ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆದ ಕಾರಣದಿಂದಾಗಿ ಹಾವೇರಿಯ ರೈತರೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಹಾವೇರಿ ಪೊಲೀಸರು ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡುತ್ತಿದ್ದಂತೆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಕನ್ನಡ ನ್ಯೂಸ್ ನೌ, ಕನ್ನಡ ದುನಿಯಾ, ಪಬ್ಲಿಕ್ ಟಿವಿ ಸೇರಿದಂತೆ ಕೆಲವು ಮಾಧ್ಯಮಗಳು ಹಾವೇರಿಯಲ್ಲಿ ರೈತರೊಬ್ಬರು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಕೆಲವು ಮಾಧ್ಯಮಗಳು ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್ ಆಧಾರದಲ್ಲೇ ಸುದ್ದಿ ಮಾಡಿದ್ದವು.

ಸದ್ಯ ಸುಳ್ಳು ಸುದ್ದಿ ಹರಡಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಸದರಾಗಿ ಜನರಿಗೆ ಸುಳ್ಳು ಸುದ್ದಿ ಹಂಚಿ ದಾರಿ ತಪ್ಪಿಸುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಮಾಧ್ಯಮಗಳು ಈ ಸುದ್ದಿ ಪ್ರಕಟಿಸುತ್ತಿದ್ದಂತೆ ಸ್ಪಷ್ಟನೆ ನೀಡಿದ ಹಾವೇರಿ ಪೊಲೀಸರು “ಕನ್ನಡ ನ್ಯೂಸ್ ನೌ ಎಂಬ ಹೆಸರಿನ ಡಿಜಿಟಲ್ ನ್ಯೂಸ್‌ನಲ್ಲಿ ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬ ರೈತ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾವೇರಿ ರೈತರು ಆರೋಪಿಸಿದ್ದಾರೆಂದು ವರದಿ ಪ್ರಕಟಿಸಿದೆ. ಆದರೆ ಈ ಸುದ್ದಿ ಸುಳ್ಳು, ಈ ರೀತಿ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ
#haveripolice #fakenews #factcheck @DgpKarnataka @igperdvg @anshu_ips @kspfactcheck @siddaramaiah @BZZameerAhmedK @DrParameshwara @DKShivakumar @Tejasvi_Surya @KarnatakaCops pic.twitter.com/o4SMx8OTTL
— SP Haveri (@sphaveri) November 7, 2024
ರೈತ ಚನ್ನಪ್ಪ ನೀಡಿರುವ ದೂರಿನ ಪ್ರಕಾರ ಅವರ ಪುತ್ರ ರೈತ ರುದ್ರಪ್ಪ ಐಸಿಐಸಿಐ ಬ್ಯಾಂಕ್‌ನ ಹಾವೇರಿ ಶಾಖೆಯಲ್ಲಿ 3 ಲಕ್ಷ ರೂಪಾಯಿ ಮತ್ತು ಖಾಸಗಿಯಾಗಿ ನಾಲ್ಕು ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದರು. ಅತೀ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಮನ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಾವೇರಿ ಪೊಲೀಸರು ತಿಳಿಸಿದ್ದಾರೆ.
ಹಾಗೆಯೇ ಸಾಲವಿರುವಾಗ ಬೆಳೆಯೂ ಹಾನಿಯಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಂತಿಮ ವರದಿಯನ್ನು ತಹಸೀಲ್ದಾರ ಹಾನಗಲ್ ಅವರಿಗೆ ಸಲ್ಲಿಸಲಾಗಿದೆ. ಈ ಸಂಬಂಧ ಮೃತರ ಕುಟುಂಬಕ್ಕೆ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರವೂ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
