ಬೀದರ್ ಜಿಲ್ಲೆಯ ರೈತರು ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿ ಬೆಳೆಯೂ ಒಂದಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹತ್ತಿ ಇಳುವರಿ ಕಡಿಮೆ, ಬೆಲೆ ಕುಸಿತ, ಉತ್ಪನ್ನ ದುಬಾರಿ ಹಾಗೂ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲದಿರುವುದರಿಂದ ರೈತ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ.
ಬೀದರ್ ಜಿಲ್ಲೆಯ ಬೀದರ್ ಮತ್ತು ಔರಾದ್ ತಾಲೂಕಿನಲ್ಲಿ ರೈತರು ಮಾತ್ರ ಹೆಚ್ಚಾಗಿ ಹತ್ತಿ ಬೆಳೆಯುತ್ತಾರೆ. ಕಪ್ಪು ಮತ್ತು ಕೆಂಪು ಜಮೀನಿನಲ್ಲಿ ಹತ್ತಿ ಬೆಳೆ ಹೆಚ್ಚು ಇಳುವರಿ ಬರುತ್ತದೆ ಎನ್ನುವ ಕಾರಣಕ್ಕೆ ಬೆಳೆಯುತ್ತಾರೆ. ಆದರೆ, ಹತ್ತಿ ಬೆಳೆದ ಜಿಲ್ಲೆಯ ರೈತರಿಗೆ ಹತ್ತಿ ಮಾರಾಟಕ್ಕೆ ಎಲ್ಲಿಯೂ ಕಾಟನ್ ಮಿಲ್ ಇಲ್ಲದ್ದರಿಂದ ಖರೀದಿ ಕೇಂದ್ರವೂ ತೆರೆದಿಲ್ಲ. ರೈತರಿಗೆ ಬಿಡಿಸಿದ ಹತ್ತಿ ಮಾರಾಟಕ್ಕೆ ನೆರೆಯ ತೆಲಂಗಾಣದ ಕಡೆಗೆ ಮುಖ ಮಾಡುವುದು ಅನಿವಾರ್ಯ ಎಂಬಂತಾಗಿದೆ.
ʼಜಿಲ್ಲೆಯಲ್ಲಿ ಹತ್ತಿ ಬೆಳೆಯುವವರ ಸಂಖ್ಯೆ ಕಡಿಮೆ ಇದೆ. 2024 25 ನೇ ಸಾಲಿನಲ್ಲಿ ಜಿಲ್ಲೆಯ 1,600 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಇತ್ತು. ಈ ಪೈಕಿ 1,600 ಹೆಕ್ಟೇರ್ ಖುಷ್ಕಿ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಸಾಧಿಸಲಾಗಿದೆ. ಬೀದರ್ ತಾಲೂಕಿನಲ್ಲಿ 500 ಹೆಕ್ಟೇರ್ ಹಾಗೂ ಔರಾದ್, ಕಮಲನಗರ ಅವಳಿ ತಾಲೂಕಿನಲ್ಲಿ 1,100 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಜಿಲ್ಲೆಯ ಔರಾದ್ ತಾಲೂಕಿನಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ಕ್ಷೇತ್ರವಿರುವುದು ಗಮನಾರ್ಹ ವಿಷಯʼ ಎಂದು ಬೀದರ್ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಮಾಹಿತಿ ನೀಡಿದ್ದಾರೆ.

ʼಕಳೆದ ಐದು ವರ್ಷಗಳಿಂದ ಹತ್ತಿ ಬೆಳೆಯುತ್ತಿದ್ದೇನೆ. ನೆರೆಯ ತೆಲಂಗಾಣದ ಕಂಗಟಿಯಿಂಂದ ಬೀಜ ಖರೀದಿಸಿ ತಂದು ಜೂನ್ ಮೊದಲ ವಾರದಲ್ಲಿ 2 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದೇನೆ. ಕ್ರಿಮಿನಾಶಕ, ರಸಗೊಬ್ಬರ, ಕಳೆ ತೆಗೆಯುವುದು ಹಾಗೂ ಹತ್ತಿ ಬಿಡಿಸುವ ಕೂಲಿ ಸೇರಿ ಒಟ್ಟು ₹50 ಸಾವಿರ ವೆಚ್ಚ ಮಾಡಿದ್ದೇನೆʼ ಎಂದು ಔರಾದ್ ತಾಲೂಕಿನ ಚಿಂತಾಕಿ ಗ್ರಾಮದ ರೈತ ಗೋವಿಂದ ಕೋಳಿ ಹೇಳುತ್ತಾರೆ.
ಸದ್ಯ ಮಾರುಕಟ್ಟೆಯಲ್ಲಿ ಹತ್ತಿ ಪ್ರತಿ ಕ್ವಿಂಟಲ್‌ಗೆ ₹7 ರಿಂದ ₹8 ಸಾವಿರ ಬೆಲೆ ಇದೆ. ಪ್ರತಿ ಎಕರೆಗೆ 10 ಕ್ಷಿಂಟಲ್‌ವರೆಗೆ ಇಳುವರಿ ಬರುವ ನಿರೀಕ್ಷೆಯಿದೆ. ಹತ್ತಿ ಬೆಳೆಯಲು ಖರ್ಚು ಜಾಸ್ತಿ ಲಾಭಾಂಶ ಕಡಿಮೆಯಾಗಿದೆ, ಮುಂದೇನು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಸರ್ಕಾರ ಹತ್ತಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರೋತ್ಸಾಹಿಸಬೇಕುʼ ಎಂದು ಹೇಳಿದರು.
ತೆಲಂಗಾಣಕ್ಕೆ ಹತ್ತಿ ಮಾರಾಟ :
ಜಿಲ್ಲೆಯಲ್ಲಿ ಮೊದಲಿನಿಂದಲೂ ಹತ್ತಿ ಖರೀದಿ ಕೇಂದ್ರಗಳೇ ಇಲ್ಲ. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ಮಿಲ್ ಮಾಲಿಕರು ರೈತರ ಬಳಿ ಬಂದು ಖರೀದಿಸುತ್ತಿದ್ದರು. ಈಗ ನಾವೇ ಅನಿವಾರ್ಯವಾಗಿ ನೆರೆಯ ತೆಲಂಗಾಣದ ಮಿಲ್‌ಗೆ ಹತ್ತಿ ಮಾರಾಟ ಮಾಡುತ್ತಿದ್ದೇವೆ. ಹಣಕಾಸಿನ ತೊಂದರೆಯಿಂದ ವ್ಯಾಪಾರಿಗಳು ಹೇಳಿದಷ್ಟು ಕೊಡುವ ಪರಿಸ್ಥಿತಿ ಇದೆ. ಇದರಿಂದ ತುಂಬಾ ನಷ್ಟ ಅನುಭವಿಸುತ್ತಿದ್ದೇವೆ. ಹವಾಮಾನ ವೈಪರೀತ್ಯದಿಂದ ಹತ್ತಿ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದೆ, ಒಮ್ಮೆ ಹತ್ತಿ ಬಿಡಿಸಿದ ಮೇಲೆ ಇನ್ನೊಂದು ಬಾರಿ ಹತ್ತಿ ಕೈಗೆ ಬರುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಕೊರಗು ರೈತರದ್ದು.
ʼಚಿಂತಾಕಿಯಿಂದ 10 ಕಿ.ಮೀ. ದೂರದ ತೆಲಂಗಾಣದ ಕಂಗಟಿ ಪಟ್ಟಣದಲ್ಲಿ ಬೀಜ ಖರೀದಿ, ರಸಗೊಬ್ಬರ ಮಾಡುತ್ತೇವೆ. ಅಲ್ಲಿ ಹತ್ತಿ ಮಿಲ್ ಕೂಡ ಇರುವುದ್ದರಿಂದ ಎಲ್ಲ ವ್ಯವಹಾರಕ್ಕೆ ಅಲ್ಲಿಗೆ ತೆರಳುತ್ತೇವೆ. ನಮ್ಮ ತಾಲೂಕಿನಲ್ಲಿ ಎಲ್ಲಿಯೂ ಹತ್ತಿ ಖರೀದಿ ಕೇಂದ್ರ ತೆರೆಯದೆ ಹತ್ತಿ ಬೆಳೆಗಾರರಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಸೋಯಾ ಬೆಳೆಗೆ ಹೋಲಿಸಿದರೆ ಹತ್ತಿ ಲಾಭದಾಯಕ ಬೆಳೆಯಾಗಿದೆ. ಆದರೆ, ನಿರೀಕ್ಷಿತ ಇಳುವರಿ ಕುಂಠಿತವಾಗಿದೆ, ಈ ಬಾರಿ ಬೆಲೆಯೂ ಕಡಿಮೆಯಿದೆʼ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಪ್ರೋತ್ಸಾಹ ನೀಡಲಿ :
ʼಕಳೆದ ಬಾರಿ ಸೋಯಾ ಬೆಲೆ ಕುಸಿತಗೊಂಡ ಕಾರಣ ಮೊದಲ ಬಾರಿ ಹತ್ತಿ ಬೆಳೆ ಬೆಳೆಯಲು ನಿರ್ಧರಿಸಿ ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಬೀಜ ಖರೀದಿಸಿ ತಂದು 2 ಎಕರೆ ಹತ್ತಿ ಬೆಳೆದಿದ್ದೇನೆ. ಹತ್ತಿ ಬೆಳೆ ಕಟಾವು ಮಾಡುವವರೆಗೂ ಖರ್ಚು ಅಧಿಕವಾಗಿದೆ. ಇದೀಗ ಹತ್ತಿ ಬಿಡಿಸಲು ಕಾರ್ಮಿಕರ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಕ್ಷಿಂಟಲ್ ಹತ್ತಿಗೆ ₹10 ಸಾವಿರ ಬೆಲೆ ಇತ್ತು. ಈ ವರ್ಷ ಕೇವಲ ₹6 ರಿಂದ ₹7 ಸಾವಿರ ಆಸುಪಾಸಿನಲ್ಲಿದೆ. ಇಳುವರಿ ಕಡಿಮೆಯಿದೆ, ಬೆಲೆಯೂ ಕುಸಿದಿದೆ. ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಹತ್ತಿ ಬೆಳೆಗಾರರು ಪರದಾಡುವಂತಾಗಿದೆʼ ಎಂದು ರೈತ ನಾಗನಾಥ ಮೋರ್ಗೆ ಅಳಲು ತೋಡಿಕೊಳ್ಳುತ್ತಾರೆ.
ʼಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಹತ್ತಿ ಉತ್ಪಾದನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಜಾಗ್ರತೆ ವಹಿಸಬೇಕಾಗಿದೆ. ಹತ್ತಿ ಬೆಳೆಗಿರುವ ಸಮಸ್ಯೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳನ್ನು ಪರಿಹರಿಸಲು ಮುಂದಾಬೇಕು. ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ ಎಲ್ಲೆಡೆ ಬೆಳೆಯುತ್ತಿದ್ದರು. ತದನಂತರ ಕ್ರಮೇಣವಾಗಿ ಅದು ಸಂಪೂರ್ಣ ಮರೆಯಾಗಿದೆ. ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಮುಂದೆ ಹತ್ತಿ ಬೆಳೆಯೂ ಆ ಪಟ್ಟಿಗೆ ಸೇರಿದರೂ ಅಚ್ಚರಿಯಿಲ್ಲ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆʼ ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಂದು ಪತ್ರ | ಮಾದಿಗ-ವಾಲ್ಮೀಕಿಗಳಲ್ಲಿ ಬಂಧುತ್ವ ಬೆಳೆಯಲಿ
ಈ ಕುರಿತು ಔರಾದ್ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧೂಳಪ್ಪ ಅವರು ʼಈದಿನ.ಕಾಮ್ʼ ಜೊತೆಗೆ ಮಾತನಾಡಿ, ʼಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಪ್ರಮಾಣ ಕಡಿಮೆಯಿದೆ. ಹೀಗಾಗಿ ಮಿಲ್, ಖರೀದಿ ಕೇಂದ್ರ ಮೊದಲಿನಿಂದಲೂ ಇಲ್ಲ. ಹತ್ತಿ ಬೆಳೆದ ರೈತರು ಸಾಮಾನ್ಯವಾಗಿ ನೆರೆ ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ಹತ್ತಿ ಬೆಳೆಯುವವರ ಸಂಖ್ಯೆ ಹೆಚ್ಚಳವಾದರೆ ಖರೀದಿ ಕೇಂದ್ರ ಆರಂಭಿಸಬಹುದುʼ ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.