ಪೊಲೀಸರು ಅಪರಾಧಗಳನ್ನು ತಡೆಗಟ್ಟುವುದು ಮತ್ತು ಈಗಾಗಲೇ ಅಪರಾಧ ನಡೆದಿದ್ದರೆ ತನಿಖೆಯನ್ನು ಮಾಡಿ ಅಪರಾಧಿಗಳನ್ನು ಹಿಡಿಯುವುದು. ಸಮಾಜದ ಶಾಂತಿ ಕಾಪಾಡಲು ಮತ್ತು ತಳಮಟ್ಟದಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಪೊಲೀಸರು ಅಹೋರಾತ್ರಿ ಕೆಲಸ ಮಾಡಬೇಕು. ಗಲಭೆ ನಿಯಂತ್ರಣ, ಸಾರ್ವಜನಿಕ ಭದ್ರತೆ ಮತ್ತು ತನಿಖೆಗೆ ಸಂಬಂಧಿಸಿದ ಸೇವೆಗಳಿಗೆ ಜವಾಬ್ದಾರಿ ಆಗಿರುತ್ತಾರೆ. ಅವರ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿಯಿದ್ದರೂ ಕೆಲಸದ ಸ್ಥಳ, ಅಂದರೆ ಪೊಲೀಸ್ ಠಾಣೆಗಳು ಕೆಲಸ ಮಾಡಲು ಉತ್ತಮ ಸ್ಥಿತಿಯಲ್ಲಿಲ್ಲ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕೆಲಸ ಮಾಡುವುದು ಕಷ್ಟಕರವಾಗಿದೆ. ಠಾಣೆಗೆ ನೀರಿನ ಸಂಪರ್ಕ ಇಲ್ಲ, ಠಾಣೆಯಲ್ಲಿ ಅಗತ್ಯ ಸಿಬ್ಬಂದಿಗಳ ಕೊರತೆ ಸಹ ಇದೆ. ಕೊರತೆ ನೀಗಲು ಹೊತ್ತು ಗೊತ್ತಿಲ್ಲದೆ ಪೊಲೀಸರು ಕೆಲಸ ಮಾಡ ಬೇಕಾಗುತ್ತದೆ. ಕುಡಿಯಲಾಗಲಿ ಇಲ್ಲವೇ ಶೌಚಾಲಯಕ್ಕಾಗಲಿ ನೀರಿನ ಸಂಪರ್ಕವೇ ಇಲ್ಲಿನ ಪೊಲೀಸ್ ಸಿಬ್ಬಂದಿಗಳಿಗಿಲ್ಲ.
ಠಾಣೆಯಲ್ಲಿ ಸಿಬ್ಬಂದಿಗೆ ಇರುವ ಶೌಚಾಲಯದಲ್ಲಿ ನೀರು ಇಲ್ಲ, ವಿಶ್ರಾಂತಿ ಕೊಠಡಿಗಳಿಲ್ಲ. ಹೀಗಾಗಿ ಇರುವ ಶೌಚಾಲಯವನ್ನು ಉಪಯೋಗಿಸಲು ಸಾಧ್ಯವಾಗದೆ ಪಕ್ಕದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಉಪಯೋಗಿಸುತ್ತಿದ್ದಾರೆ. ಇದರಿಂದ ಕೆಲಸದ ಜೊತೆಗೆ ಮಾನಸಿಕ ಒತ್ತಡ ಹೆಚ್ಚಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಬಂದೋಬಸ್ತ್ ಕಾರ್ಯ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಯಾವ ಸಿಬ್ಬಂದಿಯೂ ಈ ಠಾಣೆಗೆ ಬರಲು ಇಷ್ಟಪಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ಪೊಲೀಸರು ಹೇಗೆ ಕೆಲಸ ಮಾಡಬೇಕು ಎಂಬುದೇ ಸ್ಥಳೀಯರ ಪ್ರಶ್ನೆ.
ಈ ಬಗ್ಗೆ ಎಂ ವಿ ಕೃಷ್ಣ ಎಂಬುವವರು ಮಾತನಾಡಿ, ಕೆಲಸದ ನಿಮಿತ್ತ ಮಳವಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದೆ. ಶೌಚಾಲಯಕ್ಕೆ ಹೋದಾಗ ನೀರೇ ಇರಲಿಲ್ಲ. ಗಬ್ಬು ವಾಸನೆ ಹೊಡೆಯುತಿತ್ತು. ಇಲ್ಲಿರುವ ಸಿಬ್ಬಂದಿಗಳು ಇಲ್ಲಿ ಹೇಗೆ ಕೆಲಸ ಮಾಡುತ್ತಾರೆ ಅಂತ ಯೋಚಿಸಿದಾಗ, ನನಗೇ ದಿಗಿಲಾಯ್ತು. ಪೊಲೀಸ್ ಠಾಣೆಗಳ ಕತೆಯೇ ಈ ರೀತಿ ಆದರೆ ಸಾರ್ವಜನಿಕರ ಶೌಚಾಲಯಗಳ ಸ್ಥಿತಿ ಹೇಗಿರಬೇಡ” ಎಂದು ಪ್ರಶ್ನಿಸಿದ್ದಾರೆ.

“ಜನರು ಪೊಲೀಸ್ ಠಾಣೆಗಳಿಗೆ ಬರುತ್ತಾರೆ. ಪೊಲೀಸರ ಕುಂದುಕೊರತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನಮ್ಮ ಹಾಗೆ ಮನುಷ್ಯರು. ನಮ್ಮ ನಡುವೆಯೆ ಕೆಲಸ ಮಾಡಬೇಕಾದವರು. ನಮ್ಮ ರಕ್ಷಣೆಗೆ ಇರುವವರು ಅಂತ ತಿಳಿಯದೆ ಬರೀ ದೂಷಣೆ ಮಾಡುತ್ತಾರೆಯೇ ಹೊರತು ಇಂತ ವಿಚಾರಗಳಿಗೆ ಯಾರೂ ಕೂಡ ಹೆಚ್ಚು ಗಮನ ಕೊಡುವುದಿಲ್ಲ. ಪೊಲೀಸರಿಗೆ ಕೂಡ ಮೂಲಭೂತ ಸೌಕರ್ಯ ಕೊಡುವಂತೆ ಆಗ್ರಹಿಸುವುದು ಜನರ ಜವಾಬ್ದಾರಿ ಕೂಡ ಹೌದು” ಎಂದರು.
ಕರ್ನಾಟಕ ಜನಶಕ್ತಿಯ ಪೂರ್ಣಿಮಾ ಈ ದಿನ.ಕಾಮ್ ಜೊತೆಗೆ ಮಾತನಾಡಿ, ಒಂದು ಪ್ರಕರಣದ ದೂರು ದಾಖಲಿಸಲು ಮಳವಳ್ಳಿ ಪಟ್ಟಣ ಠಾಣೆಗೆ ಹೋದಾಗ ಅಲ್ಲಿಯ ಪೊಲೀಸ್ ಠಾಣೆಯ ವ್ಯವಸ್ಥೆ ನೋಡಿ ಬಹಳ ಬೇಸರವಾಯಿತು. ಠಾಣೆಗಳಲ್ಲಿ ಕೆಲಸ ಮಾಡುವ ಪ್ರತಿ ಅಧಿಕಾರಿಗಳು ಕೂಡಾ ಮನುಷ್ಯರೆ. ಅವರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲವಾದರೆ ಹೇಗೆ ಕೆಲಸ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿಯೂ ಹೆಣ್ಣು ಮಕ್ಕಳು ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಶೌಚಾಲಯ, ನೀರಿನ ವ್ಯವಸ್ಥೆ ಮೂಲಭೂತ ಸೌಕರ್ಯಗಳ ಅಗತ್ಯವಿಲ್ಲವೇ?” ಎಂದು ಕೇಳಿದ್ದಾರೆ.
“ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಶೌಚಕ್ಕೆ ಬೇರೆ ಜಾಗ ಹುಡುಕಿ ಹೋಗಬೇಕು ಅಂದರೆ ನಾಚಿಕೆಗೇಡಿನ ಸಂಗತಿ. ಅವರು ಮುಟ್ಟಾದ ಸಂದರ್ಭಗಳನ್ನು ಹೇಗೆ ಠಾಣೆಯಲ್ಲಿ ನಿಭಾಯಿಸಬೇಕು? ನಮ್ಮ ಸಮಾಜದಲ್ಲಿ ಶಾಂತಿ ಕಾಪಾಡುವವರ ಹಾಗೂ ಕಾನೂನಿನ ರಕ್ಷಣೆಗೆ ಕೆಲಸ ಮಾಡುವವರ ಪಾತ್ರ ದೊಡ್ಡದಿರುತ್ತದೆ. ಸರಿಯಾಗಿ ಕಾರ್ಯ ನಿರ್ವಹಿಸಲು ಅವರಿಗೆ ಬೇಕಾದ ಮೂಲ ಸವಲತ್ತುಗಳು ಕೂಡಾ ಬಹಳ ಅಗತ್ಯ. ಇದು ಬರೀ ಮಳವಳ್ಳಿ ಪೊಲೀಸ್ ಠಾಣೆಯ ಸ್ಥಿತಿ ಮಾತ್ರವಲ್ಲ, ಬಹುತೇಕ ಎಲ್ಲಾ ಪೊಲೀಸ್ ಠಾಣೆಗಳ ಕತೆಯೂ ಹೌದು” ಎಂದರು.
ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಹೌದು ವ್ಯವಸ್ಥೆ ಸರಿ ಇಲ್ಲ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿಯೂ ಇಲ್ಲ. ಸದ್ಯಕ್ಕೆ ನೀರು ಬರುತ್ತಿಲ್ಲ ಅದಕ್ಕೆ ಅನಾನೂಕೂಲ ಆಗಿದೆ ಎಂದು ಸಮಜಾಯಿಷಿ ಕೊಡುತ್ತಾರೆ. ಹೌದು ನಮಗೆ ಅನಾನೂಕೂಲವಾಗುತ್ತಿದೆ ಎಂದು ಹೇಳಿಕೊಳ್ಳುವಂತಹ ವಾತಾವರಣ ಕೂಡ ಇಲ್ಲ. ಪ್ರತಿ ಪೊಲೀಸ್ ಠಾಣೆಯೂ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು, ಕಾನೂನಿನ ರಕ್ಷಣೆ ನೀಡಲು ಇರುವ ಸ್ಥಳ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗ ಸಮಾಜದ ಕೆಲಸ ಮಾಡುವ ಸೇವಕರು. ಅವರ ಅನಾನೂಕೂಲತೆಗಳ ಬಗ್ಗೆ ಹೇಳದಿದ್ದರು. ಅದನ್ನೆಲ್ಲ ಕಣ್ಣಾರೆ ಕಂಡ ಮೇಲೆ ಅವರ ಪರವಾಗಿ ಧ್ವನಿ ಎತ್ತಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.
ಜಿಲ್ಲಾಡಳಿತ, ಸರ್ಕಾರಗಳು ಮತ್ತು ಇಲಾಖೆಯ ಅಧಿಕಾರಿಗಳು ಅನಾನುಕೂಲಗಳನ್ನು ಸರಿಪಡಿಸಲು ಮುಂದಾಗಬೇಕು. ಹಾಲಿ ಶಾಸಕರು ಮತ್ತು ಸಂಸದರು ಈ ವಿಚಾರವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಚುನಾವಣೆಗಳ ಸಂದರ್ಭದಲ್ಲಿ ಪಕ್ಷಗಳ ಜಟಾಪಟಿ ನಡೆಯುವಾಗ ಯಾವುದೇ ಅಹಿತರ ಘಟನೆ ನಡೆಯದಂತೆ ಮನೆ ಮಠ ಬಿಟ್ಟು ಪೊಲೀಸರು ಕೆಲಸ ಮಾಡುತ್ತಾರೆ. ಗೆದ್ದ ನಂತರ ಆಳಿಕೆ ಸುಭದ್ರ ರೀತಿಯಲ್ಲಿ ನಡೆಯಲು, ಸಮಾಜದ ಶಾಂತಿ ಕಾಪಾಡಲು, ಸೆಲೆಬ್ರಿಟಿಗಳಿಗಾಗಲಿ ಇಲ್ಲವೇ ರಾಜಕಾರಣಿಗಳಿಗಾಗಲಿ ರಕ್ಷಣೆ ಕೊಡಲು, ಅಪರಾಧಗಳನ್ನು ತಡೆಗಟ್ಟಲು ಪ್ರತಿ ಹಂತ ಹಂತದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಇರಲೇಬೇಕು.

ಪೊಲೀಸರು ಹಗಲು ರಾತ್ರಿ ಕೆಲಸವನ್ನು ನಿರ್ವಹಿಸುತ್ತಾರೆ. ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವುದು ಬಹಳ ಮುಖ್ಯವಲ್ಲವೇ? ಅವರ ಕುಂದು ಕೊರತೆಗಳನ್ನು ಕೇಳುವುದು ಸರ್ಕಾರಗಳ ಹೊಣೆಗಾರಿಕೆ ಅಲ್ಲವೇ? ಕಾನೂನುಗಳನ್ನು ಕಾಯಲು ಹೊರಟವರಿಗೆ ಸರಿಯಾದ ವ್ಯವಸ್ಥೆ ಇಲ್ಲವೆಂದ ಮೇಲೆ ಜನ ಸಾಮಾನ್ಯರ ಬದುಕನ್ನು ಹೇಗೆ ಸರಿ ಮಾಡುತ್ತಾರೆ? ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಶಾಸಕರು ಹಾಗೂ ಸಂಸದರು ಈ ಕೂಡಲೇ ಎಲ್ಲಾ ಪೋಲಿಸ್ ಠಾಣೆಗಳಿಗೂ ಭೇಟಿ ನೀಡಬೇಕು. ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿ ಶೌಚಾಲಯ, ಕುಡಿಯುವ ನೀರು ಕಾರ್ಯನಿರ್ವಹಿಸಲು ಬೇಕಾದ ಮೂಲಭೂತ ಸೌಲಭ್ಯ ಗಳನ್ನು ಕಲ್ಪಿಸುವ ಕಡೆಗೆ ಗಮನ ವಹಿಸಬೇಕು ಎಂದು ಎಂ.ವಿ.ಕೃಷ್ಣ, ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆಯ ಪೂರ್ಣಿಮಾ, ಶಿಲ್ಪಾ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ವ್ಯಾಪಾರಿ ಮೇಲೆ ಲೇವಾದೇವಿದಾರನಿಂದ ಹಲ್ಲೆ: ಎಫ್ಐಆರ್ ದಾಖಲಿಸಲು ಪೊಲೀಸರಿಂದ ಮೀನಮೇಷ!
ಪೊಲೀಸರು ಸಮಾಜದಲ್ಲಿ ಶಾಂತಿ ಕಾಪಾಡುವ ಮತ್ತು ಕಾನೂನಿನ ಕಾವಲು ಕಾಯುವ ಮಹತ್ತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆ ಸೇರಿ ಹಲವೆಡೆ ಸೌಲಭ್ಯಗಳ ಕೊರತೆಯಿಂದ ಪೊಲೀಸರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನೀರಿನ ಸಂಪರ್ಕವಿಲ್ಲದೆ ಶೌಚಕ್ಕೆ, ಕುಡಿಯುವ ನೀರಿಗೆ ತೊಂದರೆ ಆಗಿದೆ. ವಿಶ್ರಾಂತಿ ಕೊಠಡಿ ಮುಂತಾದ ಮೂಲಭೂತ ಸೌಲಭ್ಯಗಳಿಲ್ಲದೆ ಅವರ ಕಾರ್ಯ ನಿರ್ವಹಣೆಗೆ ಅಡಚಣೆ ಉಂಟಾಗುತ್ತಿದೆ. ಈ ಪರಿಸ್ಥಿತಿ ಕೇವಲ ಮಳವಳ್ಳಿಯಲ್ಲದೇ ಬಹುತೇಕ ಪೊಲೀಸ್ ಠಾಣೆಗಳಲ್ಲಿಯೂ ಇದೆ.
ಅಧಿಕಾರಿಗಳು, ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು, ಗೃಹ ಇಲಾಖೆ ಸೇರಿದಂತೆ ಸರ್ಕಾರವು ತಕ್ಷಣವೇ ಈ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ಪೊಲೀಸ್ ಸಿಬ್ಬಂದಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
