ಚಿಕ್ಕಮಗಳೂರು ನಗರಸಭೆ ಹಾಗೂ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ವತಿಯಿಂದ ಚಿಕ್ಕಮಗಳೂರು ನಗರಸಭೆ ಕಛೇರಿ ಸಭಾಂಗಣದಲ್ಲಿ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ, “ಜನರ ಆರೋಗ್ಯ ರಕ್ಷಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವವಾದುದು. ತಮ್ಮ ಕಾಯಕ ನಿಷ್ಠೆಯಿಂದ ಸ್ವಚ್ಛ ಪರಿಸರ ನಿರ್ಮಿಸುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಮನೆ ವಾತಾವರಣ ಸ್ವಚ್ಚವಾಗಿರಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸ್ವಚ್ಛತೆಗೆ ಆದ್ಯತೆ ನೀಡಿ ಸುತ್ತಲಿನ ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ತಮ್ಮ ಮನೆಯ ಸ್ವಚ್ಛತೆ ಜೊತೆಗೆ ನಗರ ಹಾಗೂ ಸಮಾಜದ ಸ್ವಚ್ಛತೆಗೆ ಕಾರಣರಾಗಿರುವ ಪೌರ ಕಾರ್ಮಿಕರು ಆಧುನಿಕ ಸಮಾಜದ ಅಂಗವಾಗಿದ್ದಾರೆ ಎಂದು ತಿಳಿಸಿದರು.

ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕಾರ್ಯವನ್ನು ಪ್ರೀತಿಸಬೇಕು. ಕೆಲಸಗಳಲ್ಲಿ ಮೇಲು, ಕೀಳು ಇಲ್ಲ. ಶ್ರದ್ದೆ ನಿಷ್ಠೆಯಿಂದ ಮಾಡಿದ ಪ್ರತಿಯೊಂದು ಕೆಲಸದಲ್ಲು ಯಶಸ್ಸು ಕಾಣಬಹುದು. ಸಮಾಜ ಸುಧಾರಕರು, ವಚನಕಾರರು ಕಾಯಕದ ಕುರಿತು ಹಲವಾರು ವಚನಗಳಲ್ಲಿ ವರ್ಣಿಸಿದ್ದಾರೆ. ಸೈನಿಕರು ದೇಶದ ಜನರ ಜೀವ ರಕ್ಷಿಸಲು ಶತ್ರುಗಳೆದುರು ಹೋರಾಡಿದರೆ, ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಿಸಲು ಶ್ರಮ ವಹಿಸುತ್ತಾರೆ. ಸಮಾಜದ ಉತ್ತಮ ಆರೋಗ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಕಾರ್ಯಕ್ರಮದಲ್ಲಿ ಶಾಸಕರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, “ಸರ್ಕಾರವು ವಿವಿಧ ಯೋಜನೆಗಳ ಮೂಲಕ ಪೌರ ಕಾರ್ಮಿಕರ ಆರೋಗ್ಯವನ್ನು ರಕ್ಷಿಸಲು ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಜೊತೆಗೆ ಜೀವ ವಿಮೆಯನ್ನು ನೀಡುತ್ತದೆ. ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಪೌರ ಕಾರ್ಮಿಕರು ನಗರದ ಪೋಷಕರಿದ್ದಂತೆ, ನಗರವು ಸುಂದರ ಹಾಗೂ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಕಾರಣ. ನಗರದ ಸ್ವಾಸ್ಥ್ಯ ಕಾಪಾಡುವ ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವುದು ನಮ್ಮ ಕರ್ತವ್ಯ. ಪೌರ ಕಾರ್ಮಿಕರಿಗಾಗಿ ವಿಶೇಷ ಭತ್ಯೆ, ಪ್ರತಿವರ್ಷ ಸಂಕಷ್ಟ ಭತ್ಯೆ, ಬೆಳಗಿನ ಉಪಹಾರ ಭತ್ಯೆ, ಜೀವ ವಿಮೆಯಂತಹ ಹಲವಾರು ಯೋಜನೆಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು” ಎಂದರು.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ರೂ.7000 ವಿಶೇಷ ಭತ್ಯೆ, ವರ್ಷ ತಲಾ ರೂ. 2000 ಸಂಕಷ್ಟ ಭತ್ಯೆ, ಹತ್ತು ಲಕ್ಷಕ್ಕೂ ಮೇಲ್ಪಟ್ಟ ಜೀವ ವಿಮೆ, ಪ್ರತಿ ದಿನ ರೂ. 30 ಉಪಾಹಾರ ಭತ್ಯೆ, ಉಚಿತ ಆರೋಗ್ಯ ತಪಾಸಣೆ, ಸ್ವಂತ ನಿವೇಶನ ಹೊಂದಿದ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಅಡಿ ಸ್ವಂತ ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿದ್ದೀರಾ?ಹಾಸನ | ಮುಂದಿನ ವಾರ ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್‌ಸ್ಟೆಬಲ್ ಹತ್ಯೆ
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷೆ ಅನು ಮಧುಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಯ್ಯ, ಪೌರ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಸಿ.ಬಿ ನಾಗರಾಜ್. ಪೌರ ಕಾರ್ಮಿಕರ ಸಂಘದ ಶಾಖಾ ಅಧ್ಯಕ್ಷ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
