ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್‌ನ(ಜಿ ಐ ಓ)ರಾಜ್ಯಮಟ್ಟದ ಸಮಾವೇಶವು ಬೆಂಗಳೂರು ನಗರದಲ್ಲಿರುವ ಸಿಎಂಎ ಗ್ರಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚಿಗೆ ಸಮಾರೋಪಗೊಂಡಿತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 1200 ಸದಸ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷೆ ಸೀಮಾ ತಾಜ್ ಹುಮನಬಾದ್, ಒಮ್ಮೆ ಕಂಡ ಕನಸಿನ ಅಭಿವ್ಯಕ್ತಿ ಜಿ ಐ ಓ ಆಗಿದೆ. ಜಿ ಐ ಓ ಯುವತಿಯರು ಮಾದರಿಯಾದ ಮುಸ್ಲಿಮ್ ಮಹಿಳೆಯರಾಗಿ ಹೇಗೆ ಬೆಳೆಯಬೇಕು. ಸಮಾಜಕ್ಕೆ ಹಾಗೂ ಸಮುದಾಯಕ್ಕೆ ಯಾವ ರೀತಿಯಲ್ಲಿ ತಮ್ಮ ಸೇವೆಗಳನ್ನು ಕೊಡಬೇಕು ಎಂದು ತಿಳಿಸಿದರು.

ಜಿ ಐ ಓ ಕರ್ನಾಟಕವು ತನ್ನ ಪ್ರಯಾಣವನ್ನು ನೆನೆಸುವ ಸಲುಗಾಗಿ ಜಿ ಐ ಓ ವಿಶೇಷಾಂಕವನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮೊಹಮ್ಮದ್ ಸಾದ್ ಬೆಳಗಾಮಿ ಅವರು ಬಿಡುಗಡೆ ಮಾಡಿದರು.
ಶಬ್ಬೀರ್ ಅಹಮದ್ ಖಾನ್ ಅವರು ತಮ್ಮ ಭಾಷಣದಲ್ಲಿ, ಸಮಾಜದ ಪುನರ್ ನಿರ್ಮಾಣ ಎಂಬ ವಿಷಯದಡಿ ಮಾತನಾಡಿ, ನಾವು ಇತಿಹಾಸದ ಯುಗವನ್ನು ಅಧ್ಯಯನ ಮಾಡಬೇಕೆಂದು ಮತ್ತು ಆ ಕಾಲದಲ್ಲಿ ಸಮಾಜ ಹೇಗಿತ್ತು ಎಂಬುದನ್ನು ಗಮನಿಸಬೇಕೆಂದು ಹೇಳಿದರು.
“ಮುಸ್ಲಿಂ ಮಹಿಳೆಯರು ಮತ್ತು ಭಾರತೀಯ ಸಮಾಜದಲ್ಲಿ ಅವರ ಪ್ರಾತಿನಿಧ್ಯ” ಎಂಬ ವಿಷಯದಡಿಯಲ್ಲಿ ಸಂವಾದ ನಡೆಯಿತು.

NFGIO ರಾಷ್ಟ್ರೀಯ ಅಧ್ಯಕ್ಷೆ ಸುಮಯ್ಯಾ ರೋಷನ್, ಜಿಐಒ ಮಾಜಿ ರಾಜ್ಯ ಸಲಹಾ ಸಮಿತಿಯ ಸದಸ್ಯೆಯರಾದ ಉಬೈದಾ, ಫರ್ಹಾ ಖಾಲಿದ್, ಫಾರ್ವರ್ಡ್ ಟ್ರಸ್ಟ್, ಕರ್ನಾಟಕದ ಜಂಟಿ ಕಾರ್ಯದರ್ಶಿ ನುಝತ್ ರಜ್ವಿಯವರು ಪ್ಯಾನೆಲಿಸ್ಟರಾಗಿ ಭಾಗವಹಿಸಿದರು ಮತ್ತು ಚರ್ಚೆಯನ್ನು ನೌಶಾಬಾ ಸುಲ್ತಾನಾ ಅವರು ನಿರ್ವಹಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕಿಲಾ ಖಾನಂ, ಅತಿಥಿಯಾಗಿದ್ದ ಖಾನ್ ಮುಬಶಿರಾ ಫಿರ್ದೌಸ್ ಅವರು ಮಾತನಾಡಿದರು. ಆ ನಂತರ ಜಿಐಓ ಕರ್ನಾಟಕದ ವತಿಯಿಂದ ಸಮಾವೇಶದ ರಾಜ್ಯ ತಂಡವನ್ನು ಗೌರವಿಸಲಾಯಿತು.

ಬೆಂಗಳೂರು ನಗರದ ಖ್ಯಾತ ವೈದ್ಯರಾದ ಡಾ. ತಾಹಾ ಮತೀನ್ ಅವರು “Small things big Impact” ಎಂಬ ವಿಷಯದಡಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಂತಹ ಜಮಾಅತ್ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮೊಹಮ್ಮದ್ ಸಾದ್ ಮಾತನಾಡಿ, ಯುವಜನತೆ ವ್ಯಕ್ತಿತ್ವ, ನೈತಿಕತೆ ಮತ್ತು ವ್ಯಕ್ತಿ ಸ್ವಭಾವವನ್ನು ಇಸ್ಲಾಮಿನ ಅನುಸಾರ ರೂಪಿಸಬೇಕು. ತನ್ನ ಸ್ವಭಾವವನ್ನು ಬದಲಾಯಿಸಬೇಕು ಎಂದರು.
ಸಿಸ್ಟರ್ ಝೈನಬಾ ಗಝಾಲಿ ಧನ್ಯವಾದ ಕಾರ್ಯಕ್ರಮವನ್ನು ಮಾಡಿದರು. ಮರಿಯಂ ಉಡುಪಿ, ಜುಫಿಷಾ ನಿಖಾತ್ ಖಾಜಿ, ಆಮಿನಾ ಮುಷೀರಾ, ಆಯೇಶಾ ಸ್ವಾಲೆಹಾ ಕಾರ್ಯಕ್ರಮವನ್ನು ನಿರೂಪಿಸಿದರು.
