ಗನ್ ತೋರಿಸಿ, ಕೊಲ್ಲುವ ಬೆದರಿಕೆ ಹಾಕಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಹರಿಯಾಣದ ಸರ್ಕಾರಿ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಿ ಹರಿಯಾಣ ಸರ್ಕಾರ ಆದೇಶಿಸಿದೆ.
ಹರಿಯಾಣದ ಹಿಸಾರ್ ಜಿಲ್ಲೆಯ ಹಂಸಿಯಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿದ್ದ ಅಧಿಕಾರಿಯನ್ನು ಇತ್ತೀಚೆಗೆ, ಚಂಡೀಗಢದಲ್ಲಿರುವ ಮುಖ್ಯ ಕಾರ್ಯದರ್ಶಿ ಕಚೇರಿಗೆ ನಿಯೋಜಿಸಲಾಗಿತ್ತು. ಅವರನ್ನು ಇದೀಗ ಅಮಾನತು ಮಾಡಲಾಗಿದೆ. ಅಮಾನತು ಆದೇಶದಲ್ಲಿ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಮುಖ್ಯ ಕಾರ್ಯದರ್ಶಿಯ ಪೂರ್ವಾನುಮತಿ ಇಲ್ಲದೆ ಕಚೇರಿಯಿಂದ ಯಾವುದೇ ಅಧಿಕಾರಿ ಹೊರಬರುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಸಾಜ್ ಮಾಡುವ ಸಮಯದಲ್ಲಿ ಅಧಿಕಾರಿಯು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. “ಅಧಿಕಾರಿಯು ತಮ್ಮ ಅಧಿಕೃತ ನಿವಾಸದಲ್ಲಿ ಮಸಾಜ್ ಮಾಡಲು ತಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಅವರು ನನ್ನೊಂದಿಗೆ ಈ ಹಿಂದೆಯೇ ಅಸಭ್ಯವಾಗಿ ವರ್ತಿಸಿದ್ದಾರೆ. ನಾನು ಪ್ರತಿರೋಧ ವ್ಯಕ್ತಪಡಿಸಿದ್ದೆ. ಆದರೆ, ಇತ್ತೀಚೆಗೆ, ತನಗೆ ಬಂದೂಕು ತೋರಿಸಿ, ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದಾರೆ. ಜಾತಿ ನಿಂದನೆಯನ್ನೂ ಮಾಡಿದ್ದಾರೆ. ಸಾಕ್ಷ್ಯಕ್ಕಾಗಿ ಅವರು ದೌರ್ಜನ್ಯವನ್ನು ವಿಡಿಯೋ ಮಾಡಿಕೊಂಡಿದ್ದೇನೆ” ಎಂದು ಮಹಿಳೆ ವಿವರಿಸಿದ್ದಾರೆ.
ಸಂತ್ರಸ್ತೆಯು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ದೂರಿನ ಪ್ರತಿ ಮತ್ತು ವಿಡಿಯೋವನ್ನು ಚಂಡೀಗಢ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮತ್ತು ಹರಿಯಾಣ ಮುಖ್ಯಮಂತ್ರಿಗೆ ಕಳಿಸಿದ್ದಾರೆ.