ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ರಾಜಶ್ರೀ ಸಿಮೆಂಟ್ ಕಾರ್ಖಾನೆಯಿಂದ ನಿತ್ಯವೂ ವಿಷಪೂರಿತ ಕೆಮಿಕಲ್ ಹೊರಸೂಸುತ್ತಿದ್ದು, ಬಿಳಿ ಧೂಳಿನಿಂದ ಅಸ್ತಮಾ, ಬಿಪಿ, ಚರ್ಮರೋಗ, ಹೃದಯಘಾತ, ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ರೋಗಗಳಿಗೆ ತುತ್ತಾಗುವ ಭೀತಿ ಉಂಟಾಗುತ್ತಿದೆ ಎಂದು ಮಳಖೇಡ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಪಾಂಡುಸಿಂಗ್ ಚೌವ್ಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪ್ರತಿ ಮುಂಜಾನೆ ಸಿಮೆಂಟ್ ಕಾರ್ಖಾನೆಯಿಂದ ವಿಷಪೂರಿತ ಕೆಮಿಕಲ್ ಧೂಳು, ಕಲುಷಿತ ಹೊಗೆ ಬೂದಿ ಹೊರಗಡೆ ಬಿಡುತ್ತಿರುವುದರಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ. ವೃದ್ದರು, ಮಕ್ಕಳು ಹಾಗೂ ಸಾರ್ವಜನಿಕರು ಹಲವು ರೋಗಗಳಿಗೆ ಬಲಿಯಾಗುವ ಪರಿಸ್ಥಿತಿ ಎದುರಾಗುತ್ತಿದೆಯೆಂದು ಕಲಬುರಗಿ ಜಿಲ್ಲೆಯ ಕರ್ನಾಟಕ ಮಾಲಿನ್ಯ ನಿಯಂತ್ರಣ ಆಡಳಿತ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
“ಸೇಡಂ ತಾಲೂಕಿನಲ್ಲಿ ಬರುವ ಹಲವು ಸಿಮೆಂಟ್ ಕಾರ್ಖಾನೆಯ ವಿಷಪೂರಿತ ಕೆಮಿಕಲ್ ಹೊಗೆ ಹಾಗೂ ಕಲುಷಿತ ಧೂಳು ಹೆಚ್ಚಾಗಿರುವುದರಿಂದ ಹೊರಗಡೆ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ ತೆರಳಬೇಕೆಂದು ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಪಡೆಯುವ ಪ್ರತಿಯೊಬ್ಬ ರೋಗಿಗೂ ಸಲಹೆ, ಸೂಚನೆ ನೀಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಸರ್ಕಾರದ ನೋಟಿಸ್‌ಗೆ ಬೆಲೆ ನೀಡಲ್ಲ, ಭೂ ಕಬಳಿಕೆ ವಿರುದ್ಧ ನಿಲ್ಲದು: ಆರ್ ಅಶೋಕ್
“ಸಿಮೆಂಟ್ ಕಾರ್ಖಾನೆಯಿಂದ ಸಾರ್ವಜನಿಕರಿಗೆ ನಿತ್ಯ ಉಸಿರಾಟದ ತೊಂದರೆಯಿಂದ ಬದುಕುವುದು ಕಷ್ಟಕಾರಿಯಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ಬೇಸತ್ತು ಹೋಗಿದ್ದೇವೆ” ಎಂದು ನೋವಿನಿಂದ ಹೇಳಿಕೊಂಡರು.
“ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ಕಿಡಿ ಕಾರಿದರು,
ವರದಿ: ಸುನೀಲ್ ರಾಣಿವಾಲ್