ಮೂರು ವರ್ಷಗಳ ಹಿಂದೆ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಮೂವರು ಕಾಮುಕ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮಂಗಳೂರಿನಲ್ಲಿ ಕೃತ್ಯೆ ಎಸಗಿದ್ದ ಜಯಸಿಂಗ್, ಮುಕೇಶ್ ಸಿಂಗ್ ಮತ್ತು ಮನೀಶ್ ಟಿರ್ಕಿ ಎಂಬ ಅಪರಾಧಿಗಳಿಗೆ ದಕ್ಷಿಣ ಕನ್ನಡ ಸೆಷನ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2021ರ ನವೆಂಬರ್ 21ರಂದು ಮಂಗಳೂರು ಹೊರವಲಯದ ರಾಜ್ಟೈಲ್ಸ್ ಫ್ಯಾಕ್ಟರಿಯಲ್ಲಿ ಮೇಲೆ ನಾಲ್ವರು ಅಪರಾಧಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಧ್ಯಪ್ರದೇಶ ಮೂಲದ ಜಯಸಿಂಗ್, ಮುಕೇಶ್ ಸಿಂಗ್ ಹಾಗೂ ಜಾರ್ಖಂಡ್ ಮೂಲದ ಮನೀಶ್ ಟಿರ್ಕಿಯನ್ನು ಪೊಲೀಸರು ಬಂಧಿಸಿದ್ದರು. ನಾಲ್ಕನೇ ಆರೋಪಿ ಮನೀಮ್ ಸಿಂಗ್ ಎಂಬಾತ ಇನ್ನೂ ಪತ್ತೆಯಾಗಿಲ್ಲ.
ಬಾಲಕಿಯ ಪೋಷಕರು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿಯೇ ಈ ನಾಲ್ವೂ ಅಪರಾಧಿಗಳು ಕೂಡ ಕೆಲಸ ಮಾಡುತ್ತಿದ್ದರು. ಬಾಲಕಿಯ ಕುಟುಂಬದವರ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಪೋಷಕರು ಇಲ್ಲದ ಸಮಯದಲ್ಲಿ ಬಾಲಕಿಗೆ ಸಿಹಿತಿಂಡಿ ಕೊಡಿಸುವುದಾಗಿ ಕರೆದೊಯ್ದು ಕೃತ್ಯವೆಸಗಿ, ಕೊಲೆ ಮಾಡಿದ್ದರು.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 (ಬಿ), 366 (ಎ), 376 ಡಿಬಿ, 377, 302 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುಮಾರು 30 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, ಪ್ರಕರಣ ಸಾಬೀತಾಗಿದೆ.
ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮನು ಕೆ.ಎಸ್ ಅವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, 1.2 ಲಕ್ಷ ದಂಡವನ್ನೂ ವಿಧಿಸಿದ್ದು, ಅದನ್ನು ಬಾಲಕಿಯ ಪೋಷಕರಿಗೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.