ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಬದುಕು ನಡೆಯಲಿದೆಯೆಂಬ ಕೀಳರಿಮೆ ಕಿತ್ತೊಗೆಯುವ ಕೆಲಸವಾಗಬೇಕಿದೆ ಎಂದು ರಾಮನಗರ ಜಿಲ್ಲಾ ಕಸಾಪ ಅಧ್ಯಕ್ಷ ಬಿ ಟಿ ನಾಗೇಶ್ ಅಭಿಪ್ರಾಯಪಟ್ಟರು.
ರಾಮನಗರದ ರಾಯರದೊಡ್ಡಿ ಸರ್ಕಲ್ ಬಳಿಯ ಶ್ರೀಭವನೇಶ್ವರಿ ಗುಡಿಯ ಸನ್ನಿಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ವತಿಯಿಂದ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ಕಾವ್ಯಯಾನ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಪೋಷಕರು ಮತ್ತು ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದಕ್ಕೆ ಮೊದಲು ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಕನ್ನಡ ಭಾಷೆಗೆ ಉಳಿಗಾಲವಿಲ್ಲ” ಎಂದರು.
“ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣಗೊಳಿಸಲು ಹಿರಿಯರು ದುಡಿದಿದ್ದು, ಅದರ ಫಲವಾಗಿ ಅಖಂಡ ಕರ್ನಾಟಕವಾಯಿತು. ಆದರೆ ಇಂದು ಆಳುವ ಅಧಿಕಾರಿ ಮತ್ತು ರಾಜಕೀಯ ವರ್ಗದ ಕನ್ನಡಿಗರೇ ನಮ್ಮನ್ನು ಕೀಳಾಗಿ ಕಾಣುವಂತಾಗಿದ್ದರ ಫಲವೇ ನುಡಿ ಅಳಿಯಲು ಕಾರಣವಾಗಿದೆ. ಆಂಗ್ಲ ನುಡಿಯ ಬಗ್ಗೆ ಜನಸಾಮಾನ್ಯರಲ್ಲಿ ಮೂಡುತ್ತಿರುವ ಒಲವು ಹಾಗೂ ಭ್ರಮೆಯೇ ಇದಕ್ಕೆ ಮೂಲಕಾರಣ. ಪ್ರತಿಯೊಬ್ಬ ಕನ್ನಡಿಗರೂ ತಾಯಿ ನುಡಿಯಲ್ಲಿ ಅರಿವು ಪಡೆಯಬೇಕು. ವಿಶ್ವದ ಯಾವುದೇ ನುಡಿಯಲ್ಲಿ ಇತಂಹ ಅರಿವು ಸಂಪತ್ತು ಸಿಗುವುದಿಲ್ಲ. ಕುವೆಂಪು, ಯು ಆರ್ ರಾವ್ ಅವರಂತಹ ಮೇಧಾವಿಗಳು ಓದಿದ್ದು ಕನ್ನಡ ಮಾಧ್ಯಮದಲ್ಲಿಯೇ ಎಂಬದನ್ನು ಆಂಗ್ಲ ನುಡಿ ವ್ಯಾಮೋಹ ಮೈಗೂಡಿಸಿಕೊಡಿರುವ ಪೋಷಕರು ತಿಳಿದುಕೊಂಡು ಕನ್ನಡ ಸೇವೆ ಆರಂಭಿಸುವ ಕಲಸಕ್ಕೆ ಮುಂದಾಗಬೇಕು” ಎಂದರು.
ಶ್ರೀ ಕೆಂಪೇಗೌಡ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಕೆ ಚಂದ್ರಯ್ಯ ಮಾತನಾಡಿ, “ಕನ್ನಡ ಸಾಹಿತ್ಯ ಹಾಗೂ ನುಡಿ ಬೆಳವಣಿಗೆಗೆ ಹಲವರು ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ನಾಡು-ನುಡಿಗೆ ಶ್ರಮಿಸಿದವರನ್ನು ನೆನಪಿಸಿಕೊಳ್ಳುವುದು ಸಂತಸದ ಸಂಗತಿ. ನಮ್ಮ ನಾಡಿನ ಪರಂಪರೆ ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆ ಅಭಿಮಾನ ಇಟ್ಟುಕೊಳ್ಳಬೇಕು ಎಂದರು.
ಆರ್.ವಿ.ಸಿ.ಎಸ್. ಕನ್ವೆನ್‌ಷನ್ ಹಾಲ್ ಮಾಲೀಕ ಆರ್.ವಿ. ಸುರೇಶ್ ಮಾತನಾಡಿ, ಪ್ರತಿಯೊಬ್ಬರೂ ತಾಯಿ ನುಡಿ ಕನ್ನಡವನ್ನು ಉಸಿರಾಗಿಸಿಕೊಂಡು ಒಲವು ಬೆಳೆಸಿಕೊಂಡು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಲು ಸಂಕಲ್ಪ ಮಾಡಬೇಕು ಎಂದರು.
ಹಿರಿಯ ಸಾಹಿತಿ ಜಿ ಎಚ್ ರಾಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಾಡಿನಲ್ಲಿ ಶ್ರೀಭವನೇಶ್ವರಿ ನಿರ್ಮಿಸಿದ್ದ ಪರಿಕಲ್ಪನೆ, ಕನ್ನಡ ನಾಡು ನುಡಿ, ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿ, ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ನುಡಿ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿದೆ. ಕನ್ನಡ ನುಡಿ ಕರ್ನಾಟಕ ತನ್ನದೇ ಆದ ನೆಲೆಗಟ್ಟನ್ನು ಹೊಂದಿದ್ದು, ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾನೀಯರನ್ನು ಸ್ಮರಿಸಿಕೊಂಡು ಇಂದಿನ ಯುವಜನಾಂಗ ಆಂಗ್ಲ ವ್ಯಾಮೋಹವನ್ನು ತೊರೆದು ಶ್ರೀಮಂತವಾಗಿರುವ ಕನ್ನಡ ನುಡಿ, ಕರ್ನಾಟಕ ಏಕೀಕರಣದ ನಿಜವಾದ ಆಶಯಗಳು ಸಾಕಾರಗೊಂಡಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾವು ನವೆಂಬರ್ ಕನ್ನಡಿಗರಾಗದೆ ವರ್ಷದ ಕನ್ನಡಿಗರಾಗಬೇಕು. ಅನ್ಯ ಭಾಷಿಕರನ್ನು ಪ್ರೀತಿಯಿಂದ ಮನವೊಲಿಸಿ ನಮ್ಮ ಕನ್ನಡ ನುಡಿಯನ್ನು ಕಲಿಸಬೇಕು. ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗ ಎಲ್ಲರೂ ಭೇದಭಾವ ಮರೆತು ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಬಿ ಟಿ ದಿನೇಶ್ ಬಿಳಗುಂಬ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ” ಹಿರಿಯರು ಹೋರಾಟದಿಂದ ದೊರಕಿಸಿ ಕೊಟ್ಟಿರುವ ಅಖಂಡ ಕನ್ನಡ ನಾಡು-ನುಡಿಯನ್ನು ಸಂರಕ್ಷಿಸುವ ಗುರುತರ ಜವಬ್ದಾರಿಯನ್ನು ಪ್ರತಿಯೊಬ್ಬ ಕನ್ನಡಿಗರೂ ಕೃತಿಯಲ್ಲಿ ಪ್ರತಿಪಾದಿಸಬೇಕಿದೆ. ಇಂದಿನ ಯುವಜನಾಂಗ ಕನ್ನಡ ನುಡಿ, ನಾಡು, ನೆಲ, ಜಲ ರಕ್ಷಣೆ ಮಾಡಿ ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲಾ ಕಟ್ಟಡ ಕಾಮಗಾರಿ ಅಪೂರ್ಣ : ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ವಿನಯ್ ಕುಮಾರ್, ಡಾ.ಕಾಕೋಳ ಶೈಲೇಶ್, ಹೆಚ್ ವಿ ಮೂರ್ತಿ ತಂಡ ಗೀತಗಾಯನ ನಡೆಸಿಕೊಟ್ಟರು. ಕಾವ್ಯಯಾನದಲ್ಲಿ ಮತ್ತೀಕೆರೆ ಚಲುವರಾಜು, ವರದರಾಜು, ಮಲ್ಲೇಶ್ ಚನ್ನಮಾನಹಳ್ಳಿ, ಕೂರಣಗೆರೆ ಕೃಷ್ಣಪ್ಪ, ಶೈಲಾಶ್ರೀನಿವಾಸ್, ರಮೇಶ್ ಹೊಸದೊಡ್ಡಿ, ಮಂಜುನಾಥ್, ಡಾ. ಪ್ರಸನ್ನ, ಹನುಮಂತು, ಕಿರಣ್‌ರಾಜ್, ಚೇತನ್ ಇನ್ನೂ ಮುಂತಾದವರು ವಾಚನ ಮಾಡಿದರು. ಮಕ್ಕಳಿಂದ ಭರತ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಭವನೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಎಂ ಚಂದ್ರಶೇಖರ್, ನಿವೃತ್ತ ಶಿಕ್ಷಕ ಕರಿತಿಮ್ಮೇಗೌಡ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಜೇಶ್ ಕವಣಾಪುರ, ತಾಲೂಕು ಕೋಶಾಧ್ಯಕ್ಷ ಬಿ ಕೆ ನಂಜುಂಡಯ್ಯ, ಡಾ.ಬೈರೇಗೌಡ, ಸಮದ್ ಸೇರಿದಂತೆ ಬಹುತೇಕರು ಇದ್ದರು.