹಳ್ಳಿ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕೆ.ಜಿ.ಎಸ್.ಎನ್ ಕಾರ್ಯಕ್ರಮ ಸಂಘಟಕರಾದ ಡಾ.ಅಬಿದ ಬೇಗಮ್ ಮಾತನಾಡಿ, ‘ಹೆಣ್ಣು ಮಕ್ಕಳು ಕೇವಲ ಅಕ್ಷರದ ಶಿಕ್ಷಣ ಪಡೆದರೆ ಸಾಲದು, ಬದುಕಿನ ಮೌಲ್ಯ ಶಿಕ್ಷಣ ಪಡೆಯಬೇಕು. ಆದರೆ, ಇಂದಿನ ಮಕ್ಕಳಿಗೆ ಮೌಲ್ಯಯುತ ಜೀವನದ ಶಿಕ್ಷಣ ನೀಡಲಾಗುತ್ತಿಲ್ಲ’ ಎಂದರು.
‘ಮಹಿಳೆಯರಲ್ಲಿ ಸ್ಪೂರ್ತಿ ತುಂಬುವ ಉದ್ದೇಶದಿಂದ ಮಹಿಳಾ ಕಾಲೇಜುಗಳಲ್ಲಿ ಹೆಚ್ಚಾಗಿ ಇಂತಹ ವಿಚಾರ ಸಂಕಿರಣಗಳು ಆಯೋಜಿಸುತ್ತಿದ್ದೇವೆ. ಹೆಣ್ಣು ಮಕ್ಕಳು ಇದರ ಲಾಭ ಪಡೆಯಬೇಕು. ಮಕ್ಕಳಲ್ಲಿ ಧೈರ್ಯ, ನಾಯಕತ್ವ ಗುಣ, ಸೇವಾ ಮನೋಭಾವ ಬೆಳೆಸಲು ಎನ್‌ಎಸ್‌ಎಸ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ತಮ್ಮಲ್ಲಿಯೇ ಬತ್ತಿ ಹೋಗದಂತೆ ಬಿಡದೆ ಇತರರಿಗೂ ಹಂಚಬೇಕು’ ಎಂದು ಕರೆ ನೀಡಿದರು.

ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಕುಮಾರ ಸೋನಾರೆ ಮಾತನಾಡಿ, ‘ಮಕ್ಕಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಬಿತ್ತುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಂಧೀಜಿ ಅವರ ಸತ್ಯ, ಅಹಿಂಸೆ, ತ್ಯಾಗ ಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಸುತ್ತಮುತ್ತಲಿನ ಪರಿಸರವೂ ನಾವು ಸ್ವಚ್ಛವಾಗಿಡಬಹುದು’ ಎಂದರು.
ಗಾಂಧೀಜಿಯವರ ವಿದ್ಯಾರ್ಥಿ ಜೀವನ ಕುರಿತು ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷೆ ಪಾರ್ವತಿ ವಿ. ಸೋನಾರೆ ಮಾತನಾಡಿ, ‘ಗಾಂಧೀಜಿಯವರ ಆಶಯಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ. ನಾವು ಕನ್ನಡಿಯಂತಾಗದೆ ಗಾಜಿನಂತಾಗಿ ಎರಡೂ ಮಗ್ಗಲು ವಿಮರ್ಶಿಸಬೇಕು. ಮಹಾತ್ಮರ ಜೀವನವನ್ನು ಆಳವಾಗಿ ಅದ್ಯಯನ ಮಾಡಬೇಕು. ಜಗತ್ತಿಗೆ ಶಾಂತಿ ಸಂದೇಶ ನೀಡಿದ ಗಾಂದೀಜಿಯವರ ಜೀವನ ಸಂದೇಶ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು’ ಎಂದು ಸಲಹೆ ನೀಡಿದರು.
ಗಾಂಧೀಜಿಯವರ ವಿಚಾರದಲ್ಲಿ ಮಹಿಳೆಯರ ಶಿಕ್ಷಣ ಕುರಿತು ಸಾಹಿತಿ ಕಸ್ತೂರಿ ಪಟಪಳ್ಳಿ ಅವರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮನೋಜಕುಮಾರ ಕುಲಕರ್ಣಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶ್ರೀನಿವಾಸ ರೆಡ್ಡಿ, ಡಾ.ವಿದ್ಯಾ ಪಾಟೀಲ್, ಸಹ ಪ್ರಾಧ್ಯಾಪಕಿ ವಿಜಯಲಕ್ಷ್ಮಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ, ಜಾನಪದ ಕಲಾವಿದರ ಬಳಗದ ಕಾರ್ಯದರ್ಶಿ ಯೇಸುದಾಸ ಅಲಿಯಂಬುರೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಚಂದ್ರಕಾಂತ ಹಳ್ಳಿಖೇಡಕರ್, ಮಾರುತಿ ಏಣಕುರೆ, ಕುಪೇಂದ್ರ ಹೊಸಮನಿ, ಅಂಬರೇಶ ಮಲ್ಲೇಶಿ, ಬಾಲಾಜಿ ಜಬಾಡೆ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.