ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಪೋಕ್ಸೋ ಪ್ರಕರಣದ ಆರೋಪಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗುವುದು, ಮತಯಾಚಿಸುವುದು ಸಮಾಜಕ್ಕೆ ಅಪಾಯಕಾರಿ ಮತ್ತು ಆಘಾತಕಾರಿ ಸಂದೇಶ ರವಾನಿಸುತ್ತಿದೆ ಎಂದು ಮಹಿಳಾ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವ ಕುರಿತು ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಗೆ ಪತ್ರ ಬರೆಯುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ತಿಳಿಸಿದ್ದಾರೆ.
ಪ್ರಸ್ತುತ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ಅತ್ಯಾಚಾರ ಆರೋಪಿ ಯಡಿಯೂರಪ್ಪ ಪ್ರಚಾರ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಚುನಾವಣೆಗಳಲ್ಲಿ ಪ್ರಚಾರ ಮಾಡುವುದು ಸಮಾಜಕ್ಕೆ ಅಪಾಯವೆಂದು ಹೋರಾಟಗಾರರು ಹೇಳಿದ್ದಾರೆ.
“ಲೈಂಗಿಕ ಕಿರುಕುಳ, ದೌರ್ಜನ್ಯಗಳು ನಡೆದಾಗ ಅನ್ಯಾಯಕೊಳಪಟ್ಟವರು ದೂರು ದಾಖಲಿಸಲು ಮುಂದೆ ಬರುವುದು ತೀರಾ ಕಡಿಮೆ. ಅದರಲ್ಲೂ ಲೈಂಗಿಕ ದೌರ್ಜನ್ಯ ನಡೆಸಿದವರು ಪ್ರಭಾವಿಗಳಾಗಿದ್ದರೆ, ದೌರ್ಜನ್ಯಕ್ಕೆ ತುತ್ತಾದವರು ತಮ್ಮ ಮೇಲಾದ ಕೃತ್ಯ, ಕ್ರೌರ್ಯಗಳ ಬಗ್ಗೆ ಮಾತನಾಡಲು ಹೆದರುವ ಪರಿಸ್ಥಿತಿ ವ್ಯವಸ್ಥೆಯಲ್ಲಿದೆ. ಇಂತಹ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರಭಾವಿ ರಾಜಕಾರಣಿ ಬಿ.ಎಸ್ ಯಡಿಯೂರಪ್ಪರಿಂದ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ತಾಯಿ ದೂರು ನೀಡಲು ಮುಂದೆ ಬಂದಿರುವುದೇ ಒಂದು ಗಟ್ಟಿ ನಡೆ. ಆದರೂ, ಆಕೆಯ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡಿದರು. ಮಾಧ್ಯಮಗಳ ಒತ್ತಡದಿಂದಾಗಿ ದೂರು ದಾಖಲಿಸಿಕೊಳ್ಳಲಾಯಿತು. ಈಗ ಆರೋಪಿಯು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿರುವುದು ಸಮಾಜದ ಮೇಲೆ ಕಟ್ಟ ಪ್ರಭಾವ ಬೀರುತ್ತದೆ” ಎಂದು ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ಆರೋಪಿಸಿದ್ದಾರೆ.
“ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಆದರೆ, ಯಡಿಯೂರಪ್ಪ ಅವರನ್ನು ಬಂಧಿಸಲಾಗಿಲ್ಲ. ಅವರ ಬಂಧನಕ್ಕೆ ಹೈಕೋರ್ಟ್ ವಿನಾಯತಿ ನೀಡಿದೆ. ಅಲ್ಲದೆ, ಆರೋಪಿಯನ್ನು ವೆಂಕ, ನಾಣಿ, ಸೀನ ಅಲ್ಲವೆಂದು ನ್ಯಾಯಾಧೀಶರು ಆಘಾತಕಾರಿ ಹೇಳಿಕೆ ನೀಡಿದ್ದು, ಜಾಮೀನು ನೀಡಿದ್ದಾರೆ. ಆರೋಪಿಯ ಮೇಲೆ ಚಾರ್ಜ್‌ಶೀಟ್ ಕೂಡ ದಾಖಲಾಗಿದೆ. ಆದರೂ, ಆರೋಪಿಯನ್ನು ಬಂಧಿಸಲಾಗಿಲ್ಲ” ಎಂದು ಕಿಡಿಕಾರಿದ್ದಾರೆ.
“ಪೊಲೀಸ್ ತನಿಖೆಯಲ್ಲಿ ಪ್ರಕರಣ ಸಾಬೀತಾಗಿದ್ದು, ಚಾರ್ಜ್‌ಶೀಟ್ ಸಲ್ಲಿಸಿಕೆಯಾಗಿರುವ ಓರ್ವ ಪ್ರಭಾವಿ ಆರೋಪಿ ಈಗ ಸಮಾಜದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳು ದೂರು ನೀಡಲು, ತಮ್ಮ ಮೇಲಾದ ಕ್ರೌರ್ಯದ ಬಗ್ಗೆ ಮಾತನಾಡಲು ಹಿಂಜರಿಯುವ ಸಾಧ್ಯತೆಗಳು ಹೆಚ್ಚಾಗುತ್ತವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಯಡಿಯೂರಪ್ಪ ಪ್ರಕರಣದಲ್ಲಿ ಮಹಿಳಾ ಆಯೋಗವು ಕೂಡಲೇ ಮಧ್ಯಪ್ರವೇಶಿಸಬೇಕು. ಹೈಕೋರ್ಟಿನ ಜೊತೆಗೆ ಅಗತ್ಯವಿರುವ ಪ್ರಕ್ರಿಯೆಗಳನ್ನು ನಡೆಸಬೇಕು. ಒಂದು ರಾಷ್ಟ್ರೀಯ ಪಕ್ಷವು ಆರೋಪ ಸಾಬೀತಾಗಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಆರೋಪಿಗೆ ಸಾರ್ವಜನಿಕ ಜವಾಬ್ದಾರಿಗಳನ್ನು ನೀಡಬಾರದೆಂದು ಸೂಚನೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ, “ಹೈಕೋರ್ಟ್ ಜಾಮೀನು ನೀಡಿದೆ. ಅದರ ಕುರಿತು ಮಾತನಾಡುವ ಹಾಗಿಲ್ಲ. ಚುನಾವಣೆಯ ಪ್ರಚಾರದಿಂದ ನಿರ್ಬಂಧ ಹೇರುವ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಬೇಕು. ಜಾಮೀನು ರದ್ದುಗೊಳಿಸುವ ಕುರಿತು ಗೃಹ ಇಲಾಖೆಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಪತ್ರ ಬರೆಯಲಾಗುತ್ತದೆ” ಎಂದು ಹೇಳಿದ್ದಾರೆ.
ದೂರು ನೀಡಿದ ನಿಯೋಗದಲ್ಲಿ ಮಹಿಳಾ ಹೋರಾಟಗಾರ್ತಿ ಅಖಿಲಾ ವಿದ್ಯಾಸಂದ್ರ, ಮಲ್ಲಿಗೆ, ನಜ್ಮಾ ನಜೀರ್, ಕಾವ್ಯ ಅಚ್ಚುತ್ ಇದ್ದರು.