ಆರೋಪಿ ಮತ್ತು ಸಂತ್ರಸ್ತರ ನಡುವೆ ರಾಜಿಯಾದರೂ ಕೂಡಾ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಈ ಮೂಲಕ ಹೊಂದಾಣಿಕೆ ಆಧಾರದ ಮೇಲೆ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಬಹುದು ಎಂಬ ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ತಳ್ಳಿಹಾಕಿದೆ.
ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಪಿ.ವಿ.ಸಂಜಯ್ ಕುಮಾರ್ ಅವರಿದ್ದ ಪೀಠವು ತೀರ್ಪು ನೀಡಿದೆ. “ಈ ಸಂಬಂಧ ಆದೇಶವನ್ನು ರದ್ದುಗೊಳಿಸಲಾಗಿದೆ. ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಕಾನೂನಿನ ಪ್ರಕಾರ ಮುಂದುವರಿಸಲಾಗುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಸರ್ಕಾರಿ ನೇಮಕಾತಿ ಪ್ರಕ್ರಿಯೆ ಆರಂಭವಾದರೆ ಅರ್ಧದಲ್ಲಿ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್
ಆರೋಪಿ ಮತ್ತು ಸಂತ್ರಸ್ತರ ನಡುವೆ ರಾಜಿ ಮಾಡಿಕೊಂಡರೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಯ ಸೆಕ್ಷನ್ 482ರ ಅಡಿಯಲ್ಲಿ ಹೈಕೋರ್ಟ್ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಬಹುದೇ ಎಂಬುದಕ್ಕೆ ಬಹುನಿರೀಕ್ಷಿತ ತೀರ್ಪು ಇದಾಗಿದೆ. 15 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಆರೋಪಿಗಳು ಮತ್ತು ಬಾಲಕಿಯ ಕುಟುಂಬದ ನಡುವೆ ರಾಜಿಯಾದ ನಂತರ, ಆರೋಪಿಗಳು ಪ್ರಕರಣವನ್ನು ರದ್ದುಗೊಳಿಸಲು ರಾಜಸ್ಥಾನ ಹೈಕೋರ್ಟ್‌ನ ಮಧ್ಯಸ್ಥಿಕೆಯನ್ನು ಕೋರಿದ್ದರು. ಹೈಕೋರ್ಟ್ ಅರ್ಜಿಯನ್ನು ಸ್ವೀಕರಿಸಿ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಆಕ್ಷೇಪಿಸಿ ರಾಮ್‌ಜಿ ಲಾಲ್ ಬೈರ್ವಾ ಎಂಬವರು ಅರ್ಜಿ ಸಲ್ಲಿಸಿದ್ದರು.
