ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕು ಹೊನ್ನಾಪುರ ಗ್ರಾಮವು ಹಲವು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಕುರಿತು ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮುಖ್ಯವಾಗಿ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹೊನ್ನಾಪುರ ಗ್ರಾಮದಲ್ಲಿ ಒಟ್ಟು 800 ರಿಂದ 1000 ಮನೆಗಳಿದ್ದು, ಮೂರು ಖಾಸಗಿ ಆಸ್ಪತ್ರೆಗಳಿವೆ. ಆದರೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯೇ ಇಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳು ಹತ್ತಿರದ ಮುಗದ ಅಥವಾ ಧಾರವಾಡ ಪಟ್ಟಣಕ್ಕೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಅದರಲ್ಲೂ ಮನೆಗೊಂದು ಶೌಚಾಲಯಗಳು ಇರುವುದು ಅತಿ ವಿರಳ. ಗ್ರಾಮದಲ್ಲಿ ಒಟ್ಟು ಮೂರು ಅಂಗನವಾಡಿಗಳಿದ್ದು, ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತದೆ. ಇಂತಹ ಗ್ರಾಮ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದು ಈವರೆಗೂ ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲೀ ನಮ್ಮನ್ನು ಕಣ್ಣೆತ್ತಿ ನೋಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಾಪುರ ಗ್ರಾಮದಲ್ಲಿ ಲಿಂಗಾಯತ ಸಮುದಾಯ ದೊಡ್ಡ ಸಮುದಾಯವಾಗಿದ್ದು, ವಾಲ್ಮೀಕಿ, ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಣಬರ, ಮುಸ್ಲಿಂ, ಜೈನ, ಬ್ರಾಹ್ಮಣರು ಹೀಗೆ ಎಲ್ಲ ಸಮುದಾಯದವರು ವಾಸವಾಗಿದ್ದಾರೆ. ಧಾರವಾಡದಿಂದ ಅಳ್ನಾವರದ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿಯೇ ಈ ಗ್ರಾಮವು ಕಾಣಸಿಗುತ್ತದೆ.
ಇಲ್ಲಿ ವಾಸವಿರುವ ನಾವು ಮೂಲತಃ ಘಟಪ್ರಭಾ ಡ್ಯಾಮ್ ನಿರ್ಮಾಣದ ಸಮಯದಲ್ಲಿ ಅಂದರೆ 1975ರಲ್ಲಿ ಈ ಕಡೆಗೆ ವಲಸೆ ಬಂದೆವು. ಅಲ್ಲಿಂದ ಕಳೆದ 50 ವರ್ಷಗಳಿಂದ ನಾವಿಲ್ಲಿ ವಾಸ ಮಾಡುತ್ತಿದ್ದೇವೆ. ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಅಭಿವೃದ್ಧಿಯಾಗಿದೆ.
ಗ್ರಾಮವು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ಚರಂಡಿ ವ್ಯವಸ್ಥೆ ಮಾಡಿಸಿದ್ದರೂ ಕೂಡ ಈವರೆಗೆ ಉಪಯೋಗಕ್ಕೆ ದೊರಕಿಲ್ಲ. ಕೊಳಚೆ ನೀರೆಲ್ಲ ಮನೆಯೊಳಗೆ ಮನೆಯ ಅಂಗಳದಲ್ಲಿಯೇ ನುಗ್ಗಿ ಬರುತ್ತದೆ. ಅಲ್ಲಲ್ಲಿ ಸೊಳ್ಳೆಗಳ ಕಾಟ, ಗಬ್ಬು ವಾಸನೆ, ಕಾಂಕ್ರೀಟ್ ರಸ್ತೆ ಮಾಡಿಸಿದ್ದರೂ ಎಲ್ಲ ಕಿತ್ತು ಹೋಗಿವೆ. ಹೀಗೆ ಗ್ರಾಮದ ತುಂಬೆಲ್ಲ ರಸ್ತೆಯ ಸಮಸ್ಯೆಗಳಿಗಂತೂ ಲೆಕ್ಕವೇ ಇಲ್ಲ. ಗ್ರಾಮ ಪಂಚಾಯತಿಯನ್ನು ಪ್ರಶ್ನಿಸಿದರೆ; ‘ನಾವೇನು ಮಾಡುವುದು? ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಗ್ರಾಮದ ನಿವಾಸಿ ಐ ಬಿ ಕಲಾಜ್ ಆರೋಪಿಸುತ್ತಾರೆ.

ಈ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತವ್ವನವರ ಪತಿ ಭೀಮಪ್ಪ ಚಾಕ್ರಟೀಸ್ ಮಾತನಾಡಿ, ಈಗಾಗಲೇ ಗ್ರಾಮದ ಸ್ವಚ್ಛತೆಗೆ ಎನ್.ಆರ್.ಜಿಗೆ ಅರ್ಜಿ ಹಾಕಿದ್ದಾರೆ. ಸರ್ಕಾರದಿಂದ ಅನುದಾನ ಹೆಚ್ಚು ಬರತೊಡಗಿದರೆ; ಕಾಮಗಾರಿಗಳು ಚಾಲ್ತಿಗೆ ಬರುತ್ತವೆ. ಇನ್ನು ನಮ್ಮ ಗ್ರಾಮದಲ್ಲಿ ಪ್ರಾಥಮಿಕ ಆಸ್ಪತ್ರೆ ಇಲ್ಲ. ನಾವು ಚಿಕಿತ್ಸೆಗಾಗಿ ಧಾರವಾಡದ ಕಡೆಗೇ ಹೋಗಬೇಕು. ಗ್ರಾಮ ಪಂಚಾಯಿತಿಯಿಂದಲೂ ಆದಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಕ್ಷುಲ್ಲಕ ಕಾರಣಕ್ಕೆ ರಸ್ತೆ ಮಧ್ಯೆಯೇ ಗುಂಡಿನ ಕಾಳಗ: ಬಿಜೆಪಿ ಮುಖಂಡನ ಪುತ್ರ ಭಾಗಿ?
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳುವುದೇ? ಅನುದಾನ ನೀಡುತ್ತಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡುವುದೇ? ಎಂದು ಕಾದು ನೋಡಬೇಕಿದೆ.
