ಸಾಗರ ತಾಲೂಕಿನಲ್ಲಿ ಮದ್ಯ ಮಾರಾಟ ಮಳಿಗೆ(ಬಾರ್) 24 ಗಂಟೆಯೂ ತೆರದೇ ಇರುತ್ತದೆ. ಶಾಸಕರ ಹಿಂಬಾಲಕರು ಹಳ್ಳಿ ಹಳ್ಳಿಗೂ ಬಾಕ್ಸ್‌ಗಟ್ಟಲೆ ಮದ್ಯವನ್ನು ಸಾಗಿಸುತ್ತಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಳ್ಳಿ ಹಳ್ಳಿಯಲ್ಲೂ ಅಶಾಂತಿ ಸೃಷ್ಟಿಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೋನಗೋಡು ರತ್ನಾಕರ ದೂರಿದರು.
ಸಾಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ ಅವರು, “ಹಾಲಪ್ಪನವರ ಅಧಿಕಾರದಲ್ಲಿ ನಮ್ಮ ವಿಧಾನಸಭಾಕ್ಷೇತ್ರ ಕುಡುಕರ ತಾಣವಾಗಿದೆ. ಒಮ್ಮೆಲೆ ನನಗೆ ಅಧಿಕಾರ ಕೊಟ್ಟು ನೋಡಿ ಇದನ್ನೆಲ್ಲ ಬದಲಿಸುತ್ತೇನೆಂಬ ಭರವಸೆಯಿಂದ ಅಧಿಕಾರಕ್ಕೆ ಬಂದವರು ಈಗಿನ ಶಾಸಕರು. ಆದರೆ ಈಗ ಮಾಡುತ್ತಿರುವುದೇನು? ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಕುಟುಕಿದ್ದಾರೆ.
“ಅಬಕಾರಿ ಇಲಾಖೆಯ ಭ್ರಷ್ಟಾಚಾರ ಮಿತಿಮೀರಿದೆ. ರಾಜ್ಯದಿಂದ ಹಿಡಿದು ತಾಲೂಕಿನವರೆಗೂ ಇವರದೇ ಹಾವಳಿ ಶುರುವಾಗಿದೆ. ಇದರಿಂದ ಬಡ ಕೂಲಿ ಕಾರ್ಮಿಕರು ಮದ್ಯಪ್ರಿಯರಾಗಿದ್ದಾರೆ. ಇದಕ್ಕೆಲ್ಲ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರ ಕುಮಕ್ಕೇ ಕಾರಣ. ಹಾಗಾಗಿ ಇದನ್ನು ವಿರೋಧಿಸಿದ ಬಾರ್ ಮಾಲೀಕರು ನವೆಂಬರ್ 20ರಂದು ರಾಜ್ಯಾದ್ಯಂತ ಬಾರ್ ಬಂದ್ ಮಾಡಲು ಸಿದ್ಧರಾಗಿದ್ದಾರೆ” ಎಂದರು.
“ಅಬಕಾರಿ ಇಲಾಖೆಯವರು ಇದಕ್ಕೆ ಕಡಿವಾಣ ಹಾಕದೇ ಹೋದರೆ, ಇಂದಿನಿಂದ ಒಂದು ತಿಂಗಳವರೆಗೂ ಕಾಲಾವಕಾಶ ಕೊಟ್ಟು ಸಾರ್ವಜನಿಕ ಹಿತದೃಷ್ಟಿಗಾಗಿ ದಲಿತ ಸಂಘಟನೆಗಳು, ಸ್ವಸಹಾಯ ಸಂಘಗಳು, ಮಹಿಳಾ ಸಂಘಗಳೆಲ್ಲ ಒಗ್ಗೂಡಿ ಶಿವಮೊಗ್ಗದ ಅಬಕಾರಿ ಕಚೇರಿ ಹಾಗೂ ಡಿಸಿ ಕಚೇರಿ ಎದುರು ಧರಣಿ ಕೂರುತ್ತೇವೆ” ಎಂದರು.
“ತಾಲೂಕಿನ ಅಭಿವೃದ್ಧಿಗೆಂದು ಬಂದವರು ಅಬಕಾರಿ ಇಲಾಖೆಯಿಂದ ಹಣ ಲೂಟಿ ಮಾಡುತ್ತಿದ್ದಾರೆ. ಹಾಲಪ್ಪನವರು ತಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ ನಾವೇ ಮಾಡಿದ್ದು ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಲಪ್ಪನವರ ನೇತೃತ್ವದಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಸಾಗರ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತರ ಕ್ಷೇತ್ರವಾಗಿದೆ. ಮುಂದೊಂದು ದಿನ ಅವರೇ ಇದನ್ನೆಲ್ಲ ವಿರೋಧಿಸಿ ಹೋರಾಟಕ್ಕೆ ಇಳಿಯುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೋಟೆಲ್ ಮೇಲೆ ದಾಳಿ: ಬಾಲ ಕಾರ್ಮಿಕನನ್ನು ರಕ್ಷಿಸಿ ಶಾಲೆಗೆ ಸೇರಿಸಿದ ಅಧಿಕಾರಿಗಳು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೋಹನ್ ಕುಮಾರ್, ಮಾಜಿ ಗ್ರಾ ಪಂ ಅಧ್ಯಕ್ಷ ನವೀನ್, ರವಿಗೌಡ, ನೇತ್ರಾವತಿ ಮಂಜುನಾಥ, ಗೌತಮಪುರ ಗ್ರಾ. ಪಂ. ಸದಸ್ಯ ಪರಮೇಶ್, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಕುಮಾರ ಹಾಗೂ ನಾಗರಾಜ ದಾಸಕೊಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಅಮಿತ್ ಆರ್, ಆನಂದಪುರ